ಬಿ.ಎಸ್.ವೈ ಆಪ್ತ ಉಮೇಶ್ ಮನೆ ಮೇಲೆ ಐಟಿ ದಾಳಿ, ಮಹತ್ವದ ದಾಖಲೆಗಳ ಶೋಧ
ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ಉಮೇಶ್ ಸೇರಿದಂತೆ ರಾಜ್ಯದಲ್ಲಿ ಐವತ್ತು ಕಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಶೋಧ ನಡೆಸುತ್ತಿದ್ದಾರೆ. ತೆರಿಗೆ ವಂಚನೆ ಮತ್ತು ಅಕ್ರಮ ಆದಾಯ ಗಳಿಕೆ ಕುರಿತು ಖಚಿತ ಮಾಹಿತಿ ಆಧರಿಸಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಬೆಂಗಳೂರಿನ 50 ಕಡೆ ಏಕ ಕಾಲಕ್ಕೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಶೋಧ ನಡೆಸುತ್ತಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ಸಹಾಯಕ ಉಮೇಶ್ ಅವರ ರಾಜಾಜಿನಗರದ ರಾಮಮಂದಿರ ಮನೆ ಮೇಲೆ ದಾಳಿ ನಡೆದಿದೆ. ವೃತ್ತಿಯಲ್ಲಿ ಬಿಎಂಟಿಸಿ ಚಾಲಕನಾಗಿದ್ದ ಉಮೇಶ್ ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ಸಹಾಯಕನಾಗಿ ನಿಯೋಜನೆ ಗೊಂಡಿದ್ದರು. ಬಿ.ಎಸ್. ವೈ. ಸಿಎಂ ಆದ ಬಳಿಕ ಶಿವಾನಂದ ವೃತ್ತದಲ್ಲಿರುವ ಧವಳಿಗಿರಿ ಮನೆಯಲ್ಲಿಯೇ ಇರುತ್ತಿದ್ದರು. ಬಿ.ಎಸ್. ವೈ ಅವರಿಗೆ ಸೇರಿದ ಕೆಲವು ಕರ‍್ಯಕ್ರಮಗಳನ್ನು ಉಮೇಶ ನೋಡಿಕೊಂಡು ಹೋಗುತ್ತಿದ್ದರು ಎನ್ನಲಾಗಿದೆ. ಬಿ.ಎಸ್. ಯಡಿಯೂರಪ್ಪ ಅವರ ಪುತ್ರರಾದ ಬಿ. ವೈ. ವಿಜಯೇಂದ್ರ ಹಾಗೂ ರಾಘವೇಂದ್ರ ಬಳಿಯೂ ಆಪ್ತರಾಗಿ ಗುರುತಿಸಿಕೊಂಡಿದ್ದರು ಉಮೇಶ್ ಮನೆ ಸೇರಿದಂತೆ ಅವರ ಆಪ್ತರ ಮನೆಗಳ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ದೊರೆತಿದೆ.
ಚಾಲಕನಾಗಿರುವ ಉಮೇಶ್, ನಾಗಸಂದ್ರ ಮೆಟ್ರೋ ಹಿಂಭಾಗದಲ್ಲಿ ಕೋಟಿಗಟ್ಟಲೆ ವೆಚ್ಚ ಮಾಡಿ ಬಂಗಲೆ ನರ‍್ಮಾಣ ಮಾಡಿದ್ದಾರೆ. ಯಡಿಯೂರಪ್ಪ ಅವರು ಇಟ್ಟಿರುವ ಧವಳಗಿರಿ ಹೆಸರನ್ನು ಉಮೇಶ್ ತಮ್ಮ ಮನೆಗೂ ಇಟ್ಟಿದ್ದರು. ಇದೀಗ ಐಟಿ ಅಧಿಕಾರಿಗಳ ದಾಳಿಗೆ ತುತ್ತಾಗಿದ್ದಾರೆ.ಆದಾಯ, ತೆರಿಗೆ ವಂಚನೆ ಸಂಬಂಧ ಮಹತ್ವದ ದಾಖಲೆಗಳನ್ನು ವಶಪಡಸಿಕೊಂಡಿದ್ದಾರೆ. ಚರ‍್ಟೆಡ್ ಅಕೌಂಟೆಂಟ್ ಲಕ್ಷ್ಮೀ ಕಾಂತ್ ಸೇರಿದಂತೆ ಹಲವು ಉದ್ಯಮಿಗಳ ಮನೆಗಳ ಮೇಲೂ ದಾಳಿ ನಡೆದಿದೆ.
ನೀರಾವರಿ ಇಲಾಖೆಯ ಕಾಮಗಾರಿ, ಅನುಷ್ಠಾನ, ಗುತ್ತಿಗೆಯನ್ನು ಉಮೇಶ್ ನೋಡಿಕೊಳ್ಳುತ್ತಿದ್ದರು. ಹಲವು ಗುತ್ತಿಗೆದಾರರ ನಡುವೆ ನಿಕಟ ಸಂರ‍್ಕ ಹೊಂದಿದ್ದ ಉಮೇಶ್ ಮೇಲ್ನೋಟಕ್ಕೆ ರಾಮಮಂದಿರದ ಬಾಡಿಗೆ ಮನೆಯಲ್ಲಿಯೇ ಇರುವುದಾಗಿ ಬಿಂಬಿಸಿಕೊಂಡಿದ್ದರು. ಉಮೇಶ್ ಅವರನ್ನು ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದು, ಈ ದಾಳಿಯಿಂದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಅವರ ಮಕ್ಕಳಿಗೂ ಕಂಟಕ ಎದುರಾಗಲಿದೆಯಾ ಎಂಬ ಪ್ರಶ್ನೆ ಎದುರಾಗಿದೆ.ಬೆಳಗ್ಗೆ ಐದು ಗಂಟೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬಿ.ಎಸ್. ವೈ ಆಪ್ತ ಸಹಾಯಕ ಉಮೇಶ್ ಅವರ ಸಂಬಂಧಿಕರ ಆರು ಮನೆಗಳ ಮೇಲೆ ಕೂಡ ತಲಾಷೆ ನಡಸಲಾಗಿದೆ. ಕಳೆದ ಆರು ತಿಂಗಳಿನಿಂದ ಉಮೇಶ್ ಅವರ ರ‍್ಥಿಕ ವಹಿವಾಟಿನ ಮೇಲೆ ಐಟಿ ಅಧಿಕಾರಿಗಳು ನಿಗಾ ಇಟ್ಟು ದಾಖಲೆಗಳನ್ನು ಸಂಗ್ರಹಿಸಲಾಗಿತ್ತು. ಬಿಎಸ್‌ವೈ ಅವರ ಕುಟುಂಬ ರಾಮಲಿಂಗಂ ಕನ್‌ಸ್ಟ್ರಕ್ಷನ್ ನಿಂದ ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ವಿಚಾರವಾಗಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ, ಇಡಿ ಅಧಿಕಾರಿಗಳಿಗೆ ಕೂಡ ದೂರು ನೀಡಲಾಗಿತ್ತು. ಇದೀಗ ಐಟಿ ದಾಳಿ ನಡೆದಿದ್ದು, ಬಿ.ಎಸ್. ವೈ ಕುಟುಂಬಕ್ಕೂ ಕಂಟಕ ಎದುರಾಗಲಿದೆಯಾ ಎಂಬ ಪ್ರಶ್ನೆ ಕಾಡ ತೊಡಗಿದೆ.