ಅಲ್ಪಸಂಖ್ಯಾತರ ಶೇ 4 ರ ಮೀಸಲಾತಿ 8ಕ್ಕೆ ಹೆಚ್ಚಿಸಲು ಜಿಲ್ಲಾ ವಕ್ಫ್ ಬೋರ್ಡ್ ಮನವಿ
ತುಮಕೂರು : ರಾಜ್ಯದ ಅಲ್ಪಸಂಖ್ಯಾತರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಈಗಿರುವ ಶೇ4ರ ಮೀಸಲಾತಿಯನ್ನು ಶೇ8 ಕ್ಕೆ ಹೆಚ್ಚಿಸಲು ಹಾಗೂ ಸರಕಾರದ ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಮಕ್ಕಳ ವಿದ್ಯಾರ್ಥಿವೇತನಕ್ಕಾಗಿ 5000 ಕೋಟಿ ರೂಗಳನ್ನು ಮೀಸಲೀಡಬೇಕು ಹಾಗೂ ಇನ್ನಿತರ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿ, ಅವರ ಮೇಲೆ ಒತ್ತಡ ಹಾಕಲು ವಿಧಾನಪರಿಷತ್ ಸದಸ್ಯರಾದ ಸಿ.ಎಂ.ಇಬ್ರಾಹಿಂ ಅವರಿಗೆ ತುಮಕೂರು ಅಲ್ಪಸಂಖ್ಯಾತ ಸಮುದಾಯದ ಪರವಾಗಿ ಜಿಲ್ಲಾ ವಕ್ಫ್ ಬೋರ್ಡ್ ಮಾಜಿ ಅಡಳಿತಾಧಿಕಾರಿ ನವೀದ್ ಬೇಗ್ ಹಾಗೂ ಹಾಜಿ ಸೈಯದ್ ನೂರುಲ್ಲಾ ಮುತ್ತುವಲ್ಲಿ ಅವರುಗಳು ಸಲ್ಲಿಸಿದರು.
ಖಾಸಗಿ ಕಾರ್ಯಕ್ರಮವೊಂದಲ್ಲಿ ಭಾಗವಹಿಸಲು ತುಮಕೂರಿಗೆ ಆಗಮಿಸಿದ್ದ ವೇಳೆ ಜಿಲ್ಲೆಯ ಮುಸ್ಲಿಂರ ಪರವಾಗಿ ಅಲ್ಪಸಂಖ್ಯಾತರ ಶೈಕ್ಷಣಿಕ, ಅರ್ಥಿಕ, ಔದ್ಯೋಗಿಕ ಉನ್ನತ್ತಿಗೆ ಸಂಬಂಧಿಸಿದ 10 ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ನವೀದ್ ಬೇಗ್ ಮತ್ತು ಹಾಜಿ ನೂರುಲ್ಲಾ ಮುತ್ತುವಲ್ಲಿ ಅವರುಗಳು ಸಲ್ಲಿಸಿದರು.
ಪ್ರಸ್ತುತ ಅಲ್ಪಸಂಖ್ಯಾತರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ4 ರ ಮೀಸಲಾತಿ ದೊರೆಯುತ್ತಿದೆ. ರಾಜ್ಯದ ಶೇಖಡವಾರು ಜನಸಂಖ್ಯೆಯಲ್ಲಿ ಅಲ್ಪಸಂಖ್ಯಾತರ ಸಂಖ್ಯೆ ಶೇ18ರಷ್ಟಿದೆ.ಲಭ್ಯವಿರುವ ಮೀಸಲಾತಿ ಪ್ರಮಾಣದಿಂದ ಅಷ್ಟೊಂದು ದೊಡ್ಡ ಪ್ರಮಾಣದ ಲಾಭ ಜನಾಂಗಕ್ಕೆ ಆಗುತ್ತಿಲ್ಲ.ಈ ಹಿನ್ನೆಲೆಯಲ್ಲಿ ಶೇ4 ರಿಂದ 8ಕ್ಕೆ ಹೆಚ್ಚಿಸಿದರೆ ಉದ್ಯೋಗ,ಶಿಕ್ಷಣದಲ್ಲಿ ಹೆಚ್ಚಿನ ಅವಕಾಶಗಳು ಲಭ್ಯವಾಗಲಿವೆ ಎಂದು ಮನವಿಯಲ್ಲಿ ಕೋರಿದ್ದಾರೆ.
ರಾಜ್ಯದ ಬಜೆಟ್‌ನಲ್ಲಿ ಈ ಹಿಂದಿನ ಸರಕಾರ 1500 ಕೋಟಿ ರೂಗಳನ್ನು ಮೀಸಲಿರಿಸಿತ್ತು.ಆದರೆ ಪ್ರಸ್ತುತ ಸರಕಾರ 150 ಕೋಟಿ ರೂಗಳಿಗೆ ಇಳಿಸಿದೆ.ಶೇ15ರಷ್ಟು ಜನರಿಗೆ ಯಾವುದೇ ಅರ್ಥಿಕ,ಶೈಕ್ಷಣಿಕ ಸಾಲ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಾಗುತ್ತಿಲ್ಲ.ಲಕ್ಷಾಂತರ ಅರ್ಜಿಗಳು ಬಂದರೆ,ಕೆಲವೇ ಸಾವಿರ ಅರ್ಜಿಗಳಿಗೆ ಮಾತ್ರ ಸೌಲಭ್ಯಗಳು ದೊರೆಯುತ್ತಿವೆ.ಈ ಹಿನ್ನೆಲೆಯಲ್ಲಿ 2021-22ನೇ ರಾಜ್ಯ ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಶೈಕ್ಷಣಿಕ ಅಭಿವೃದ್ದಿಗೆ 5000 ಕೋಟಿ ರೂಗಳನ್ನು ಮೀಸಲಿಡಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಅಲಸ್ಪಂಖ್ಯಾತರ ಮಕ್ಕಳ ಶೈಕ್ಷಣಿಕ ಮತ್ತು ಸಮಗ್ರ ಅಭಿವೃದ್ದಿಗೆ ಪ್ರತ್ಯೇಕ ವಿಶ್ವವಿದ್ಯಾಲಯದ ಅಗತ್ಯವಿದೆ. ಹಾಗಾಗಿ ಸರಕಾರ ಮುಂದಿನ ಬಜೆಟ್‌ನಲ್ಲಿ ಅಲ್ಪಸಂಖ್ಯಾತರು, ಅದರಲ್ಲಿಯೂ ಮುಸ್ಲಿಂರ ಹೆಸರಿನಲ್ಲಿ ಒಂದು ವಿಶ್ವವಿದ್ಯಾಲಯವನ್ನು ತೆರೆದರೆ ಹೆಚ್ಚಿನ ಅನುಕೂಲವಾಗಲಿದೆ.ಈಗಾಗಲೇ ದೇಶದ ಉತ್ತರ ಪ್ರದೇಶದಲ್ಲಿ ಅಲೀಗಡ ವಿಶ್ವವಿದ್ಯಾಲಯ ಪ್ರಪಂಚದಲ್ಲಿಯೆ ಹೆಸರು ಪಡೆದಿದೆ.ಹೊಸ ವಿಶ್ವವಿದ್ಯಾಲಯದಿಂದ ಮಕ್ಕಳಲ್ಲಿ ಶೈಕ್ಷಣಿಕ ಪೈಪೊಟಿ ಹೆಚ್ಚಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಅಲ್ಪಸಂಖ್ಯಾತರ ಮಕ್ಕಳು ವ್ಯಾಪಾರ,ವ್ಯವಹಾರ ನಡೆಸಲು ಅನುಕೂಲವಾಗುವಂತೆ ಶೇ50ರ ರಿಯಾಯತಿಯಲ್ಲಿ ಸಾಲ ಒದಗಿಸಲು ಕೆಎಂಡಿಸಿ ಅಡಿಯಲ್ಲಿ 5000 ಕೋಟಿ ರೂಗಳ ಅನುದಾನ ಒದಗಿಸಬೇಕೆಂದು ಕೋರಿದ್ದು, ಸಣ್ಣ, ಮದ್ಯಮ ಮತ್ತು ಬೃಹತ್ ಉದ್ಯಿಮೆಗಳನ್ನು ತೆರೆಯಲು ಅನುಕೂಲವಾಗುವಂತೆ ಸರಕಾರ ಈ ಸಾಲಿನ ಬಜೆಟ್‌ನಲ್ಲಿ ಅನುವು ಮಾಡಿಕೊಡಬೇಕೆಂಬುದು ಅಲ್ಪಸಂಖ್ಯಾತ ಸಮುದಾಯದ ಬೇಡಿಕೆಯಾಗಿದೆ.ರಾಷ್ಟ್ರೀಯ ಒಟ್ಟಾರೆ ಜಿಡಿಪಿಗೆ ಸಣ್ಣ ಮತ್ತು ಮದ್ಯಮ ಉದ್ದಿಮೆಗಳಿಂದ ಹೆಚ್ಚಿನ ಆದಾಯ ಹರಿದು ಬರಲಿದೆ. ಬಹುತೇಕ ಬೀದಿ ಬದಿ, ಸಣ್ಣಪುಟ್ಟ ಕಿರಾಣಿ, ಬಟ್ಟೆ ಅಂಗಡಿ ಇಟ್ಟುಕೊಂಡು ವ್ಯವಹಾರ ನಡೆಸುತ್ತಿರುವ ಇವರನ್ನು ಉತ್ತೇಜಿಸುವುದರಿಂದ ದೇಶದ ಜಿಡಿಪಿಗೆ ಅನುಕೂಲವಾಗಲಿದೆ ಎಂಬುದು ಅಲ್ಪಸಂಖ್ಯಾತರ ಮುಖಂಡರ ಅಭಿಪ್ರಾಯವಾಗಿದೆ.
ಕೇಂದ್ರ ಸರಕಾರ 2023ಕ್ಕೆ ದೇಶದಲ್ಲಿ ಎಲ್ಲರಿಗೂ ಸೂರು ಒದಗಿಸುವ ಗುರಿ ಹೊಂದಿದೆ. ಆದರೆ ರಾಜ್ಯದಲ್ಲಿ ಸೂರಿಲ್ಲದೆ ಇರುವ ಅಲ್ಪಸಂಖ್ಯಾತರ ಸಂಖ್ಯೆ ಹೆಚ್ಚಿದೆ.ಹಾಗಾಗಿ ನಿವೇಶನ ಮತ್ತು ವಸತಿ ನಿರ್ಮಾಣಕ್ಕೆ ಶೇ50ರ ರಿಯಾಯಿತಿಯಲ್ಲಿ ಅಲ್ಪಸಂಖ್ಯಾತರಿಗೆ ಅವಕಾಶ ಕಲ್ಪಿಸಬೇಕಾಗಿದೆ.ಹಾಗೆಯೇ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಪೊಲೀಸ್ ಕೇಸುಗಳನ್ನು ಹಾಕಲಾಗುತ್ತಿದೆ.ಇದಕ್ಕೆ ಅಮಾಯಕರು ಅಲ್ಪಸಂಖ್ಯಾತರು ಬಲಿಯಾಗುತ್ತಿದ್ದು,ಇದನ್ನು ತಡೆ ಹಿಡಿಯಬೇ ಕೆಂಬುದು ನಮ್ಮಗಳ ಮನವಿಯಾಗಿದೆ ಎಂದು ಕೋರಲಾಗಿದೆ.
ಭಾರತ ವಿವಿಧೆತೆಯಲ್ಲಿ ಏಕತೆಯನ್ನು ಕಾಣಬಹುದಾದ ಏಕೈಕ ರಾಷ್ಟ್ರ.ಇಲ್ಲಿ ಎಲ್ಲಾ ಧರ್ಮಗಳಿಗೂ ಸ್ವಾತಂತ್ರ ಕಲ್ಪಿಸಲಾಗಿದೆ. ಇದನ್ನು ಸಂರಕ್ಷಿಸಿಕೊಂಡು ಹೋಗುವ ನಿಟ್ಟಿನಲ್ಲಿ ಸರಕಾರ ಮುಂದಾಗಬೇಕಾಗಿದೆ. ಸಂವಿಧಾನದ ಆಶಯದಂತೆ ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ ನೀಡುವುದರಿಂದ ದೇಶದಲ್ಲಿ, ಶಾಂತಿ ನೆಲಸಲಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಸರಕಾರ ಅಲ್ಪಸಂಖ್ಯಾತರ ಅಭಿವೃದ್ದಿಗೆಂದು ಹಲವಾರು ಯೋಜನೆಗಳನ್ನು ತಂದರೂ ಅವುಗಳನ್ನು ಕೊನೆಯ ವ್ಯಕ್ತಿಗೆ ತಲುಪುವಲ್ಲಿ ವಿಫಲವಾಗಿವೆ. ಹಾಗಾಗಿ ಇವುಗಳ ಮೇಲೆ ನಿಗಾವಹಿಸಲು, ಮೇಲುಸ್ತುವಾರಿ ಸಮಿತಿ ರಚಿಸುವುದು ಸೂಕ್ತ. ಈ ನಿಟ್ಟಿನಲ್ಲಿ ಸರಕಾರ ಮುಂದಾಗಬೇಕಾಗಿದೆ. ಅಲ್ಲದೆ ವಕ್ಫ್ ಬೋರ್ಡ್ನ ಆಸ್ತಿಗಳು ಉಳ್ಳುವರ ಪಾಲಾಗಿದ್ದು, ಇದನ್ನು ರಕ್ಷಿಸುವ ಹೊಣೆ ಸರಕಾರದ್ದಾಗಿದೆ. ಈ ನಿಟ್ಟಿನಲ್ಲಿ ಸರಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಹಾಗೂ ತುಮಕೂರು ಹಲವಾರು ಕ್ರೀಡೆಗಳಿಗೆ ಹೆಸರು ವಾಸಿಯಾಗಿದ್ದು,ಇದನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರಕಾರ ತುಮಕೂರು ಜಿಲ್ಲೆಯಲ್ಲಿ ಕ್ರೀಡಾ ನಗರವಾಗಿ ಘೋಷಿಸಬೇಕು.ಈಗಾಗಲೇ ಈ ಸಂಬಂಧ ಈ ಹಿಂದಿನ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು.ಇದರ ಅನ್ವಯ 2018-19ನೇ ಸಾಲಿನ ಬಜೆಟ್‌ನಲ್ಲಿ ಕ್ರೀಡಾಹಬ್ ಮಾಡುವುದಾಗಿ 2000 ಕೋಟಿ ರೂಗಳನ್ನು ಘೋಷಣೆ ಮಾಡಿತ್ತು. ಇದರ ಭಾಗವಾಗಿ ತುಮಕೂರಿನ ಮಹಾತ್ಮಗಾಂಧಿ ಕ್ರೀಡಾಂಗಣ 100 ಕೋಟಿ ರೂಗಳಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣವಾಗಿ ರೂಪಗೊಳ್ಳುತಿದ್ದು, ಇನ್ನೂ ಹೆಚ್ಚಿನ ಅನುಕೂಲ ಕಲ್ಪಿಸಬೇಕೆಂಬುದು ತುಮಕೂರಿನ ಜನತೆಯ ಒತ್ತಾಯವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮನವಿ ಸ್ವೀಕರಿಸಿದ ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ 2021-22ನೇ ಬಜೆಟ್‌ಗೂ ಮುನ್ನ ಮುಖ್ಯಮಂತ್ರಿಗಳನ್ನು ಭೇಟಿಯಾಗಿ, ಅಲ್ಪಸಂಖ್ಯಾತರ ಮುಖಂಡರ ನಿಯೋಗ ಕರೆದುಕೊಂಡು ಹೋಗಿ, ಸದರಿ ಬೇಡಿಕೆಗಳ ಕುರಿತು ಮನವರಿಕೆ ಮಾಡಿಕೊಡಲಾಗುವುದು. ಸರಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ, ಯಾವ ಪಕ್ಷ ನನ್ನ ಮನವಿಗೆ ಸ್ಪಂದಿಸಲಿದೆ ಆ ಪಕ್ಷದ ಜೊತೆ ಸೇರಿ ಹೋರಾಟ ನಡೆಸುತ್ತೇನೆ ಎಂದು ಭರವಸೆ ನೀಡಿದರು.
ಈ ವೇಳೆ ನಿವೃತ್ತ ಡಿವೈಎಸ್ಪಿ ಕೆ.ಎಂ.ಆರೀಫ್‌ವುಲ್ಲಾ,ನಿವೃತ್ತ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಯು.ಐ.ಖಲೀಲ್ ಅಹಮದ್ ಷರೀಫ್, ನಿವೃತ್ತ ಜಿಲ್ಲಾ ವಕ್ಫ್ ಅಧಿಕಾರಿ ಮಹಮೊದ್ ಅಶೀಫ್‌ವುಲ್ಲಾ, ಟೂಡಾ ಮಾಜಿ ಅಧ್ಯಕ್ಷ ಸುಲ್ತಾನ್ ಮೊಹಮದ್, ಜಿಲ್ಲಾ ವಕ್ಪ್ ಸಲಹಾ ಸಮಿತಿ ಅಧ್ಯಕ್ಷ ಫಯಾಜ್ ಅಹಮದ್,ವಕೀಲರಾದ ಜಪ್ರುಲ್ಲಾಖಾನ್,ಖಾಜಾ ಮೋಹಿದ್ದೀನ್ ಮತ್ತಿತರರು ಉಪಸ್ಥಿತರಿದ್ದರು.