ಮಧುಗಿರಿ : ಹಾಸನ ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನು ಅಲ್ಲಿಗೆ ಹೋಗಿರದಿದ್ದರೆ ಇನ್ನು 50 ವರ್ಷ ಕಳೆದರೂ ಈ ಭಾಗಕ್ಕೆ ಎತ್ತಿನಹೊಳೆ ನೀರು ಹರಿಯುತ್ತಿರಲಿಲ್ಲ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದರು.
ಪಟ್ಟಣಕ್ಕೆ ನೀರೊದಗಿಸುವ ಸಿದ್ದಾಪುರ ಕೆರೆ ಮತ್ತು ಚೋಳೇನಹಳ್ಳಿ ಕೆರೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಸೋಮವಾರ ಬಾಗಿನ ಅರ್ಪಿಸಿ ಮಾತನಾಡಿದ ಅವರು ಅಲ್ಲಿನ ರಾಜಕೀಯ ಪರಿಸ್ಥಿತಿಯೇ ಬೇರೆ ರೀತಿ ಇದೆ. ಹಾಸನ ಜಿಲ್ಲಾ ಉಸ್ತುವಾರಿ ಸಚಿವನಾಗಿ ಅಧಿಕಾರ ವಹಿಸಿಕೊಂಡಾಗಲೇ ಅಲ್ಲಿನ ಪರಿಸ್ಥಿತಿ ನನ್ನ ಗಮನಕ್ಕೆ ಬಂದದ್ದು, ದಕ್ಷ ಅಧಿಕಾರಿಗಳಿಗೆ ಅಲ್ಲಿ ಕೆಲಸ ಮಾಡಲು ಬಿಡುವುದೇ ಇಲ್ಲ. ಹಾಸನ ಡಿಸಿ ಸತ್ಯಭಾಮರವರು ಮತ್ತು ನಾನು ಇಲ್ಲದಿದ್ದರೆ ಈ ಭಾಗಕ್ಕೆ ಎತ್ತಿನಹೊಳೆ ನೀರು ಹರಿಸಲು ಸಾದ್ಯವಾಗುತ್ತಿರಲಿಲ್ಲ. ಎತ್ತಿನಹೊಳೆ ಡಿಸಿ ಸತ್ಯಭಾಮರವರು ಎತ್ತಿನಹೊಳೆ ಯೋಜನೆಗೆ ಹೆಚ್ಚಿನ ಶ್ರಮ ವಹಿಸಿದ್ದು, ಇಂಜಿನಿಯರ್ ಗಳು ಕಷ್ಟ ಪಟ್ಟು ಕೆಲಸ ಮಾಡಿದ್ದಾರೆ. ಅದಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ. ಈಗ ನೀರು ಲಿಫ್ಟ್ ಮಾಡಲು ರೆಡಿ ಇದ್ದು, ಕಾಲುವೆಗಳ ದುರಸ್ತಿ ಆಗಬೇಕಿದ್ದು, ಸರ್ಕಾರ ಕಾಲುವೆಗಳ ದುರಸ್ತಿಗೆ ಈಗಾಗಲೇ 300 ಕೋಟಿ ಬಿಡುಗಡೆ ಮಾಡಿದ್ದು, ಮುಂದಿನ ಮಳೆಗಾಲದ ವೇಳೆಗೆ ಮಧುಗಿರಿ, ಕೊರಟಗೆರೆಯ ಕೆರೆಗಳಿಗೆ ಎತ್ತಿನ ಹೊಳೆ ಮೂಲಕ ನೀರು ಹರಿಸಿ ಮಧುಗಿರಿ ಬರಪೀಡಿತ ಪ್ರದೇಶ ಎಂಬ ಹಣೆಪಟ್ಟಿಯನ್ನು ತೆಗೆದು ಹಾಕಬೇಕಿದೆ ಎಂದು ತಿಳಿಸಿದರು.
ಯಾವುದೇ ಜೀವಿ ಸಂಕುಲಕ್ಕೆ ಗಾಳಿ, ನೀರು ಅತ್ಯಗತ್ಯ ಮತ್ತು ಅಮೂಲ್ಯ. ಇತ್ತೀಚಿನ ದಿನಗಳಲ್ಲಿ ಅಂತರ್ಜಲ ಮಟ್ಟು ಕುಸಿದಿದ್ದು, ಅಂತರ್ಜಲ ಮಟ್ಟ ಏರಿಕೆಗೆ ಕ್ರಮ ವಹಿಸಬೇಕು. ನೀರನ್ನು ಮಿತವಾಗಿ ಬಳಸಿ, ಹರಿಯುವ ಭೂಮಿಯಲ್ಲಿ ನೀರನ್ನು ಇಂಗಿಸುವ ಕೆಲಸ ಮಾಡಬೇಕು. ಇನ್ನೂ ಹೆಚ್ಚಿನ ಚೆಕ್ ಡ್ಯಾಂಗಳ ನಿರ್ಮಾಣಕ್ಕೆ ಕ್ರಮ ವಹಿಸಬೇಕು. ಸಮುದ್ರಕ್ಕೆ ವ್ಯರ್ಥವಾಗಿ ಹರಿಯುವ ನೀರನ್ನು ತಡೆದು ಅದನ್ನು ಬಳಕೆ ಮಾಡಿಕೊಳ್ಳಬೇಕು ಎಂದರು.
ಪಟ್ಟಣಕ್ಕೆ ಈಗ ಪ್ರತೀ ದಿನ ನೀರು ಸರಭರಾಜು ಆಗುತ್ತಿದ್ದು, ಈ ಬಾರಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಕ್ಷೇತ್ರದ ಕೆರೆಗಳು ಭರ್ತಿಯಾಗಿವೆ. ಪ್ರತೀ ವರ್ಷ ಮಳೆರಾಯನ ಆಶೀರ್ವಾದ ಹೀಗೇ ಸಿಗಲಿ. ಪ್ರತೀ ವರ್ಷ ಇದೇ ರೀತಿ ಕೆರೆಗಳು ಕೋಡಿ ಬೀಳಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ಮುಂದೆ ಇನ್ನೂ ಮಳೆ ಹೆಚ್ಚಿನ ಮಳೆಯಾಗುವ ಮುನ್ಸೂಚನೆಯಿದ್ದು, ಇನ್ನೂ ಹೆಚ್ಚು ನೀರು ಹರಿಯಲಿದೆ. ಇನ್ನೆರಡು ದಿನಗಳಲ್ಲಿ ಬಿಜವರ ಕೆರೆಯೂ ಕೋಡಿ ಬೀಳಲಿದ್ದು, ಬಿಜವರ ಕೆರೆ ಕೋಡಿ ಬೀಳುವವರೆಗೂ ಹೇಮಾವತಿ ನೀರು ಹರಿಸುತ್ತೇನೆ ಎಂದು ಭರವಸೆ ನೀಡಿದರು.
ಶೀಘ್ರದಲ್ಲೇ ಪಟ್ಟಣದ ಎಲ್ಲಾ ವಾರ್ಡುಗಳಿಗೂ ಭೇಟಿ ನೀಡುತ್ತೇನೆ. ಮೊದಲ ಹಂತದಲ್ಲಿ ಒಂದರಿಂದ 8 ನೇ ವಾರ್ಡ್ ವರೆಗೆ ನಂತರ 9 ರಿಂದ 15 ನೇ ವಾರ್ಡ್ ಮತ್ತು 16 ರಿಂದ 23 ನೇ ವಾರ್ಡ್ ಗೆ ಬೆಳಗ್ಗೆ 8 ರಿಂದ 11 ಗಂಟೆಯವರೆಗೂ ಪಾದಯಾತ್ರೆ ಕೈಗೊಂಡು ಜನರ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿ ಪರಿಹರಿಸುವ ಕೆಲಸ ಮಾಡುತ್ತೇನೆ. ಅಷ್ಟರೊಳಗೆ ಅಧಿಕಾರಿಗಳು ಜನರ ಸಮಸ್ಯೆಯನ್ನು ಬಗೆ ಹರಿಸುವ ಕೆಲಸ ಮಾಡಬೇಕು ಎಂದು ಸಚಿವ ರಾಜಣ್ಣ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಅಧ್ಯಕ್ಷೆ ಶಾಂತಲಾ ರಾಜಣ್ಣ, ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ, ಎಸಿ ಗೋಟೂರು ಶಿವಪ್ಪ, ತಹಶೀಲ್ದಾರ್ ಶಿರೀನ್ ತಾಜ್, ಗ್ರಾ.ಪಂ.ಅಧ್ಯಕ್ಷೆ ಗೌರಮ್ಮ ಗಂಗಾಧರ್,ಪಿಡಿಓ ಶಿಲ್ಪ, ಪುರಸಭಾಧ್ಯಕ್ಷ ಲಾಲಾಪೇಟೆ ಮಂಜುನಾಥ್, ಉಪಾಧ್ಯಕ್ಷೆ ಸುಜಾತ ಶಂಕರ್ ನಾರಾಯಣ್, ಸದಸ್ಯರಾದ ಅಲೀಂ, ಎಂ.ವಿ ಗೋವಿಂದರಾಜು, ತಿಮ್ಮರಾಯಪ್ಪ, ಮಂಜುನಾಥ್ ಆಚಾರ್, ನಾಗಲತಾ ಲೋಕೇಶ್, ಶೋಭಾರಾಣಿ, ಶ್ರೀಧರ್, ಮುಖಂಡರಾದ ತುಂಗೋಟಿ ರಾಮಣ್ಣ ಸುವರ್ಣಮ್ಮ, ಎಂಜಿ ಉಮೇಶ್, ಆನಂದ ಕೃಷ್ಣ, ಆನಂದ್, ಎಸ್.ಬಿ.ಟಿ ರಾಮು, ತಾ.ಪಂ ಇಓ ಲಕ್ಷ್ಮಣ್, ಯೋಜನಾಧಿಕಾರಿ ಮಧುಸೂದನ್, ಸಿಡಿಪಿಓ ಕಮಲಾ, ವಲಯ ಅರಣ್ಯಾಧಿಕಾರಿ ಸುರೇಶ್, ಮುಖ್ಯಾಧಿಕಾರಿ ಸುರೇಶ್ ಇತರರಿದ್ದರು.