ಶಿರಾ : ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಶ್ರಮಿಸುತ್ತಿದ್ದು, ಪ್ರಧಾನಿ ಮೋದಿ ರೈತಪರ ಕಾಳಜಿ ಇಟ್ಟುಕೊಂಡು ಕೃಷಿ ಸಮ್ಮಾನ ಯೋಜನೆಗೆ 6 ಸಾವಿರ ನೀಡಿದರೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರೈತರ ಮಕ್ಕಳಿಗೆ ಶಿಷ್ಯವೇತನ ಯೋಜನೆಗೆ ಜಾರಿಗೆ ತಂದಿದ್ದಾರೆ ಎಂದು ರಾಜ್ಯ ತೆಂಗು ಮತ್ತು ನಾರು ಅಭಿವೃದ್ದಿ ನಿಗಮದ ಅಧ್ಯಕ್ಷ ಬಿ.ಕೆ.ಮಂಜುನಾಥ್ ಹೇಳಿದರು.
ಅವರು ರಂಗನಾಥ ನಗರದ ಡಾ.ಬಾಬು ಜಗಜೀವನ ರಾಂ ಭವನದಲ್ಲಿ ನಗರ ಬಿಜೆಪಿ ಎಸ್‌ಸಿ ಮೋರ್ಚಾ ಘಟಕದ ವತಿಯಿಂದ ಏರ್ಪಡಿಸಿದ್ದ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಕಳೆದ 7 ವರ್ಷಗಳಿಂದಲೂ ನರೇಂದ್ರ ಮೋದಿಯವರು ಉತ್ತಮ ಆಡಳಿತ ನೀಡಿದ್ದಾರೆ. ಕೋವಿಡ್ ಸೋಂಕಿಗೆ ಸ್ವದೇಶಿ ಲಸಿಕೆಯನ್ನು ಉತ್ಪಾದಿಸಿ ದೇಶದ ಜನರ ಆರೋಗ್ಯ ಸುರಕ್ಷತೆ ಕಾಪಾಡಿದ್ದಾರೆ. ಇದಲ್ಲದೆ ಹಲವು ದೇಶಗಳಿಗೆ ನಮ್ಮ ದೇಶದ ಲಸಿಕೆಯನ್ನು ರಪ್ತು ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು.
ಜಿಲ್ಲಾ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಗೂ ಸಮಾನ ಅವಕಾಶ ನೀಡುವ ನೀತಿ ಇರುವ ಪಕ್ಷ ಎಂದರೆ ಅದು ಭಾರತೀಯ ಜನತಾ ಪಕ್ಷದಲ್ಲಿ ಮಾತ್ರ. ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರಕಾರವು ಬಡವರ ಕಲ್ಯಾಣಕ್ಕಾಗಿ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಬಿಜೆಪಿ ಪಕ್ಷದಲ್ಲಿ ರೈತರು, ಬಡವರು ದೀನ ದಲಿತರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಗರ ಬಿಜೆಪಿ ಅಧ್ಯಕ್ಷ ವಿಜಯರಾಜ್, ನಗರ ಎಸ್‌ಸಿ ಮೋರ್ಚಾ ಅಧ್ಯಕ್ಷ ಹನುಮಂತರಾಜು, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹನುಮಂತನಾಯ್ಕ, ಕಾರ್ಯದರ್ಶಿ ಓಂಕಾರ್, ಬಂಜಾರ ಲಂಬಾಣಿ ರಕ್ಷಣಾ ವೇದಿಕೆ ಅಧ್ಯಕ್ಷ ಎಲ್.ಟಿ.ಶ್ರೀನಿವಾಸ ನಾಯ್ಕ, ಪೆದ್ದರಾಜು ಮಧು, ರಮೇಶ್, ಮಾರುತಿ, ಮಹಿಳಾ ಘಟಕದ ವನಿತಾ, ಲಕ್ಷ್ಮೀಕಾಂತ್, ರಾಜೇಶ್ವರಿ, ಶಾಂತಮ್ಮ, ಶಾರದಮ್ಮ ಸೇರಿದಂತೆ ಹಲವರು ಹಾಜರಿದ್ದರು.