ಪಾವಗಡ : ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರದಲ್ಲಿದ್ದಾಗ ನೀಡಿರುವ ಜನಪರ ಆಡಳಿತ ಹಾಗೂ ನೂತನವಾಗಿ ಜಾರಿಯಾಗಲಿರುವ ಪಂಚರತ್ನ ಯೋಜನೆಗೆಳಿಗೆ ಮನಸೋತಿರುವ ನಾಡಿನ ಜನತೆ ನನ್ನನ್ನು ಮನೆ ಮಗನಂತೆ ಆಶೀರ್ವದಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಗುರುವಾರ ಪಟ್ಟಣದ ಸರ್ಕಾರಿ ಮೈದಾನದಲ್ಲಿ ಜೆಡಿಎಸ್ ಪಕ್ಷದಿಂದ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಹಾಗೂ ಬೃಹತ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ ಅಭ್ಯರ್ಥಿ ಕೆ.ಎಂ.ತಿಮ್ಮರಾಯಪ್ಪ ಪರ ಮತಯಾಚನೆ ಮಾಡಿದರು.
ರಾಜ್ಯ ಸೇರಿದಂತೆ ಪಾವಗಡ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಅಧಿಕಾರಾವಧಿಯಲ್ಲಿ ಆಗಿರುವ ಅಭಿವೃದ್ದಿ ಕಾರ್ಯಗಳೇ ಈ ಚುನಾವಣೆ ಗೆಲ್ಲಲು ಶ್ರೀರಕ್ಷೆಯಾಗಿವೆ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಿರ್ಲಕ್ಷ ಹಾಗೂ ಭ್ರಷ್ಟಾಚಾರದ ಆಡಳಿತಕ್ಕೆ ಜನತೆ ಬೇಸತ್ತಿದ್ದಾರೆ, ಕ್ಷೇತ್ರದ ಅಭ್ಯರ್ಥಿ ಕೆ.ಎಂ.ತಿಮ್ಮರಾಯಪ್ಪ ಗೆಲುವು ಖಚಿತವಾಗಿದೆ, ರಾಜ್ಯದಲ್ಲಿ ಈ ಭಾರಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ, ತಿಮ್ಮರಾಯಪ್ಪ ಸಚಿವರಾಗಿ ಈ ಕ್ಷೇತ್ರದ ಮತ್ತಷ್ಟು ಅಭಿವೃದ್ದಿ ಮಾಡಲಿದ್ದಾರೆ ಎಂದರು.
ಬಡವರಿಗೆ ಐದು ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ, ಗ್ರಾಮೀಣ ಭಾಗದ ಜನರಿಗಾಗಿ ಆಸ್ಪತ್ರೆಗಳ ಸ್ಥಾಪನೆ, ಆಧುನಿಕ ಶಿಕ್ಷಣದ ಮೂಲಕ ಪ್ರಗತಿ, ಮಹಿಳಾ ಮತ್ತು ಯುವ ಜನತೆಯ ಸಬಲೀಕರಣ, ರೈತ ಪರ ಯೋಜನೆಗಳು, ವೃದ್ದಾಪ್ಯಾ, ವಿಧವಾ ವೇತನ, ವಿಕಲ ಚೇತನರ ವೇತನ, ಸ್ವ ಸಹಾಯ ಸಂಘಗಳ ಸಾಲ ಮನ್ನಾ ಮಾಡುವ ಯೋಜನೆಗಳು ಈ ರಾಜ್ಯದ ಜನರಿಗೆ ವರದಾನವಾಗಿವೆ. ಜೆಡಿಎಸ್ ಅಧಿಕಾರಕ್ಕೆ ಬಂದ ಮೊದಲನೇ ದಿನವೇ ಪಂಚರತ್ನ ಯೋಜನೆಗಳ ಘೋಷಣೆಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾದ್ಯಕ್ಷ ಅಂಜಿನಪ್ಪ, ತಾಲ್ಲೂಕು ಅಧ್ಯಕ್ಷ ಬಲರಾಮ ರೆಡ್ಡಿ, ಅಭ್ಯರ್ಥಿ ಕೆ.ಎಂ.ತಿಮ್ಮರಾಯಪ್ಪ, ರಾಜ್ಯ ಉಪಾದ್ಯಕ್ಷ ತಿಮ್ಮಾರೆಡ್ಡಿ, ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ಸಾಯಿ ಸುಮನಾ, ತಾಲೂಕು ಅದ್ಯಕ್ಷೆ ಅಂಬಿಕಾ ರಮೇಶ್, ಎನ್.ಎ.ಈರಣ್ಣ, ರಾಜಶೇಖರಪ್ಪ, ನಲ್ಲಾನಿ ಸುರೇಂದ್ರ, ಚೌದರಿ, ಗೋವಿಂದ ಬಾಬು, ಅಲ್ಪಸಂಖ್ಯಾತ ಘಟಕದ ಯುನಾಸ್, ಚನ್ನಮಲ್ಲಯ್ಯ, ಸಣ್ಣಾರೆಡ್ಡಿ, ಶಕುಂತಲಾ ಬಾಯಿ, ಅಂಜನ್ ಕುಮಾರ್, ಮನು ಮಹೇಶ್, ಜಿ.ಎ.ವೆಂಕಟೇಶ್, ದೇವರಾಜು ಸೇರಿದಂತೆ ಸುಮಾರು ಹದಿನೈದು ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಿದ್ದರು.