ಪಾವಗಡ : ಮಹಿಳೆಯರು ಮತ್ತು ಮಕ್ಕಳಲ್ಲಿ ಅಪೌಷ್ಠಿಕತೆ ಹೋಗಲಾಡಿಸುವುದು ಹಾಗೂ ಸರ್ಕಾರದ ವಿವಿಧ ಯೋಜನೆಗಳನ್ನು ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸುವಲ್ಲಿ ಅಂಗನವಾಡಿ ಸಿಬ್ಬಂದಿ ಕಾರ್ಯ ಶ್ಲಾಘನೀಯವಾಗಿದೆ ಎಂದು ಶಾಸಕ ವೆಂಕಟೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಸಾರ್ವಜನಿಕ ಆಸ್ಪತ್ರೆ ವತಿಯಿಂದ ಸೋಮವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಏರ್ಪಡಿಸಿದ್ದ ಪೌಷ್ಠಿಕ ಆಹಾರದ ಕಿಟ್ ವಿತರಣೆ ಮತ್ತು ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಸರ್ಕಾರ ಮಹಿಳೆಯರ ಸಬಲೀಕರಣಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಿದೆ, ತಾಯಂದಿರು ಮಕ್ಕಳ ಆರೈಕೆ ಮತ್ತು ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಕೊಡಬೇಕು, ಪೌಷ್ಠಿಕ ಹಾಲು ಮತ್ತು ಹಾಲಿನ ಪದಾರ್ಥಗಳ ಉತ್ಪಾದನೆಯಲ್ಲಿ ರಾಜ್ಯದಲ್ಲಿ ಪ್ರಖ್ಯಾತಿ ಪಡೆದಿರುವ ಕೆ.ಎಂ.ಎಪ್ ಸಂಸ್ಥೆ ಸಹಕಾರದೊಂದಿಗೆ ಸರ್ಕಾರ ಸಿಡಿಪಿಒ ಇಲಾಖೆ ಮೂಲಕ ಮೂರು ಸಾವಿರ ವೆಚ್ಚದ ಪೌಷ್ಠಿಕಾಂಶದ ಕಿಟ್ ಉಚಿತವಾಗಿ ವಿತರಿಸುತ್ತಿದೆ. ತಾಲೂಕಿನಲ್ಲಿರುವ ಮಕ್ಕಳು, ಬಾಣಂತಿಯರು ಹಾಗೂ ಗರ್ಭಿಣಿಯರು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆನೀಡಿದರು.
ಸಮಾಜದಲ್ಲಿ ಆರೋಗ್ಯ ಮತ್ತು ಪೌಷ್ಠಿಕತೆ ಕಾಪಾಡುವ ಮೂಲಕ ಅಂಗನವಾಡಿ ಸಿಬ್ಬಂದಿ ಸ್ವಾಸ್ತö್ಯ ಸಮಾಜದ ನಿರ್ಮಾಣಕ್ಕೆ ಕಾರಣರಾಗಿದ್ದಾರೆ, ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದೊಂದಿಗೆ ತಾಲೂಕು ಸಾರ್ವಜನಿಕ ಆಸ್ಪತ್ರೆ ಸಹಕಾರ ಪಡೆದು ಪೋಷಣ್ ಮಾಸಾಚರಣೆ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪೌಷ್ಠಿಕ ಆಹಾರ ಸೇವನೆ, ಆರೋಗ್ಯ ಕುರಿತು ಜಾಗೃತಿ ಮೂಡಿಸುತ್ತಿರುವುದು ಸ್ವಾಗತಾರ್ಹ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಹೆಚ್.ವಿ.ವೆಂಕಟೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ನಾರಾಯಣ, ಎಸಿಡಿಪಿಒ ರಖೀಬ್‌ಉಲ್ಲಾ ಫಲಾನುಭವಿಗಳಿಗೆ ಪೌಷ್ಠಿಕಾಂಶ ಭರಿತ ಆಹಾರದ ಕಿಟ್‌ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಸಿಡಿಪಿಒ ನಾರಾಯಣ, ಎಸಿಡಿಪಿಒ ರಖೀಬ್ ಉಲ್ಲಾ, ಪುರಸಭೆ ಸದಸ್ಯರಾದ ಸುದೇಶ್ ಬಾಬು, ರಾಜೇಶ್, ರವಿ, ವೇಲುರಾಜು, ಆರೋಗ್ಯ ಇಲಾಖೆಯ ಸುರೇಶ್ ಹಾಗೂ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅದ್ಯಕ್ಷೆ ಸುಶೀಲಮ್ಮ, ಇಲಾಖೆಯ ಮೇಲ್ವಿಚಾರಕಿಯರಾದ ಮಮತ, ಭಾಗ್ಯಲಕ್ಷ್ಮೀ, ಸುಧಾ, ವಿಜಯಲಕ್ಷ್ಮೀ, ಜಯಲಕ್ಷ್ಮೀ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.