ಆರೋಗ್ಯಜಿಲ್ಲೆತುಮಕೂರುತುಮಕೂರು ನಗರಸುದ್ದಿ

ಜನರ ಸೇವೆ ಮಾಡುವುದೇ ವೈದ್ಯರ ಪ್ರಥಮ ಆದ್ಯತೆಯಾಗಬೇಕು : ಸಚಿವ ದಿನೇಶ್ ಗುಂಡೂರಾವ್

ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸೂಪರ್ ಸ್ಪೆಷಾಲಿಟಿ ಹೊರರೋಗಿಗಳ ವಿಭಾಗ ಮತ್ತು ಆಸ್ಪತ್ರೆಯ ಸಿಬ್ಬಂದಿಗಾಗಿ ವಸತಿ ಸಮುಚ್ಛಯ ಕಟ್ಟಡಗಳ ಉದ್ಘಾಟನೆ

ತುಮಕೂರು : ವೈದ್ಯಕೀಯ ಕ್ಷೇತ್ರ ಸೇವಾ ಕ್ಷೇತ್ರವಾಗಿದ್ದು, ಜನರ ಸೇವೆ ಮಾಡುವುದೇ ವೈದ್ಯರ ಪ್ರಥಮ ಆದ್ಯತೆಯಾಗಬೇಕು. ವೈದ್ಯರಲ್ಲಿ ಸೇವಾ ಮನಸ್ಥಿತಿ ಸದಾ ಜಾಗೃತವಾಗಿರಬೇಕು. ಜನರ ಜೀವನವನ್ನು ಬದಲಾಯಿಸುವ ಶಕ್ತಿ ವೈದ್ಯರಿಗೆ ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡುರಾವ್ ಅಭಿಪ್ರಾಯ ಪಟ್ಟರು.
ನಗರದ ಶ್ರೀ ಸಿದ್ದಾರ್ಥ ವೈದ್ಯಕೀಯ ಮಹಾವಿದ್ಯಾಲಯದ ಸೂಪರ್ ಸ್ಪೆಷಾಲಿಟಿ ಹೊರ ರೋಗಿ ವಿಭಾಗ ಹಾಗೂ ಸಿಬ್ಬಂದಿ ವಸತಿ ಗೃಹ ಸಮುಚ್ಚಯದ ಉದ್ಘಾಟನೆ ನೆರವೇರಿಸಿ, ನಂತರ ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಏರ್ಪಡಿಸಲಾಗಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಾವುದೇ ಅಭಿವೃದ್ದಿ ಹೊಂದುತ್ತಿರುವ ದೇಶಕ್ಕೆ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಬೆಳವಣಿಗೆ ಅತಿ ಮುಖ್ಯವಾಗುತ್ತದೆ. ಯಾವುದೇ ದೇಶದ ಅಥವಾ ರಾಜ್ಯದ ಆರೋಗ್ಯ ಮತ್ತು ಶೈಕ್ಷಣಿಕ ವಲಯ ಅತ್ಯುತ್ತಮವಾಗಿದ್ದಲ್ಲಿ ಆ ದೇಶವನ್ನು ಅಭಿವೃದ್ದಿ ಹೊಂದಿದ ದೇಶವೆಂದು ಪರಿಗಣಿಸಬಹುದಾಗಿದೆ.

ಸಮಾಜದ ಸಾಮಾನ್ಯ ಮನುಷ್ಯನಿಗೂ ಸಹ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ವೈದ್ಯಕೀಯ ಚಿಕಿತ್ಸೆಗಳು ದೊರಕಬೇಕು ಎಂಬುವುದೇ ತಮ್ಮ ಆಶಯವಾಗಿದೆ ಎಂದ ಅವರು, ವೈದ್ಯ ವೃತ್ತಿ ಅತ್ಯಂತ ಪವಿತ್ರ ಹಾಗೂ ಉತ್ತಮ ವೃತ್ತಿಯಾಗಿದೆ. ಜನರ ಸೇವೆಯೇ ದೇಶ ಸೇವೆಯಾಗಿದ್ದು, ಈ ಮೂಲಕ ವೈದ್ಯರು ರಾಷ್ಟç ಸೇವೆಗೆ ತಮ್ಮನ್ನು ತಾವು ಮುಡುಪಾಗಿಡಬೇಕು. ಜನರ ಜೀವನದ ಮೇಲೆ ಪ್ರಭಾವ ಬೀರುವ, ಬದುಕನ್ನು ಬದಲಾಯಿಸುವ ಶಕ್ತಿ ವೈದ್ಯಕೀಯ ಲೋಕಕ್ಕಿದೆ. ಬಡ ರೋಗಿಗಳು ಆಸ್ಪತ್ರೆಗೆ ಭೇಟಿ ನೀಡಿದಾಗ ಅವರನ್ನು ನಗು ಮುಖದಿಂದ ಮಾತನಾಡಿಸಿ ಉತ್ತಮ ಚಿಕಿತ್ಸೆ ನೀಡಿ ಗುಣಮುಖರಾಗಿ ಕಳುಹಿಸುವ ನಿಟ್ಟಿನಲ್ಲಿ ವೈದ್ಯರುಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ಶ್ರೀ ಸಿದ್ಧಾರ್ಥ ವೈದ್ಯಕೀಯ ಶಿಕ್ಷಣ ಸಂಸ್ಥೆ ಸಕಲ ಆಧುನಿಕ ವೈದ್ಯಕೀಯ ಸೌಲಭ್ಯ ಹಾಗೂ ಹಚ್ಚ ಹಸಿರಿನ ವಾತಾವರಣವನ್ನೊಳಗೊಂಡ ಅತ್ಯುತ್ತಮ ಸಂಸ್ಥೆಯಾಗಿದೆ ಎಂದು ಅವರು ಶ್ಲಾಘಿಸಿದರು.

ಸಭೆಯಲ್ಲಿ ಮಾತನಾಡಿದ ಗೃಹ ಸಚಿವ ಡಾ: ಜಿ. ಪರಮೇಶ್ವರ್, ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ನೀಡುವಲ್ಲಿ ರಾಜ್ಯ ಸರ್ಕಾರವು ಮುಂಚೂಣಿಯಲ್ಲಿದೆ. ರಾಜ್ಯದಲ್ಲಿ ಸುಮಾರು ಎರಡೂವರೆ ಸಾವಿರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು ಗ್ರಾಮೀಣ ಜನರಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ಚಿಕಿತ್ಸೆಯನ್ನು ಕಡಿಮೆ ಖರ್ಚಿನಲ್ಲಿ ನೀಡುವುದು ಸಿದ್ಧಾರ್ಥ ಸಂಸ್ಥೆಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ವೈದ್ಯರು ಕೆಲಸ ನಿರ್ವಹಿಸುತ್ತಿದ್ದಾರೆ. ಗ್ರಾಮೀಣ ಭಾಗದ ಜನರು ಯಾವುದೇ ರೀತಿಯ ಶಸ್ತç ಚಿಕಿತ್ಸೆ ಮಾಡಿಸಿಕೊಳ್ಳುವುದಕ್ಕೆ ಬೆಂಗಳೂರು ಖಾಸಗಿ ಆಸ್ಪತ್ರೆಗೆ ಹೋದರೆ ಕನಿಷ್ಠ 5ಲಕ್ಷ ಹಣ ಖರ್ಚಾಗುತ್ತದೆ. ನಮ್ಮ ಸಂಸ್ಥೆಯಲ್ಲಿ ಕಡಿಮೆ ಖರ್ಚಿನಲ್ಲಿ ಶಸ್ತç ಚಿಕಿತ್ಸೆಯನ್ನು ಮಾಡಲಾಗುವುದು ಎಂದು ತಿಳಿಸಿದರು.
ಮಾಜಿ ಪ್ರಧಾನ ಮಂತ್ರಿಗಳಾದ ಡಾ: ಮನಮೋಹನ್ ಸಿಂಗ್ ಅವರು ರಾಷ್ಟಿçÃಯ ಆರೋಗ್ಯ ನೀತಿಯನ್ನು ಜಾರಿಗೆ ತಂದ ಪರಿಣಾಮ ಆರೋಗ್ಯ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆಗಳು ಆಗಿದ್ದು, ಪ್ರತಿ ಸಾವಿರ ಮಕ್ಕಳಿಗೆ 55ರಷ್ಟಿದ್ಧ ಶಿಶು ಮರಣ ಪ್ರಕರಣಗಳು 30ಕ್ಕೆ ಇಳಿದಿರುವುದು ಕ್ರಾಂತಿಕಾರಕ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.

ಸಾಹೇ ಉಪಕುಲಪತಿಗಳಾದ ಡಾ.ಕೆ.ಬಿ. ಲಿಂಗೇಗೌಡ, ರಿಜಿಸ್ಟಾರ್ ಡಾ.ಎಂ. ಝಡ್ ಕುರಿಯನ್, ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಂ.ಎಸ್.ಸಾನಿಕೊಪ, ಉಪಪ್ರಾಂಶುಪಾಲರಾದ ಡಾ.ಪ್ರಭಾಕರ, ದಂತ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಪ್ರವೀಣ್ ಕುಡುವ, ಬೇಗೂರು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ದಿವಾಕರ್, ವೈದ್ಯಕೀಯ ಅಧೀಕ್ಷಕರು ವೆಂಕಟೇಶ್, ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಂ ಎಸ್ ರವಿಪ್ರಕಾಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರವಾಡ, ಜಿಲ್ಲಾಧಿಕಾರಿ ಶ್ರೀನಿವಾಸ್ ಹಾಗೂ ಸಿದ್ಧಾರ್ಥ ವೈಧ್ಯಕೀಯ ಕಾಲೇಜಿನ ವೈದ್ಯರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

 

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker