ಮಧುಗಿರಿ : ಮಹಿಳೆಯರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಎಲ್ಲಾರೂ ಒಗ್ಗಟ್ಟಿನಿಂದ ಸೇರಿ ಅನೇಕ ರೀತಿಯ ಸಮಾಜಸೇವೆಗಳನ್ನು ಮಾಡುವ ಮೂಲಕ ಉತ್ತಮವಾದ ಸಮಾಜ ನಿರ್ಮಾಣಕ್ಕೆ ಇಂದು ಮಹಿಳೆಯರ ಪಾತ್ರ ಬಹು ಮುಖ್ಯವಾಗಿದೆ ಎಂದು ಹಾಸನ ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವ ಕೆ.ಎನ್ ರಾಜಣ್ಣ ಅಭಿಪ್ರಾಯಪಟ್ಟರು.
ಪಟ್ಟಣದ ಪುರಸಭೆಯ ಸಮೀಪವಿರುವ ಮಹಿಳಾ ಸಮಾಜದಲ್ಲಿ ಶನಿವಾರ ಬಾಲಭವನದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಸಮಾಜದ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,
ಹಿರಿಯರ ಮುಂದಲೋಚನೆಯಿಂದಾಗಿ ಪಟ್ಟಣದ ಕೇಂದ್ರ ಸ್ಥಾನದಲ್ಲಿ ಉತ್ತಮ ವೇದಿಕೆ ಸೃಷ್ಟಿಯಾಗಿದೆ. 70 ದಶಕದಲ್ಲಿನ ಸ್ಥಳೀಯ ಹಿರಿಯ ಪರಿಣಿತ ವಕೀಲರಾದ ಶಂಕರಯ್ಯ , ಚಿಕ್ಕಯ್ಯ , ಟಿ.ಎಸ್ ಕೃಷ್ಣ ಮೂರ್ತಿ ರವರುಗಳು ಸಣ್ಣ ವಿಚಾರಗಳನ್ನು ಸುಪ್ರೀಂ ಕೊರ್ಟ್ ವರೆವಿಗೂ ತೆಗೆದು ಕೊಂಡು ಹೋಗಿ ಕಕ್ಷಿದಾರರಿಗೆ ನ್ಯಾಯ ಒದಗಿಸಿ ಕೊಟ್ಟಿದ್ದಾರೆ.
ತಾಲೂಕಿನ ಮಹಿಳಾ ಸಮಾಜ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅತೀ ಹೆಚ್ಚಿನ ಸೇವೆಯನ್ನು ಸಮಾಜಕ್ಕೆ ನೀಡಿದೆ. ಡಾ.ಹನುಮಕ್ಕ ಹಾಗೂ ಇಂದುಮತಿ ಪ್ರಸನ್ನ ಕುಮಾರ್ ಸೇರಿದಂತೆ ಮತ್ತಿತರರ ಕೊಡುಗೆ ಈ ಮಹಿಳಾ ಸಮಾಜಕ್ಕೆ ಹೆಚ್ಚಿದೆ.
ನೂರು ವರ್ಷಗಳ ಹಿಂದೆ ಆರಂಭವಾದ ಮಹಿಳಾ ಸಮಾಜ ಇಲ್ಲಿಯವರೆಗೂ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ.
ಮಕ್ಕಳಲ್ಲಿರುವ ಬುದ್ಧಿಶಕ್ತಿ ಪ್ರತಿಭೆಗಳನ್ನು ಸಮಾಜಗಳು ಗುರುತಿಸುತ್ತವೆ, ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡದೇ ಹೋದರೆ ಸಮಾಜಕ್ಕೆ ಹೊರೆಯಾಗುತ್ತಾರೆ ಆದ್ದರಿಂದ ಪೋಷಕರು ತಮ್ಮ ಮಕ್ಕಳನ್ನು ಉತ್ತಮ ಗುಣವಂತರನ್ನಾಗಿಸಿ. ಹೊಸ ಪೀಳಿಗೆಯನ್ನು ನಿಮ್ಮ ಜೊತೆ ಸೇರಿಸಿಕೊಂಡು ಅವರಿಗೆ ನಿಮ್ಮಗಳ ಅನುಭವ ದಾರೆ ಎರೆದು ಸಮಾಜದ ಸತ್ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗುವ ಕೆಲಸ ನಿರ್ವಹಿಸಿ ಎಂದು ಕಿವಿ ಮಾತು ಹೇಳಿದರು
ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮ ಗಾಂಧೀಜಿ ವೈಶ್ಯ ( ಬನಿಯಾ)ಸಮುದಾಯದವರು. ಅವರ ಕುಟುಂಬ ಆರ್ಥಿಕವಾಗಿ ಸಧೃಡವಾಗಿದ್ದರು ಸಹ ದೇಶದ ಜನರಿಗೆ ನ್ಯಾಯ ಒದಗಿಸಿ ಕೊಟ್ಟರು ಇವರ ಉಡುಗೆ ತೊಡುಗೆಗಳು ಸಾಮಾನ್ಯವಾಗಿದ್ದವು. ಜೈನ ಹಾಗೂ ವೈಶ್ಯ ಸಮುದಾಯದವರು ಸಂಖ್ಯೆಯಲ್ಲಿ ಕಡಿಮೆ ಇರಬಹುದು. ಆದರೆ ಕೊಡುಗೈ ದಾನಿಗಳು ಎಂದರು.
ಹಲವಾರು ದಶಕಗಳಿಂದ ನೆನೆಗುದಿಗೆ ಸರಿದಿದ್ದ ಕನ್ನಡ ಭವನವನ್ನು ನೀವು ಮಾಜಿ ಶಾಸಕರು ಏಕೆ ಅಭಿವೃದ್ಧಿಗೆ ಮುಂದಾಗುತ್ತಿರಾ ಎಂದು ಹಲವರು ನನ್ನನ್ನು ಈ ಹಿಂದೆ ಪ್ರಶ್ನಿಸಿದರು ಆದರೆ ಆ ಮಾತುಗಳಿಗೆ ಕಿವಿಗೊಡದೆ ಜಿಲ್ಲೆಯ ಮತ್ತು ತಾಲೂಕಿನ ಕನ್ನಡ ಭವನಕ್ಕೆ ನೆರವು ನೀಡಿದ್ದೇನೆ.
ಜಿಲ್ಲೆಯ ಯಾವುದೇ ಕನ್ನಡ ಭವನವನ್ನು ಸಿಎಂ ಉದ್ಘಾಟಿಸಿದ ದಾಖಲೆಯಿಲ್ಲ. ಆದರೆ ಮಧುಗಿರಿ ಕನ್ನಡ ಭವನವನ್ನು ಸಿಎಂ ಸಿದ್ದರಾಮಯ್ಯನವರು ಉದ್ಘಾಟನೆ ನೆರವೇರಿಸಿರುವುದು ದಾಖಲೆಯಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಹತ್ವಕಾಂಕ್ಷೆ ಯೋಜನೆಯಾದ ಕ್ಷೀರಭಾಗ್ಯ ದಶಮಾನೋತ್ಸವ ಕಾರ್ಯಕ್ರಮ ಮಧುಗಿರಿ ಇತಿಹಾಸದಲ್ಲೇ ಅತೀ ದೊಡ್ಡ ಕಾರ್ಯಕ್ರಮವಾಗಿ ದಾಖಲಾಗಿದ್ದು ಮಧುಗಿರಿಯ ಜನತೆಗೆ ಇದೇ ಸಂಧರ್ಭದಲ್ಲಿ ಅಭಿನಂದಿಸುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಕುಂಚಿಟಿಗ ಸಮುದಾಯದ ಪಾಬಲ್ಯ ಹೆಚ್ಚಾಗಿದ್ದು, ಸಮುದಾಯಕ್ಕೆ ಪ್ರಾತಿನಿದ್ಯ ನೀಡುವ ಉದ್ದೇಶದಿಂದ ಓಬಿಸಿ ಮೀಸಲಾತಿಗೆ ಸೇರಿಸಲು ಈಗಾಗಲೇ ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನಿಸಿ, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು
ನಾವು ಮಾಡುವ ಚಿಂತನೆಗಳು, ಆತ್ಮದಲ್ಲೂ ಕೃತಿಯಲ್ಲೂ ಒಂದೇ ಇರಬೇಕು. ನನಗೆ ಕ್ಷೇತ್ರದಲ್ಲಿ ಅತೀ ಹೆಚ್ಚಿನ ಗೆಲುವಿನ ಅಂತರ ನೀಡಿದ್ದು , ನಿಮ್ಮ ಪ್ರೀತಿ ವಿಶ್ವಾಸ ಉಳಿಸಿಕೊಂಡು ಹೋಗುವ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ರಿಷಿ ಆನಂದ್, ತಹಶೀಲ್ದಾರ್ ಸಿಬ್ಗತ್ ವುಲ್ಲಾ,
ಪುರಸಭಾ ಮಾಜಿ ಅಧ್ಯಕ್ಷ ಎನ್.ಗಂಗಣ್ಣ , ಡಿವೈಎಸ್ಪಿ ರಾಮಚಂದ್ರಪ್ಪ ,
ಬಿಇಒ ಹನುಂತರಾಯಪ್ಪ , ಡಿ.ಜಿ ಶಂಕರನಾರಾಯಣ ಶೆಟ್ಟಿ , ತುಂಗೋಟಿ ರಾಮಣ್ಣ , ಎಂ.ಎಸ್.ಶಂಕರನಾರಾಯಣ , ಮಹಿಳಾ ಸಮಾಜದ ಅಧ್ಯಕ್ಷೆ ಪುಷ್ಪಾವತಮ್ಮ, ಕಾರ್ಯದರ್ಶಿ ನಂಜಮ್ಮ, ಪದಾಧಿಕಾರಿಗಳಾದ ಸಹನಾ ನಾಗೇಶ್, ಭಾರತಮ್ಮ, ನಂಜಮ್ಮ ನಾಗರಾಜು, ಗಾಯತ್ರಿ , ಲಕ್ಷ್ಮೀ , ಸಾವಿತ್ರಮ್ಮ , ಆರುಂಧತಿ ರಾಜ್, ವಿಜಯ ಕುಮಾರಿ, ಸುಜಾತ, ಲಕ್ಷ್ಮೀ ಬಾಯಿ, ಅನ್ನಪೂರ್ಣಮ್ಮ, ಶಾಂತಮ್ಮ ಹಾಗೂ ಹಿರಿಯ ,ಕಿರಿಯ ಸದಸ್ಯರು ಇತರರಿದ್ದರು.