ಬಿಜೆಪಿ ಸರಕಾರದಿಂದ ಜನ ವಿರೋಧಿ ಹಾಗೂ ರೈತ ವಿರೋಧಿ ಆಡಳಿತ : ಡಾ.ಜಿ.ಪರಮೇಶ್ವರ್

ಮಧುಗಿರಿ : ಬಿಜೆಪಿ ಸರಕಾರವು ಜನ ವಿರೋಧಿ ಹಾಗೂ ರೈತ ವಿರೋಧಿ ಆಡಳಿತ ನೀಡುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಪಟ್ಟಣದ ಮುಖಂಡ ಎಂ.ಜಿ.ಶ್ರೀನಿವಾಸ ಮೂರ್ತಿ ರವರ ನಿವಾಸದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಸಾರ್ವಜನಿಕರು ತತ್ತರಿಸುತ್ತಿದ್ದು ಇದರ ಪರಿಣಾಮ ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷಕ್ಕೆ ಜನರೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದರು.
ಮುಂದಿನ ವಿಧಾನ ಸಭ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ. ಕಾಂಗ್ರೆಸ್ ನಾಯಕರು ಸಂಘಟನೆಯಲ್ಲಿ ತೊಡಗಿದ್ದು ಗೆಲುವಿಗಾಗಿ ಈಗಾಗಲೇ ರೂಪುರೇಷೆ ಗಳನ್ನು ಸಿದ್ದಗೊಳಿಸಲಾಗುತ್ತಿದೆ. ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚಿನ ಸ್ಥಾನ ಗಳಿಸಲಿದೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದರು.
ಮಧುಗಿರಿ ಉಪವಿಭಾಗದ 4 ತಾಲೂಕುಗಳಲ್ಲಿ ಸಕಾಲಕ್ಕೆ ಮಳೆ ಬಾರದೆ ಬೆಳೆ ಒಣಗುತ್ತಿದ್ದು ಇದರ ಮಾಹಿತಿ ಪಡೆದುಕೊಂಡು ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದ ಅವರು, ಡಾ.ನಂಜುಂಡಪ್ಪ ವರದಿ ಪ್ರಕಾರ ಈ ಭಾಗವು ಕೂಡ ಅತಿ ಹಿಂದುಳಿದ ಪ್ರದೇಶವಾಗಿದ್ದು ಸರಕಾರ ಅನುದಾನ ನೀಡುವಲ್ಲಿ ತಾರತಮ್ಯ ಮಾಡುತ್ತಿದ್ದು ಅಭಿವೃದ್ಧಿ ಕುಂಠಿತ ಗೊಂಡಿದೆ ಎಂದರು.
ಎತ್ತಿನ ಹೊಳೆ ಯೋಜನೆಗೆ ಬಿಜೆಪಿ ಸರಕಾರ ಬಜೆಟ್ ನಲ್ಲಿ ಕೇವಲ 500 ಕೋಟಿ ರೂ ಗಳನ್ನು ಮಂಜೂರು ಮಾಡಿದ್ದು ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ ಕೊರಟಗೆರೆ ತಾಲೂಕಿನ ರೈತರಿಗೆ ಪರಿಹಾರ ನೀಡದೆ ಬೇರೆ ಕಡೆ ಬಫರ್ ಡ್ಯಾಮ್ ನಿರ್ಮಿಸಲು ಮುಂದಾಗಿರುವುದು ಸರಿಯಲ್ಲ ಎಂದರು.
ತುಮುಲ್ ಮಾಜಿ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್, ಜಿ.ಪಂ.ಮಾಜಿ ಸದಸ್ಯ ಹೆಚ್.ಕೆಂಚಮಾರಯ್ಯ, ಎ.ಪಿ.ಎಂ.ಸಿ.ಮಾಜಿ ಅಧ್ಯಕ್ಷ ಎಂ.ಜಿ.ಶ್ರೀನಿವಾಸ್ ಮೂರ್ತಿ, ಪುರಸಭೆ ಸದಸ್ಯರಾದ ಎಂ.ಎಸ್.ಚಂದ್ರಶೇಖರ್, ಎಂ.ಆರ್.ಜಗನ್ನಾಥ್, ವಕೀಲರ ಸಂಘದ ಅಧ್ಯಕ್ಷ ಪಿ.ಸಿ.ಕೃಷ್ಣರೆಡ್ಡಿ,ಕೆ.ಪಿ.ಸಿ.ಸಿ ಪ್ರಧಾನ ಕಾರ್ಯಧರ್ಶಿ ಬಿ.ಎಸ್.ದಿನೇಶ್, ಮುಖಂಡರಾದ ಚಂದ್ರಶೇಖರ್ ಗೌಡ, ಆರ್.ಎ.ನಾರಾಯಣ್, ಎಂ.ಶ್ರೀಧರ್ ಇದ್ದರು.