ಶಿರಾ ನಗರದಿಂದ ಮಿನಿ ವಿಧಾನಸೌಧದವರೆಗೆ ಬಸ್ ಸಂಚಾರಕ್ಕೆ ಪುನರ್ ಚಾಲನೆ

ಶಿರಾ : ದಿನ ನಿತ್ಯ ಶಾಲೆಗಳಿಗೆ ಬರುವ ವಿದ್ಯಾರ್ಥಿಗಳಿಗೆ ಹಾಗೂ ಶಿರಾ ನಗರದ ಮಿನಿ ವಿಧಾನಸೌಧದಿಂದ ನಗರಕ್ಕೆ ಬರುವ ಸಾರ್ವಜನಿಕರಿಗೆ ಅನುಕೂಲವಾಗುವ ಉದ್ದೇಶದಿಂದ ತಾಲ್ಲೂಕಿನಲ್ಲಿ ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಸ್ಥಗಿತಗೊಂಡಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ಮಾರ್ಗಗಳನ್ನು ಇಂದು ಪುನರ್ ಚಾಲನೆ ನೀಡಲಾಗಿದೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ತಿಳಿಸಿದರು.
ಅವರು ನಗರದ ಮಿನಿ ವಿಧಾನಸೌಧದಿಂದ ಶಿರಾ ನಗರಕ್ಕೆ ಸಾರ್ವಜನಿಕರ ಅನುಕೂಲಕ್ಕಾಗಿ ಸೋಮವಾರ ಹೊಸದಾಗಿ ಬಸ್ ಮಾರ್ಗಕ್ಕೆ ಚಾಲನೆ ನೀಡಿ ಮಾತನಾಡಿದರು. ಮಿನಿ ವಿಧಾನಸೌಧ ಶಿರಾ ನಗರದ ಹೊರಭಾಗದಲ್ಲಿರುವ ಕಾರಣ ನಾಗರೀಕರಿಗೆ ಅನುಕೂಲವಾಗುವ ಉದ್ದೇಶದಿಂದ ಮಾರ್ಗ ಪ್ರಾರಂಭಿಸಲಾಗಿದೆ. ಮಿನಿ ವಿಧಾನಸೌಧದಿಂದ ಬಸ್ಸು 18 ಸಿಂಗಲ್ ಸಂಚಲಿಸಲಿದೆ ಹಾಗೂ ಕೋವಿಡ್ ಸಮಯದಲ್ಲಿ ಸ್ಥಗಿತಗೊಂಡಿದ್ದ ಮೆಳೆಕೋಟೆ, ದೊಡ್ಡ ಅಗ್ರಹಾರ, ತಾಳಗುಂದ, ಯಾದಲಡಕು, ಹುಯಿಲ್‌ದೊರೆ, ಕಲ್ಲುಕೋಟೆ ಮತ್ತು ಬ್ಯಾಡರಹಳ್ಳಿ ಗ್ರಾಮಗಳಿಂದ ಮಾರ್ಗಗಳನ್ನು ಪುನರ್ ಪ್ರಾರಂಭಿಸಲಾಗಿದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಬೆಳಗ್ಗೆ 7 ಗಂಟೆಯಿಂದಲೇ ಪ್ರಾರಂಭಿಸಿ ಸಂಜೆ 5 ಗಂಟೆಯ ವೇಳೆಗೆ ವಾಪಸ್ಸು ಹೋಗಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕೆ.ಎಸ್.ಆರ್.ಟಿ.ಸಿ. ಡಿಪೋ ವ್ಯವಸ್ಥಾಪಕ ವಿನೋದ್ ಅಮ್ಮನಗಿ, ಕೆಎಸ್‌ಆರ್‌ಟಿಸಿ ಸಂಚಾರಿ ನಿರೀಕ್ಷಕ ನಾಗರಾಜು, ನಗರ ಬಿಜೆಪಿ ಅಧ್ಯಕ್ಷ ವಿಜಯರಾಜ್, ಮಾಜಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಬಸವರಾಜು, ನಿರಂಜನ್, ಭೂವನಹಳ್ಳಿ ಲಿಂಗರಾಜು ಮತ್ತಿತರರು ಹಾಜರಿದ್ದರು.