ಸರಕಾರದ ನಿರ್ದೇಶನದಂತೆ ಪ್ರತಿಯೊಬ್ಬರು ಲಸಿಕೆ ಪಡೆಯಿರಿ : ಎಸ್.ನಾಗಣ್ಣ
ತುಮಕೂರು: ಬಲಾಢ್ಯರಿಂದ ಬಲಹೀನರನ್ನು ರಕ್ಷಣೆ ಮಾಡಲು ಸರಕಾರ ಹಲವಾರು ಕಾನೂನುಗಳನ್ನು ತಂದಿದೆ. ಕೋರೋನದಿಂದ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಬೇಕೆಂದರೆ ಲಸಿಕೆಯೊಂದೇ ದಾರಿ, ಹಾಗಾಗಿ ಪ್ರತಿಯೊಬ್ಬರು ಸರಕಾರದ ನಿರ್ದೇಶನದಂತೆ ಲಸಿಕೆ ಪಡೆದುಕೊಳ್ಳುವಂತೆ ಪತ್ರಿಕೋದ್ಯಮಿ ಎಸ್.ನಾಗಣ್ಣ ತಿಳಿಸಿದ್ದಾರೆ.
ನಗರದ ಟೌನ್‌ಕ್ಲಬ್‌ನಲ್ಲಿ ಹಮ್ಮಿಕೊಂಡಿದ್ದ ಮೇಗಾ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ದೇಹದಲ್ಲಿ ಪ್ರತಿಕಾಯಗಳು ಕೋರೋನದಂತಹ ವೈರಸ್‌ಗಳ ವಿರುದ್ದ ಹೋರಾಟ ನಡೆಸಲು ಸಶಕ್ತವಾಗಬೇಕೆಂದರೆ ಲಸಿಕೆಯೊಂದೇ ಆಧಾರ ಎಂದರು.
ಸರಕಾರ ಮುಂದಿನ ನವೆಂಬರ್ ಅಂತ್ಯದೊಳಗೆ ಶೇ100 ರಷ್ಟು ಲಸಿಕೆ ಹಾಕುವ ಗುರಿ ಹೊಂದಿದೆ. ಇದು ಸಾಧ್ಯವಾಗಬೇಕೆಂದರೆ ಜನಸಾಮಾನ್ಯರು ಸರಕಾರದ ಈ ಲಸಿಕಾ ಅಭಿಯಾನದಲ್ಲಿ ಪಾಲ್ಗೊಳ್ಳಬೇಕಿದೆ. ಟೌನ್ ಕ್ಲಬ್‌ನಲ್ಲಿ ಲಸಿಕೆ ಹಾಕಿಸಿಕೊಳ್ಳಲು ಒಳ್ಳೆಯ ವಾತಾವರಣವಿದೆ.ಇಲ್ಲಿಗೆ ಬರುವ ಜನರಿಗೆ ಕುಡಿಯುವ ನೀರು, ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಎಲ್ಲವನ್ನು ಕ್ಲಬ್ ಪದಾಧಿಕಾರಿಗಳು ಮಾಡಿಕೊಟ್ಟಿದ್ದಾರೆ.ಇದರ ಸದುಪಯೋಗವನ್ನು ಜನರು ಅದರಲ್ಲಿಯೂ ಯುವಜನರು ಪಡೆದುಕೊಳ್ಳಬೇಕೆಂದು ಎಸ್.ನಾಗಣ್ಣ ಮನವಿ ಮಾಡಿದರು.
15ನೇ ವಾರ್ಡಿನ ನಗರಪಾಲಿಕೆ ಸದಸ್ಯೆ ಶ್ರೀಮತಿ ಗಿರಿಜಾ ಧನಿಯಕುಮಾರ್ ಮಾತನಾಡಿ,ಟೌನ್‌ಕ್ಲಬ್ ಸಹಕಾರದಲ್ಲಿ ಇದುವರೆಗೂ ಸುಮಾರು 10 ಸಾವಿರ ಜನರಿಗೆ ಇಲ್ಲಿ ಲಸಿಕೆ ನೀಡಲಾಗಿದೆ. ಅಂಗವಿಕಲರು,ಅಂಧರು, ಹಿರಿಯ ನಾಗರಿಕರು, ಕ್ರೀಡಾಪಟುಗಳು ಹೀಗೆ ಎಲ್ಲಾ ವರ್ಗದವರು ಲಸಿಕೆ ಪಡೆಯುವಂತೆ ವ್ಯವಸ್ಥೆ ಮಾಡಲಾಗಿದೆ.ಇದಕ್ಕೆ ತಾಲೂಕು ಆರೋಗ್ಯಾಧಿ ಕಾರಿಗಳು, ಪಾಲಿಕೆಯ ಆರೋಗ್ಯ ಸಿಬ್ಬಂದಿ ಹಾಗೂ ಕ್ಲಬ್ ಸಿಬ್ಬಂದಿ ಹೆಚ್ಚಿನ ಸಹಕಾರ ನೀಡಿದ್ದು, ಇವರೆಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ತುಮಕೂರು ತಾಲೂಕು ಆರೋಗ್ಯಾಧಿಕಾರಿ ಡಾ.ಮೋಹನ್ ಮಾತನಾಡಿ, ಟೌನ್ ಕ್ಲಬ್ ಸದಸ್ಯರು ಮತ್ತು ಪದಾಧಿಕಾರಿಗಳು ಕೋರೋನ ಲಸಿಕೆ ಆರಂಭವಾದ ದಿನದಿಂದಲೂ ನಮ್ಮ ಹಿಂದೆ ಬಿದ್ದು ಲಸಿಕೆ ಪಡೆದುಕೊಂಡು ಸಾರ್ವಜನಿಕರಿಗೆ ನೀಡಿದ್ದಾರೆ. ಎಷ್ಟೋ ಸಂದರ್ಭಗಳಲ್ಲಿ ತಾಲೂಕಿನ ವಿವಿಧೆಡೆ ಉಳಿದ ಲಸಿಕೆಗಳನ್ನು ಇಲ್ಲಿಗೆ ತರಿಸಿ, ಸಾರ್ವಜನಿಕರಿಗೆ ಮಾಹಿತಿ ನೀಡಿ, ಪಡೆದುಕೊಳ್ಳುವಂತೆ ಮಾಡಿದ್ದಾರೆ. ಇದಕ್ಕಾಗಿ ವಾರ್ಡಿನ ಕಾರ್ಪೋರೇಟರ್,ಕ್ಲಬ್ ಕಾರ್ಯದರ್ಶಿಗಳು, ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಈ ವೇಳೆ ಟೌನ್ ಕ್ಲಬ್ ಕಾರ್ಯದರ್ಶಿ ಸುಜ್ಞಾನ್ ಹಿರೇಮಠ್, ಪಾಲಿಕೆಯ ಆರೋಗಾಧಿಕಾರಿ ಡಾ.ರಕ್ಷಿತ್, ಪದಾಧಿಕಾರಿಗಳಾದ ರುದ್ರೇಶ್, ಲೋಕೇಶ್, ರಘು, ಪರಮೇಶ್,ಸುಮಾರು ನಾಲ್ಕು ತಿಂಗಳ ಕಾಲ ಲಸಿಕೆ ನೀಡಿದ ಹಿರಿಯ ಆರೋಗ್ಯ ಸಹಾಯಕಿ ಅಂಜುಮ್ ಮತ್ತಿತರರು ಉಪಸ್ಥಿತರಿದ್ದರು.