ಮಧುಗಿರಿ ತಾಲ್ಲೂಕಿನ 12 ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಗಳಲ್ಲಿ ಗೋದಾಮು ನಿರ್ಮಾಣ : ಆರ್ ರಾಜೇಂದ್ರ
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಂದ ತಾಲ್ಲೂಕಿಗೆ 148 ಕೋಟಿ ಸಾಲ ಮಂಜೂರು
ಮಧುಗಿರಿ : ನಬಾರ್ಡ್ ಯೋಜನೆಯಡಿಯಲ್ಲಿ ತಾಲ್ಲೂಕಿನ 12 ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಗಳಲ್ಲಿ ಗೋದಾಮು ನಿರ್ಮಿಸಲು ಪ್ರಸ್ಥಾವನೆ ಸಲ್ಲಿಸಲಾಗಿದ್ದು, ಅದರಲ್ಲಿ ಎರಡು ಸಹಕಾರ ಸಂಘಗಳಿಗೆ ಅನುಮೋದನೆ ದೊರೆತಿದೆ ಎಂದು ರಾಷ್ಟ್ರೀಯ ಕ್ರಿಬ್ಕೋ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಆರ್ ರಾಜೇಂದ್ರ ತಿಳಿಸಿದ್ದಾರೆ.
ತಾಲ್ಲೂಕಿನ ದೊಡ್ಡೇರಿ ಹೋಬಳಿ ಸಿಂಗ್ರಾವತ್ತನಹಳ್ಳಿಯಲ್ಲಿ ಸಜ್ಜೆಹೊಸಹಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ವತಿಯಿಂದ ನೂತನ ಗೋದಾಮುಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವತಿಯಿಂದ 600 ಕೋಟಿ ಕೃಷಿ ಸಾಲ ನೀಡಲಾಗಿದ್ದು, ಅದರಲ್ಲಿ ಮಧುಗಿರಿ ತಾಲ್ಲೂಕಿಗೆ 148 ಕೋಟಿ ಸಾಲ ನೀಡಲಾಗಿದೆ ಎಂದರು.
ಕೇವಲ 10 ಗುಂಟೆ ಜಮೀನು ಇರುವವರಿಗೂ ಕನಿಷ್ಠ 25 ಸಾವಿರ ರೂ ಸಾಲ ನೀಡಲಾಗಿದೆ. ಹೆಚ್ಚು ಹೆಚ್ಚು ರೈತರಿಗೆ ಕೃಷಿಗಾಗಿ ಕೆಸಿಸಿ ಸಾಲ ನೀಡಲು ಪಹಣಿ ಹೊಂದಿರುವ ಎಲ್ಲಾ ರೈತರಿಗೆ ಪಕ್ಷ ಭೇದ ಮರೆತು ಸಾಲ ನೀಡಲಾಗುತ್ತದೆ. ಅಭಿವೃದ್ದಿಯಲ್ಲಿ ಮತ್ತು ಸಾಲ ವಿತರಣೆಯಲ್ಲಿ ರಾಜಕೀಯ ಬೇಡ ಎಂದರು. ತಾಲ್ಲೂಕಿನ 615 ಗ್ರಾಮ ಪಂಚಾಯಿತಿ ಸದಸ್ಯರ ಪೈಕಿ 465 ಕ್ಕೂ ಹೆಚ್ಚು ಕಾಂಗ್ರೆಸ್ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದು. ತಾವುಗಳು ಒಗ್ಗಟ್ಟಾಗಿ ಮುಂದಿನ ದಿನಗಳಲ್ಲಿ ನಡೆಯಲಿರುವ ವಿಧಾನಪರಿಷತ್ ಚುನಾವಣೆಯಲ್ಲಿ ಆಕಾಂಕ್ಷಿಯಾಗಿದ್ದು, ನನ್ನನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಅದೇ ರೀತಿ 2023 ರ ಚುನಾವಣೆಯಲ್ಲಿ ಒಗ್ಗಟ್ಟಾಗಿ ಕೆ.ಎನ್.ರಾಜಣ್ಣನವರನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ.ರಾಜಣ್ಣ ಮಾತನಾಡಿ, ಪಹಣಿ ಹೊಂದಿರುವ ಪ್ರತಿಯೊಬ್ಬರಿಗೆ ಡಿಸಿಸಿ ಬ್ಯಾಂಕ್ ವತಿಯಿಂದ ಕೃಷಿ ಸಾಲ ನೀಡಲಾಗುವುದು. 2018 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡರುಗಳು ಕಾರ್ಯಕರ್ತರುಗಳು ಮೈಮರೆತಿದ್ದರಿಂದ ಆ ಚುನಾವಣೆಯಲ್ಲಿ ರಾಜಣ್ಣನವರಿಗೆ ಸೋಲಾಯಿತು. ಆದ್ದರಿಂದ 2023 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಮುಖಂಡರುಗಳು, ಕಾರ್ಯಕರ್ತರುಗಳು ಒಗ್ಗಟ್ಟಾಗಿ ಕೆ.ಎನ್.ರಾಜಣ್ಣನವರನ್ನು ಗೆಲ್ಲಿಸುವಂತೆ ಮನವಿ ಮಾಡಿ ಕೆ.ಎನ್.ರಾಜಣ್ಣ ಗೆದ್ದರೆ ಮಧುಗಿರಿ ಜಿಲ್ಲೆಯಾಗುವುದರಲ್ಲಿ ಸಂಶಯವಿಲ್ಲ ಎಂದರು.
ತುಮಕೂರು ಡಿಸಿಸಿ ನಿರ್ದೇಶಕ ಬಿ.ನಾಗೇಶ್‌ಬಾಬು, ರಾಜ್ಯ ಸಹಕಾರ ಮಹಾಮಂಡಲ ಮಾಜಿ ಅಧ್ಯಕ್ಷ ಎನ್.ಗಂಗಣ್ಣ, ವಿ.ಎಸ್.ಎಸ್.ಎನ್ ಅಧ್ಯಕ್ಷ ಚಿಕ್ಕೀರಪ್ಪ, ಸಜ್ಜೇಹೊಸಹಳ್ಳಿ ಗ್ರಾ.ಪಂ.ಅಧ್ಯಕ್ಷರಾದ ಪುಟ್ಟಲಕ್ಷ್ಮಮ್ಮ, ಉಪಾದ್ಯಕ್ಷರಾದ ಹನುಮಂತರಾಯಪ್ಪ, ಡಿ.ಹೆಚ್.ನಾಗರಾಜ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಚಿನ್ನಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಪ್ರಸನ್ನಕುಮಾರ್, ನಾಗರಾಜಪ್ಪ, ಸೋಮಲಿಂಗಪ್ಪ, ಹಿಮಾಚಲಾ, ನಜೀರ್, ಸಿದ್ದಗಂಗಪ್ಪ ಬಡವನಹಳ್ಳಿ, ದೊಡ್ಡೇರಿ, ದಬ್ಬೇಗಟ್ಟ ವಿಎಸ್‌ಎಸ್‌ಎನ್ ಅಧ್ಯಕ್ಷರುಗಳು, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕಗಳಾದ ನರಸಿಂಹಮೂರ್ತಿ, ರಾಮಕೃಷ್ಣ, ಸೀತಾರಾಮು, ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಎಸ್‌ಡಿಕೆ ವೆಂಕಟೇಶ್, ರಂಗನಾಥ, ದೇವರಾಜು ಮತ್ತಿತರರು ಹಾಜರಿದ್ದರು.