
ಶಿರಾ : ಈ ದೇಶದಲ್ಲಿ ವೈಧಿಕತೆ ವಿರುದ್ಧ ಹೋರಾಟ ನಡೆಸಿದ ಮಹಾನ್ ನಾಯಕ ಪೆರಿಯಾರ್ ರಾಮಸ್ವಾಮಿಯವರು. ಬುದ್ಧ, ಬಸವಣ್ಣ, ಕನಕದಾಸ ಅಂತಹ ಮಹಾನ್ ನಾಯಕರಂತೆ ವೈಚಾರಿಕ ನೆಲೆಗಟ್ಟಿನಲ್ಲಿ ಹೋರಾಟ ಮಾಡಿದವರು ಎಂದು ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ಅಧ್ಯಕ್ಷ ಟೈರ್ ರಂಗನಾಥ್ ಹೇಳಿದರು.
ಅವರು ನಗರದ ಅಂಬೇಡ್ಕರ್ ಉದ್ಯಾನವನದಲ್ಲಿ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ವತಿಯಿಂದ ಏರ್ಪಡಿಸಿದ್ದ ಪೆರಿಯಾರ್ ರಾಮಸ್ವಾಮಿ ಅವರ 144ನೇ ಜನ್ಮ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಪೆರಿಯಾರ್ ರಾಮಸ್ವಾಮಿ ಅವರು ವೈಚಾರಿಕ ಚಿಂತನೆಯನ್ನು ಅಳವಡಿಸಿಕೊಂಡು. ತಮಿಳುನಾಡಿನಾದ್ಯಂತ ವೈಚಾರಿಕ ಚಿಂತನೆಯನ್ನು ಜನರಿಗೆ ಪ್ರತಿಪಾದಿಸುತ್ತಾ, ದೊಡ್ಡ ಸಮರವನ್ನೇ ಸಾರಿದರು. ಯಾರು ದೇವರ ಬಗ್ಗೆ ಪ್ರತಿಪಾದನೆ ಮಾಡುತ್ತಾರೆ ಅವರು ಮೂರ್ಖರು, ದೇವರು ಇಲ್ಲ ದೇವರು ಇಲ್ಲ ಎಂದು ಬ್ರಾಹ್ಮಣಶಾಹಿ ವಿರುದ್ಧ ಹೋರಾಡಿದರು. ಪೆರಿಯಾರ್ ಅವರು ಹಲವು ರೀತಿಯ ಚಳವಳಿಗಳ ಮೂಲಕ ಸಮಾಜದ ನಿರ್ಗತಿಕರಿಗೆ ದಾರಿ ದೀಪವಾದವರು. ತಮ್ಮ ಜೀವಿತಾವಧಿಯಲ್ಲಿ ವಿಚಾರವಾದ, ಸ್ವಗೌರವ, ಮಹಿಳೆಯರ ಹಕ್ಕುಗಳು ಮತ್ತು ದ್ರಾವಿಡರ ಮೇಲಿನ ವೈದಿಕ ಪರಂಪರೆಯ ಹೇರಿಕೆ, ಹಿಂದಿ ಹೇರಿಕೆ, ಹೀಗೆ ನಿರಂತರವಾಗಿ ಶೋಷಿತ ವರ್ಗಗಳ ವಿಚಾರಗಳಿಗೆ ಗಟ್ಟಿ ಧ್ವನಿಯಾಗಿದ್ದರು ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲರಾದ ಡಾ.ತಿಮ್ಮನಹಳ್ಳಿ ವೇಣುಗೋಪಾಲ್, ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿಯ ಕಾರ್ಯಾಧ್ಯಕ್ಷ ಶಿವಾಜಿನಗರ ತಿಪ್ಪೇಸ್ವಾಮಿ, ಅಹಿಂದ ಯುವ ಮುಖಂಡ ರೂಪೇಶ್ ಕೃಷ್ಣಯ್ಯ, ಬೀರನಹಳ್ಳಿ ಹನುಮಂತರಾಯಪ್ಪ, ರಾಮಲಿಂಗಪ್ಪ, ತಿಪ್ಪೇಶ್, ಕಾರ್ತಿಕ್, ಮಹೇಶ್, ನರಸಿಂಹಮೂರ್ತಿ, ಚೆನ್ನನಕುಂಟೆ ರಂಗನಾಥ್, ಹುಂಜಿನಾಳ್ ಗೋಪಾಲ್, ಗೋಣಿಹಳ್ಳಿ ತಿಪ್ಪೇಸ್ವಾಮಿ, ದಿನೇಶ್, ಮನು, ಕಾರೇಹಳ್ಳಿರಂಗನಾಥ್ ಸೇರಿದಂತೆ ಹಲವರು ಭಾಗವಹಿಸಿದ್ದರು.