ಹೆತ್ತೇನಹಳ್ಳಿ ಶ್ರೀ ಆಧಿಶಕ್ತಿ ಮಾರಮ್ಮ ದೇವಸ್ಥಾನ ಜೀರ್ಣೋದ್ಧಾರ : 2.5 ಕೋಟಿ ರೂಗಳಲ್ಲಿ ಭವ್ಯ ದೇಗುಲ ನಿರ್ಮಾಣ : ಶಾಸಕ ಬಿ. ಸುರೇಶಗೌಡ
ತುಮಕೂರು : ದೇವಸ್ಥಾನ ಸಂಪೂರ್ಣ ಶಿಥಿಲಾವಸ್ಥೆಯಲ್ಲಿ ಇರುವುದರಿಂದ ಭಕ್ತಾದಿಗಳ ಆಶಯದಂತೆ ದೇವಸ್ಥಾನದ ನಿರ್ಮಾಣದ ಕಾರ್ಯವನ್ನು ಎರಡೂವರೆ ಕೋಟಿ ರೂಪಾಯಿಗಳ ಅಂದಾಜು ಮೊತ್ತದಲ್ಲಿ ವಾಸ್ತು ಶಿಲ್ಪ ಮತ್ತು ತಾಂತ್ರಿಕತೆಯನ್ನು ಅಳವಡಿಸಿಕೊಂಡು ಆಧುನಿಕವಾಗಿ ಭವ್ಯವಾದ ದೇಗುಲ ನಿರ್ಮಾಣದ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ ಇಂದು ಶಾಸಕ ಬಿ ಸುರೇಶ್ ಗೌಡ ತಿಳಿಸಿದರು.
ಇಂದು ಗ್ರಾಮಾಂತರ ಕ್ಷೇತ್ರದ ಹೆತ್ತೇನಹಳ್ಳಿ ಗ್ರಾಮದಲ್ಲಿ ಇರುವ ಇತಿಹಾಸ ಪ್ರಸಿದ್ಧ ಶ್ರೀ ಆದಿಶಕ್ತಿ ಮಾರಮ್ಮ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದ ಭೂಮಿ ಪೂಜ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
ದೇವಸ್ಥಾನದ ನಿರ್ಮಾಣಕ್ಕೆ ತನು ಮನ ಧನ ಸಹಾಯದ ಅವಶ್ಯಕತೆ ಇರುವುದರಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಧನ ಸಹಾಯ ಮಾಡುವಂತೆ ಇದೇ ಸಂದರ್ಭದಲ್ಲಿ ಶಾಸಕ ಬಿ. ಸುರೇಶ್ ಗೌಡ ಭಕ್ತಾದಿಗಳಲ್ಲಿ ಮನವಿ ಮಾಡಿದರು.
ಶತಮಾನಗಳ ಇತಿಹಾಸ ಸಾರುವ ಶ್ರೀ ಆದಿಶಕ್ತಿ ಮಾರಮ್ಮ ದೇವಸ್ಥಾನವನ್ನು 1235 ರಲ್ಲಿ ನಿರ್ಮಾಣ ಮಾಡಲಾಗಿದೆ. ಯಾದವ ಸಮುದಾಯದ ಕುರಿಗಾಹಿ ಕುರಿಗಳನ್ನು ಬಿಟ್ಟು ರಾತ್ರಿ ಮಲಗುವ ಮುನ್ನ ಅಡುಗೆ ಮಾಡಲು ಅಲ್ಲಿದ್ದಂತ ಕಲ್ಲುಗಳನ್ನು ಬಳಕೆ ಮಾಡಿ ಅಡುಗೆ ಮಾಡಲು ಹೋದಾಗ ಅವನು ಸಾಕಿರುವ ಸಾವಿರಾರು ಕುರಿಗಳು ಏಕ ಕಾಲಕ್ಕೆ ಅಸುನೀಗುತ್ತವೆ. ಇದನ್ನು ಕಂಡು ಕಂಗಾಲಾದ ಕುರಿಗಾಹಿ ದಿಕ್ಕು ತೋಚದಂತ ಆದಾಗ ಕೊರವಂಜನ ರೂಪದಲ್ಲಿ ಬಂದಂತ ದೇವಿಯು ಕುರಿ ಹಾಲಿನಲ್ಲಿ ನನ್ನ ಗುಡಿ ಕಟ್ಟಿಸುವುದಾಗಿ ಪ್ರಾರ್ಥನೆ ಮಾಡಿಕೋ ನಿನ್ನ ಕುರಿಗಳು ಬದುಕುತ್ತವೆ ಎಂದು ಹೇಳುತ್ತದೆ ಕೊರವಂಜಿ ಹೇಳಿದಂತೆ ಕುರಿಗಾಹಿ ಪ್ರಾರ್ಥಿಸಿಕೊಳ್ಳುತ್ತಾನೆ ತರುವಾಯ ಕುರಿಗಳು ಬದುಕುತ್ತವೆ, ಅದೇ ಕುರಿಗಳ ಹಾಲಿನಿಂದ ಗರ್ಭಗುಡಿಯನ್ನು ಕಟ್ಟಿರುವ ಇತಿಹಾಸವಿರುವುದಾಗಿ ಉಲ್ಲೇಖ ಇದೆ ಹಾಗೆ *ಕುರಿ ಹಾಲಿನ ನೊರೆ ಚಂದ ಹೆತ್ತೇನಹಳ್ಳಿ ಮಾರಮ್ಮನ ವಾಗ್ದಾನ ಚಂದ* ಎಂಬ ನಾಣ್ಣುಡಿ ಕೂಡ ಇದೆ.
ಅನ್ನದಾಸೋಹ ನಡೆಸಲು ಸೂಚನೆ
ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಮಂಗಳವಾರ ಶುಕ್ರವಾರ ಹಾಗೂ ಭಾನುವಾರದಂದು ಅನ್ನದಾಸೋಹಕ್ಕೆ ವ್ಯವಸ್ಥೆ ಮಾಡುವಂತೆ ತಹಸಿಲ್ದಾರ್ ಅವರಿಗೆ ಸೂಚಿಸಿದರು.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಇತಿಹಾಸ ಸಾರುವ ಹೆತ್ತೇನಹಳ್ಳಿ ಮಾರಮ್ಮ, ಕೈದಾಳ ಚೆನ್ನಕೇಶವ, ಗೂಳೂರು ಗಣೇಶ, ಸೇರಿದಂತೆ 10 ಹಲವು ವೈಶಿಷ್ಟ್ಯಗಳ ಇತಿಹಾಸ ಇರುವ ದೇವಾಲಯಗಳು ನನ್ನ ಕ್ಷೇತ್ರದಲ್ಲಿ ಇವೆ ಎಲ್ಲವು ಯಾತ್ರಾಸ್ಥಳಗಳಾಗಿವೆ ಎಂದು ಶಾಸಕ ಬಿ ಸುರೇಶ್ ಗೌಡ ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ಗೂಳೂರು ಶಿವಕುಮಾರ್, ರಾಮಚಂದ್ರಪ್ಪ, ಸಿದ್ದೇಗೌಡ ನರಸಿಂಹಮೂರ್ತಿ, ಮುಖಂಡರಾದ ಸಾರಂಗಿ ಶಂಕರ್, ಹೆತ್ತೇನಹಳ್ಳಿ ವೆಂಕಟೇಶ್, ರವಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಧನಲಕ್ಷ್ಮಿ, ಕೈದಾಳ ಶಂಕರ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರಭಾಕರ, ಉಪತಹಸಿಲ್ದಾರ್ ಭಾನುಪ್ರಕಾಶ್ ಕಂದಾಯ ನಿರೀಕ್ಷಕ ರಮೇಶ್ ಗುತ್ತಿಗೆದಾರ ಗಿರೀಶ್, ಮುನಿಯಂಡಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.