ತುರುವೇಕೆರೆ : ಹೊಟ್ಟೆಪಾಡಿಗಾಗಿ ಬೋವಿ ಸಮಾಜವು ತಲೆ ತಲಾಂತರದಿಂದ ಅನುಸರಿಸಿಕೊಂಡು ಬರುತ್ತಿರುವ ಕಲ್ಲುಗಣಿಗಾರಿಕೆಗೆ ಅವಕಾಶ ನೀಡಬೇಕೆಂದು ತಾಲೂಕು ಬೋವಿ(ವಡ್ಡರ) ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಮಹಾಲಿಂಗಯ್ಯ ಸರಕಾರವನ್ನು ಒತ್ತಾಯಿಸಿದರು.
ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿದ್ದ ಪ್ರತಿಭಟನಾನಿರತರನ್ನುದ್ದೇಶಿಸಿ ಮಾತನಾಡಿದ ಅವರು ಜೀವನಕ್ಕೆ ಕಲ್ಲುಕುಟಿಗ ವೃತ್ತಿಯು ಬೋವಿ ಸಮಾಜ ಅನುಸರಿಸುತ್ತಿರುವುದು ಇಂದು ನಿನ್ನೆಯದಲ್ಲ. ಕುಟುಂಬ ನಿರ್ವಹಣೆ ಮಾಡುವುದು ತ್ರಾಸದಾಯವೆನಿಸಿದ್ದು ನಿತ್ಯದ ಬದುಕಿಗೆ ಅಲೆಯುವಂತಾಗಿದೆ. ಕಲ್ಲುಗಣಿಗಾರಿಕೆಯನ್ನು ಪ್ರಕೃತಿ ನಾಶವಾಗದಂತೆ ಅತ್ಯಂತ ಸೂಕ್ಷ್ಮವಾಗಿ ನೆಡೆಸಿಕೊಂಡು ಬರುತ್ತಿದ್ದ ವೃತ್ತಿಪರರ ಮೇಲೆ ಸರಕಾರ ಗದಾಪ್ರಹಾರ ನಡೆಸುತ್ತಿದೆ. ವೃತ್ತಿ ಇಲ್ಲದೇ ನಿರುದ್ಯೋಗಿಗಳಾಗಿರುವ ಬೋವಿ ಸಮಾಜಕ್ಕೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಸರಕಾರ ಕಾನೂನಿನಲ್ಲಿ ಸಡಿಲಿಕೆ ಮಾಡಲಿ ಎಂದು ಆಗ್ರಹಿಸಿದರು.
ತಾ.ಪಂ. ಮಾಜಿ ಸದಸ್ಯ ಭೈರಪ್ಪ ಮಾತನಾಡಿ ಸ್ಥಳಿಯವಾಗಿ ರೈತಸ್ನೇಹಿಯಾಗಿ ಕಲ್ಲುಗಣಿಗಾರಿಕೆ ನೆಡೆಸುತ್ತಿದವ ಹೊಟ್ಟೆ ಪಾಡಿನ ಮೇಲೆ ಕಾನೂನು ತೊಡಕೊಡ್ಡಿರುವುದು ಸರಿಯಲ್ಲ. ಇಲ್ಲಿನ ರೈತರುಗಳಿಗೆ ಬೇಲಿಕಂಬ , ಮನೆಗಳನ್ನು ನಿರ್ಮಿಸಲು ಕಲ್ಲುಗಳನ್ನು ನೀಡುವ ಮೂಲಕ ಜೀವನೋಪಾಯ ಕಂಡುಕೊಂಡಿದ್ದರು. ಇತ್ತೀಚೆಗೆ ವೃತ್ತಿ ಬದುಕಿಗೆ ಸಂಚಕಾರವಾಗಿರುವ ಕಾನೂನು ಸಡಿಲಿಸಿ ಅನೂಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಪ್ರತಿಭಟನಾನಿರತರ ಬಳಿ ಧಾವಿಸಿದ ತಹಶೀಲ್ದಾರ್ ನಯೀಮುನ್ನಿಸ್ಸಾ ಮನವಿ ಪತ್ರ ಸ್ವೀಕರಿಸಿದರು. ಆನಂತರ ಮಾತನಾಡಿ ಸರಕಾರ ಜಮೀನುಗಳಲ್ಲಿನ ಬಂಡೆಗಳನ್ನು ಸಿಡಿಸಿ ಗಣಿಗಾಕೆ ನಡೆಸಲು ಅವಕಾಶವಿಲ್ಲ, ನಿಮ್ಮ ಖಾತಾ ಜಮೀನುಗಳಲ್ಲಿ ಸುರಕ್ಷತೆ ಪಾಲಿಸಿ ಕೆಲಸ ಮಾಡಲು ನಿರ್ಬಂದ ಇಲ್ಲ. ಸರಕಾರ ಬಂಡೆಗಳ ಬಳಿ ವೃತ್ತಿ ನೆಡೆಸಲು ಪರವಾನಾಗಿ ಪಡೆಯುವುದು ಕಡ್ಡಾಯ ಎಂದರು.
ಪ್ರತಿಭಟನೆಯಲ್ಲಿ ಗ್ರಾ.ಪಂ. ಸದಸ್ಯರುಗಲಾದ ಹನುಮಂತಮ್ಮ, ಲಕ್ಷ್ಮಮ್ಮ, ಶಿವಲಿಂಗಯ್ಯ, ನಾಗಣ್ಣ,ವೆಂಕಟೇಶ್, ಗೋಪಾಲ,ಪ್ರಸನ್ನ,ಪುಟ್ಟರಾಜ್,ಯಲ್ಲಪ್ಪ,ಗಂಗಾಧರ, ಸೇರಿದಂತೆ ತಾಲೂಕಿನ ಬೋವಿ ಸಮಾಜದ ಬಂಧುಗಳು ಭಾಗವಹಿಸಿದ್ದರು.