ಜಿಲ್ಲೆತುಮಕೂರುತುಮಕೂರು ನಗರಸುದ್ದಿ

ತುಮಕೂರಿಗೆ ಇನ್ನೂ ಹೆಚ್ಚಿನ ರೈಲು ಸಂಪರ್ಕ ಅಗತ್ಯವಿದೆ : ಸಂಸದ ಜಿ.ಎಸ್‌.ಬಸವರಾಜು

ತುಮಕೂರು ಜಿಲ್ಲಾ ರೈಲ್ವೇ ಪ್ರಯಾಣಿಕರ ವೇದಿಕೆಯಿಂದ ಪ್ರತಿಭಾ ಪುರಸ್ಕಾರ

ತುಮಕೂರು : ತುಮಕೂರು ನಗರದಲ್ಲಿ ವಂದೇ ಭಾರತ್ ರೈಲು ನಿಲುಗಡೆಗೆ ರೈಲ್ವೇ ಬೋರ್ಡ್ ಹಾಗೂ ರೈಲ್ವೇ ಸಚಿವರೊಂದಿಗೆ ಮಾತನಾಡಿದ್ದೇನೆ ಎಂದು ಸಂಸದ ಜಿ.ಎಸ್. ಬಸವರಾಜ್ ತಿಳಿಸಿದರು.

ತುಮಕೂರು ಜಿಲ್ಲಾ ರೈಲ್ವೇ ಪ್ರಯಾಣಿಕರ ವೇದಿಕೆ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಮಾತನಾಡಿದ ಅವರು, ತುಮಕೂರು ನಗರ ಸಾಕಷ್ಟು ಅಭಿವೃದ್ಧಿಯಾಗುತ್ತಿದೆ. ಸ್ಮಾರ್ಟ್ ಸಿಟಿಯಾಗಿ, ಕೈಗಾರಿಕಾ ಪ್ರದೇಶವಾಗಿಯೂ ಹೆಚ್ಚು ಪ್ರಾತಿನಿಧ್ಯ ಪಡೆಯುತ್ತಿದ್ದು, ಬೆಂಗಳೂರಿನಿಂದ ತುಮಕೂರಿಗೆ ಬಂದು ವಾಸಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ಪ್ರಯಾಣಕ್ಕೆ ಇನ್ನೂ ಹೆಚ್ಚಿನ ರೈಲ್ವೇ ಸಂಪರ್ಕ ಪಡೆಯುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಶ್ರಮಿಸುತ್ತಿರುವುದಾಗಿ ಬಸವರಾಜ್ ತಿಳಿಸಿದರು.

ಪ್ರಯಾಣಿಕರ ವೇದಿಕೆ ಮನವಿ ಮೇರೆಗೆ ಜಿಲ್ಲಾ ರೈಲ್ವೇ ಪ್ರಯಾಣಿಕರ ಅನುಕೂಲಕ್ಕೆ ನನ್ನ ಅವಧಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದು, ಮುಂದೆ ಬರುವ ಜನಪ್ರತಿನಿಧಿಗಳು ಕೂಡಾ ಪ್ರಯಾಣಿಕರ ಬೇಡಿಕೆಗಳಿಗೆ ಸ್ಪಂದಿಸಿ ಕೆಲಸ ನಿರ್ವಹಿಸಬೇಕೆಂದು ಸಂಸದರು ಆಶಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಹಾನಗರ ಪಾಲಿಕೆ ಸದಸ್ಯೆ ಗಿರಿಜಾ ಧನಿಯಾ ಕುಮಾರ್ ಮಾತನಾಡಿ, ರೈಲ್ವೇ ಪ್ರಯಾಣಿಕರ ಬೇಡಿಕೆಗಳಿಗೆ, ಅಗತ್ಯಗಳಿಗೆ ಪೂರಕವಾಗಿ ವೇದಿಕೆ ಶ್ರಮಿಸುತ್ತಿದ್ದು, ಇಲ್ಲಿ ಪುರಸ್ಕಾರಗೊಂಡ ವಿದ್ಯಾರ್ಥಿಗಳು ಮುಂದಿನ ವಿದ್ಯಾರ್ಥಿಗಳು ಮಾದರಿಯಾಗಿ ಬೆಳೆದು ಸಮಾಜಕ್ಕೆ ಆದರ್ಶರಾಗಬೇಕೆಂದು ಕಿವಿಮಾತು ಹೇಳಿದರು.

ನೈಋತ್ಯ ರೈಲ್ವೇ ಹುಬ್ಬಳ್ಳಿಯ ಸಹಾಯಕ ವಾಣಿಜ್ಯ ಅಧಿಕಾರಿ ಡಿ. ಧನಂಜಯ ಅವರು ಮಾತನಾಡಿ, ರೈಲ್ವೇ ಇಲಾಖೆಯ ಎಲ್ಲ ಕಾರ್ಯಕ್ರಮಗಳಲ್ಲೂ ಪ್ರಯಾಣಿಕರ ವೇದಿಕೆ ಅತ್ಯಂತ ಸಕ್ರಿಯವಾಗಿ ಭಾಗವಹಿಸುತ್ತಿದೆ. ಅಲ್ಲದೆ ಪ್ರಯಾಣಿಕರ ಅಗತ್ಯಗಳಿಗೆ ತಕ್ಕಂತೆ ಸ್ಪಂದಿಸಿ ಅನುಕೂಲ ಕಲ್ಪಸುವಲ್ಲಿ ಶ್ರಮಿಸುತ್ತಿದೆ ಎಂದರು.

ರೋಟರಿ ತುಮಕೂರು ಅಧ್ಯಕ್ಷ ಸಿ. ನಾಗರಾಜ್ ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲೂ ವಿದ್ಯಾರ್ಥಿ ಜೀವನ ಅತ್ಯಂತ ಮಹತ್ವವಾದುದು. ಪ್ರತಿ ವಿದ್ಯಾರ್ಥಿಯೂ ಹೆತ್ತವರು, ಗುರುಗಳು ಹಾಗೂ ತುಮಕೂರು ನಗರಕ್ಕೆ ಒಳ್ಳೆಯ ಹೆಸರನ್ನು ತರಬೇಕು. ಮುಂದಿನ ಪೀಳಿಗೆಗೆ ಮಾದರಿಯಾಗಬೇಕು. ಸಮಾಜಕ್ಕೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿರುವ ಸಂಘ-ಸಂಸ್ಥೆಗಳ ಕಾರ್ಯಚಟುವಟಿಕೆಗಳಿಗೆ ಪೂರಕವಾಗಿ ಸ್ಪಂದಿಸುವ ಅಗತ್ಯವಿದೆ ಎಂದರು.
ರೋಟರಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎಸ್.ಎಲ್. ಕಾಡದೇವರ ಮಠ್ ಮಾತನಾಡಿ, ತಮ್ಮ ರೀಡ್ ಬುಕ್ ಫೌಂಡೇಶನ್ ಬಗ್ಗೆ ಮಾಹಿತಿ ನೀಡಿ ವಿದ್ಯಾರ್ಥಿಗಳು ಪುಸ್ತಕ ಓದುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕೆಂದರು.

ವೇದಿಕೆ ಪ್ರಧಾನ ಕಾರ್ಯದರ್ಶಿ ಕರಣಂ ರಮೇಶ್ ಮಾತನಾಡಿ, ಪ್ರಯಾಣಿಕರ ಬಹುದಿನಗಳ ಬೇಡಿಕೆಯಾದ ಬೆಳಗ್ಗೆ ಮತ್ತು ಸಂಜೆ ಬೆಂಗಳೂರಿನಿಂದ ತುಮಕೂರು ಕಡೆಗೆ ಹೊಸ ಮೆಮು ರೈಲು ಸಂಚಾರ ಆರಂಭಗೊಳ್ಳುವ ಸಾಧ್ಯತೆಗಳು ನಿಚ್ಚಳವಾಗಿದ್ದು, ಇನ್ನೊಂದೆರಡು ತಿಂಗಳಲ್ಲಿ ಈ ಬೇಡಿಕೆ ಈಡೇರಬಹುದು ಎಂದರು.ತುಮಕೂರು ರೈಲು ಪ್ರಯಾಣಿಕರಿಗೆ ಅಗತ್ಯವಾದ ಅನುಕೂಲಗಳನ್ನು ಕಲ್ಪಿಸಲು ಪ್ರಯಾಣಿಕರ ವೇದಿಕೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ. ಹಲವಾರು ಬೇಡಿಕೆಗಳನ್ನು ಇಲಾಖೆ ಅಧಿಕಾರಿಗಳು ಈಡೇರಿಸಿದ್ದಾರೆ ಎಂದ ಅವರು ಇನ್ನು ಮುಂದೆಯೂ ಪ್ರಯಾಣಿಕರ ಅಗತ್ಯಗಳಿಗೆ ವೇದಿಕೆ ಸ್ಪಂದಿಸಲಿದೆ ಎಂದರು.

ಅಮೃತ್ ಭಾರತ್ ಯೋಜನೆ ಅಡಿಯಲ್ಲಿ ತುಮಕೂರು ರೈಲು ನಿಲ್ದಾಣ ಆಧುನಿಕವಾಗಿ ನವೀಕೃತಗೊಳ್ಳುತ್ತಿದ್ದು, ಪ್ರಯಾಣಿಕರಿಗೆ ಇನ್ನೂ ಹೆಚ್ಚಿನ ಸೌಲಭ್ಯಗಳು ದೊರೆಯಲಿವೆ. ಪ್ಲಾಟ್‌ಫಾರಂಗಳಲ್ಲಿ ಎರಡು ಎಕ್ಸಲೇಟರ್‌ಗಳು, ಮತ್ತೊಂದು ಪಾದಚಾರಿ ಮೇಲ್ಸೇತುವೆ, ಬಹು ಮಹಡಿಯ ವಾಹನ ನಿಲ್ದಾಣ ಹೀಗೆ ಹಲವಾರು ಅಭಿವೃದ್ಧಿ ಕಾರ್ಯಗಳಾಗಿ ಪ್ರಯಾಣಿಕರಿಗೆ ಅನುಕೂಲವಾಗಲಿವೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ವೇದಿಕೆ ಅಧ್ಯಕ್ಷೆ ಬಾ. ಹ. ರಮಾಕುಮಾರಿ ಮಾತನಾಡಿ, ಪ್ರಯಾಣಿಕರ ವೇದಿಕೆಯ ವ್ಯಾಪ್ತಿ ಜಿಲ್ಲಾ ಮಟ್ಟಕ್ಕೆ ವಿಸ್ತರಿಸಿದ್ದು, ಜಿಲ್ಲೆಯ ಎಲ್ಲ ರೈಲ್ವೇ ಪ್ರಯಾಣಿಕರ ಸಮಸ್ಯೆಗಳನ್ನು ಬಗೆಹರಿಸುವತ್ತ ಹೆಚ್ಚಿನ ರೀತಿಯಲ್ಲಿ ಶ್ರಮಿಸುವ ಜವಾಬ್ದಾರಿ ಹೊತ್ತಿದೆ ಎಂದರು. ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವುದ ಜೊತೆ ಜೊತೆಗೆ ಹಿರಿಯರು, ತಂದೆ-ತಾಯಿಯನ್ನು, ನೆರೆಹೊರೆಯವರನ್ನು ಗೌರವಿಸುವುದನ್ನು ಕಲಿಯಬೇಕು. ಸಮಾಜದೊಂದಿಗೆ ಬೆರೆತು ಆಗು-ಹೋಗುಗಳನ್ನು ಸೂಕ್ಷö್ಮವಾಗಿ ಗಮನಿಸಬೇಕು. ಹೀಗಾದಾಗ ಮುಂದೆ ಉನ್ನತ ಹುದ್ದೆ ಪಡೆದುಕೊಂಡಾಗ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮನಸ್ಥಿತಿ ಬೆಳೆಯಲು ಸಾಧ್ಯ ಎಂದರು.

ಇನ್ನರ್ ವ್ಹೀಲ್ ಅಧ್ಯಕ್ಷೆ ಭಾಗ್ಯಲಕ್ಷ್ಮಿ ನಾಗರಾಜ್, ಪ್ರತಿಭಾ ಪುರಸ್ಕೃತಿ ವಿದ್ಯಾರ್ಥಿಗಳ ಹೆತ್ತವರು, ಆಟೋ ಚಾಲಕರು ಹಾಗು ಹಲವು ರೈಲ್ವೇ ಪ್ರಯಾಣಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂಜನ್ ಪ್ರಾರ್ಥಿಸಿ, ವೇದಿಕೆ ನಿರ್ದೇಶಕ ಮಂಜೇಶ್ ಸ್ವಾಗತಿಸಿದರು. ಉಪಾಧ್ಯಕ್ಷ ಪರಮೇಶ್, ಜಂಟಿ ಕಾರ್ಯದರ್ಶಿಗಳಾದ ರಘು ರಾಮಚಂದ್ರಯ್ಯ, ಸಗರ ಚಕ್ರವರ್ತಿ ಅಭಿನಂದಿತರ ಪರಿಚಯ ಮಾಡಿಕೊಟ್ಟರು. ನಿರ್ದೇಶಕ ರಾಮಾಂಜನೇಯ ಕಾರ್ಯಕ್ರಮ ನಿರೂಪಿಸಿ, ಖಜಾಂಚಿ ಆರ್. ಬಾಲಾಜಿ ವಂದಿಸಿದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker