ತುಮಕೂರು : ಭಾರತದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿನೆನಪಿಗಾಗಿ ಅನುಷ್ಟಾನಗೊಳಿಸಿರುವ ಅಮೃತ ಗ್ರಾಮ ಪಂಚಾಯತಿ ಯೋಜನೆಯಡಿ ಸರ್ಕಾರ ನಿಗಧಿ ಪಡಿಸಿರುವಂತೆ ಜಿಲ್ಲೆಯ ಆಯ್ದ 38 ಗ್ರಾಮ ಪಂಚಾಯತಿಗಳನ್ನು ಅಮೃತ ಗ್ರಾಮಗಳನ್ನಾಗಿ ಅಭಿವೃದ್ಧಿಪಡಿಸಬೇಕು. ಈ ಹಿನ್ನೆಲೆಯಲ್ಲಿ ತಾಲೂಕುವಾರು ಗ್ರಾಪಂಗಳನ್ನು ಆಯ್ಕೆ ಮಾಡಲು ಶಾಸಕರ ಸಮ್ಮುಖದಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಅಮೃತ ಗ್ರಾಮ ಪಂಚಾಯತಿ ಯೋಜನೆ ಅನುಷ್ಟಾನಗೊಳಿಸುವ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ, ಅಮೃತ ಮಹೋತ್ಸವದ ಸವಿನೆನಪಿಗಾಗಿ ಅಮೃತ ಗ್ರಾಮ ಪಂಚಾಯತ್ ಯೋಜನೆಯಡಿ ಆಯ್ದ ಗ್ರಾಮ ಪಂಚಾಯಿತಿಗಳಲ್ಲಿ ಸಮಗ್ರ ಮೂಲಭೂತ ಸೌಕರ್ಯ ಅಭಿವೃದ್ಧಿಗೊಳಿಸಲು ಚರ್ಚಿಸಿಲಾಯಿತು.
ಅಮೃತ ಗ್ರಾಮ ಯೋಜನೆಯಡಿ ಜಿಲ್ಲೆಯಲ್ಲಿ 38 ಗ್ರಾಮ ಪಂಚಾಯತ್‌ಗಳನ್ನು ಅಭಿವೃದ್ಧಿಗೊಳಿಸಲು ಸರ್ಕಾರ ಗುರಿ ನಿಗಧಿಪಡಿಸಲಾಗಿದ್ದು, ಅದರಂತೆ ಜಿಲ್ಲೆಯ ಪ್ರತಿ ತಾಲೂಕಿಗೆ 4 ಗ್ರಾಮ ಪಂಚಾಯತ್‌ಗಳನ್ನು ಗುರುತಿಸಿ ಹೆಸರು ನೀಡುವಂತೆ ಸಚಿವರು ಶಾಸಕರಿಗೆ ತಿಳಿಸಿದರು. ಆಯ್ದ ಗ್ರಾಮ ಪಂಚಾಯತ್‌ಗಳ ಹೆಸರನ್ನು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಬಳಿಕ ಅಭಿವೃದ್ಧಿಗೊಳಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಈ ಯೋಜನೆಯಡಿ ಆಯ್ದ ಗ್ರಾಮ ಪಂಚಾಯತಿಗಳಲ್ಲಿ ಬೀದಿ ದೀಪ/ಸೋಲಾರ್ ಬೀದಿ ದೀಪ, ಪ್ರತಿ ಮನೆಗೆ ಕುಡಿಯುವ ನೀರಿನ ನಳ ಸಂಪರ್ಕ, ಶೇ.100ರಷ್ಟು ಘನತ್ಯಾಜ್ಯ ವಿಂಗಡಣೆ ಹಾಗೂ ವಿಲೇವಾರಿ, ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ವಿಸರ್ಜಿಸುವುದು, ಗ್ರಾಪಂ ಕಟ್ಟಡಗಳಲ್ಲಿ ಸೌರವಿದ್ಯುತ್ ಅಳವಡಿಕೆ, ಅಮೃತ ಉದ್ಯಾನವನ, ಗ್ರಾಮ ಪಂಚಾಯತ್ ಗ್ರಂಥಾಲಯ ಡಿಜಿಟಲೀಕರಣ, ಶಾಲೆಗಳು ಮತ್ತು ಅಂಗನವಾಡಿಗಳಿಗೆ ಕುಡಿಯುವ ನೀರು/ ಶೌಚಾಲಯ ಸೌಲಭ್ಯ ಕಲ್ಪಿಸುವುದು, ಶಾಲೆಗಳಲ್ಲಿ ಆಟದ ಮೈದಾನ ಹಾಗೂ ಆವರಣ ಗೋಡೆ ನಿರ್ಮಿಸುವುದು, ಕೆರೆ/ಕಲ್ಯಾಣಿಗಳ ಪುನಶ್ಚೇತನ ಹಾಗೂ ಗ್ರಾಮಗಳ ಇತರೆ ಮೂಲಭೂತ ಸೌಕರ್ಯ ಅಭಿವೃದ್ಧಿಪಡಿಸುವುದು ಮುಖ್ಯ ಉದ್ದೇಶವಾಗಿದೆ. ಆಯ್ಕೆಯಾದ ಪ್ರತಿ ಗ್ರಾಮ ಪಂಚಾಯಯಲ್ಲಿ ಈ ಯೋಜನೆ ಅನುಷ್ಟಾನಗೊಳಿಸಲು ಸರ್ಕಾರ 25 ಲಕ್ಷ ರೂ.ಗಳ ಅನುದಾನ ನೀಡಲಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ಅಮೃತ ಗ್ರಾಮ ಯೋಜನೆಯನ್ನು ಮಾರ್ಗಸೂಚಿಯಂತೆ ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆ ನಳ ಸಂಪರ್ಕ; ಸ್ವಚ್ಛ ಭಾರತ್ ಮಿಷನ್(ಗ್ರಾಮೀಣ) ಹಾಗೂ 15ನೇ ಹಣಕಾಸು ಯೋಜನೆಯಡಿ ಬೀದಿ ಅಥವಾ ಸೋಲಾರ್ ದೀಪಗಳ ಅಳವಡಿಕೆ; ಮಹಾತ್ಮ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಉದ್ಯಾನವನ ನಿರ್ಮಾಣ; ನರೇಗಾ/ಜಲಜೀವನ್ ಮಿಷನ್/ಸ್ವಚ್ಛ ಭಾರತ್ ಮಿಷನ್(ಗ್ರಾಮೀಣ) ಯೋಜನೆಗಳಡಿ ಶಾಲೆ-ಅಂಗನವಾಡಿಗಳಲ್ಲಿ ಕುಡಿಯುವ ನೀರು, ಶೌಚಾಲಯ, ಆಟದ ಮೈದಾನ, ಆವರಣದ ಗೋಡೆಗಳ ನಿರ್ಮಾಣ; ಗ್ರಾಮ ಪಂಚಾಯಿತಿಗಳ ಸ್ವಂತ ಅನುದಾನ/15ನೇ ಹಣಕಾಸು ಯೋಜನೆಯಡಿ ಗ್ರಾಮ ಪಂಚಾಯತಿಯ ಡಿಜಿಟಲ್ ಲೈಬ್ರರಿ; ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಅನುದಾನದಲ್ಲಿ ಶಾಲಾ ಕೊಠಡಿಗಳ ನಿರ್ಮಾಣ ಮತ್ತು ದುರಸ್ಥಿ ಕಾರ್ಯ; ಸ್ವಚ್ಛ ಭಾರತ್ ಮಿಷನ್(ಗ್ರಾಮೀಣ)/15ನೇ ಹಣಕಾಸು ಯೋಜನೆಯ ಅನುದಾನದಡಿ ಘನ ಮತ್ತು ತ್ಯಾಜ್ಯ ವಿಲೇವಾರಿಯನ್ನು ಅನುಷ್ಟಾನಗೊಳಿಸಲಾಗುವುದು ಎಂದರು
ಅಮೃತ ಗ್ರಾಮ ಯೋಜನೆಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕಿರುವುದರಿಂದ ಶೀಘ್ರವಾಗಿ ಗ್ರಾಮ ಪಂಚಾಯಿತಿಗಳನ್ನು ಗುರುತಿಸಿ ಹೆಸರು ನೀಡಬೇಕು. ಈ ಯೋಜನೆಯ ಯಶಸ್ವಿಗಾಗಿ ಇತರೆ ಮೂಲಗಳಿಂದ ದೊರೆಯಬಹುದಾದ ಆರ್ಥಿಕ ದೇಣಿಗೆ, ಭೌತಿಕ ಸಂಪನ್ಮೂಲ, ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನ, ಸಿಎಸ್‌ಆರ್ ಅನುದಾನವನ್ನು ಒಗ್ಗೂಡಿಸುವ ಮೂಲಕ ಅನುಷ್ಟಾನಗೊಳಿಸಬಹುದಾಗಿದೆ ಎಂದು ಹೇಳಿದರು.
ಅಮೃತ ಮಹೋತ್ಸವ ವಸತಿ ಯೋಜನೆ:–
ಅಮೃತ ಮಹೋತ್ಸವ ವಸತಿ ಯೋಜನೆಯಡಿ ವಸತಿ ರಹಿತರಿಗೆ ವಸತಿ ನಿರ್ಮಿಸಲು ಜಿಲ್ಲೆಯಲ್ಲಿ 43 ಗ್ರಾಮ ಪಂಚಾಯತ್‌ಗಳನ್ನು ಆಯ್ಕೆ ಮಾಡಬೇಕಾಗಿದ್ದು, ಈ ಪೈಕಿ ತಾಲೂಕಿಗೆ ಕನಿಷ್ಟ 2 ಗ್ರಾಮ ಪಂಚಾಯತ್‌ಗಳನ್ನು ಆಯ್ಕೆ ಮಾಡಿ ಆ ಗ್ರಾಮ ಪಂಚಾಯತ್‌ಗಳಲ್ಲಿ ವಸತಿ ಇಲ್ಲದವರಿಗೆ ವಸತಿ ನಿರ್ಮಿಸಲಾಗುವುದು ಎಂದು ಸಭೆಗೆ ವಿದ್ಯಾಕುಮಾರಿ ಮಾಹಿತಿ ನೀಡಿದರು.
ತ್ಯಾಜ್ಯ ವಿಲೇವಾರಿ ಘಟಕಗಳ ನಿರ್ಮಾಣ:–
ಸ್ವಚ್ಛ ಭಾರತ್ ಯೋಜನೆಯಡಿ ಗ್ರಾಮ ಪಂಚಾಯಿತಿಗಳಲ್ಲಿ ಶೇ.100ರಷ್ಟು ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಬೇಕಾಗಿದ್ದು, ನಿವೇಶನ ಸಮಸ್ಯೆ ಇರುವ ಗ್ರಾಮ ಪಂಚಾಯತ್‌ಗಳಲ್ಲಿ ಬೇರೆ ನಿವೇಶನ ಗುರುತಿಸಿ ಅಥವಾ ಗ್ರಾಮಸ್ಥರನ್ನು ಮನವೊಲಿಸಿ ವಿಲೇವಾರಿ ಘಟಕ ನಿರ್ಮಿಸಲು ಆದ್ಯತೆ ಕೊಡುವಂತೆ ಸಚಿವರು ಶಾಸಕರಿಗೆ ತಿಳಿಸಿದರು.
ಜಲಜೀವನ್ ಮಿಷನ್ ಯೋಜನೆ ಯಶಸ್ವಿಗೊಳಿಸಬೇಕು:-
ಜಲಜೀವನ್ ಮಿಷನ್ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸಲು ಎಲ್ಲಾ ಶಾಸಕರು ಕೈಜೋಡಿಸಬೇಕು. ತಮ್ಮ ತಾಲೂಕು ವ್ಯಾಪ್ತಿಯಲ್ಲಿ ಅನುಷ್ಟಾನಗೊಳ್ಳುತ್ತಿರುವ ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿಯನ್ನು ಶೀಘ್ರ ಮುಗಿಸುವ ಮೂಲಕ ಈ ಯೋಜನೆಯ ಯಶಸ್ವಿಗೆ ಸಹಕರಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಶಾಸಕರಾದ ಡಾ.ರಂಗನಾಥ್, ಜಯರಾಮ್, ಸಿ.ಎಂ. ರಾಜೇಶ್‌ಗೌಡ, ವೀರಭದ್ರಯ್ಯ, ಚಿದಾನಂದ್‌ಗೌಡ, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.