ಗುಬ್ಬಿ : 40% ಕಮಿಷನ್ ಕೆಲಸ ಮಾಡಿ ಇಡೀ ತುರುವೇಕೆರೆ ಕ್ಷೇತ್ರದಲ್ಲಿ ಅಭಿವೃದ್ದಿ ಆಗಿದೆ ಎನ್ನುವ ಶಾಸಕರ ಸಾಧನೆ ಅವರ ಒಂದು ಮಸಾಲಾ ಫ್ಯಾಕ್ಟರಿಯನ್ನು ಮೂರು ಫ್ಯಾಕ್ಟರಿಗೆ ಉನ್ನತೀಕರಣ ಮಾಡಿದ್ದು ಮಾತ್ರ ಆಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ವಿಧಾನ ಪರಿಷತ್ ಮಾಜಿ ಸದಸ್ಯ ಬೆಮೆಲ್ ಕಾಂತರಾಜ್ ವ್ಯಂಗ್ಯವಾಡಿದರು.
ತಾಲ್ಲೂಕಿನ ಸಿ.ಎಸ್.ಪುರ ಗ್ರಾಮದಲ್ಲಿ ಕಾಂಗ್ರೆಸ್ ಪರ ರೋಡ್ ಶೋ ಮೂಲಕ ಮತಯಾಚನೆ ನಡೆಸಿ ಮಾತನಾಡಿದ ಅವರು ರಾಜ್ಯದಲ್ಲೇ ನಾಲ್ಕನೇ ಸ್ಥಾನ ಎನ್ನುವ ಶಾಸಕರ ಅಭಿವೃದ್ದಿ ಕೆಲಸ ಪಟ್ಟಿಯಲ್ಲಿ ಹೇಮಾವತಿ ನಾಲೆ ಅಭಿವೃದ್ದಿಯ 530 ಕೋಟಿ ಹಣವನ್ನು ನನ್ನ ಕೆಲಸ ಎಂದಿದ್ದಾರೆ. ಅದು ಕಾಂಗ್ರೆಸ್ ಕೊಡುಗೆ ಎಂಬುದು ಜನರಿಗೆ ತಿಳಿದಿದೆ. ಈ ಜೊತೆಗೆ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಅಭಿವೃದ್ದಿಯ 200 ಕೋಟಿ ಕೆಲಸ ಸಹ ನನ್ನದು ಎನ್ನುತ್ತಾರೆ ಎಂದು ಲೇವಡಿ ಮಾಡಿದರು.
ತಾಲ್ಲೂಕು ಕೇಂದ್ರ ಗುಬ್ಬಿಗೆ ಹೋಗುವ ಕೇಶಿಪ್ ರಸ್ತೆ ಕಾಂಗ್ರೆಸ್ ನ ಸಿದ್ದರಾಮಯ್ಯ ಅವರ ಆಡಳಿತದ ಅವಧಿಯಲ್ಲಿ ಆಗಿದ್ದು ಎಂಬುದು ಸ್ಮರಿಸಿಕೊಳ್ಳಿ . ಆಧುನಿಕ ಭಗೀರಥ ಎಂದು ಬಿಲ್ಡಪ್ ಕೊಡುವ ಶಾಸಕರು ಒಂದು ತಿಳಿಯಬೇಕು. ಕಳೆದ 32 ವರ್ಷದ ಹಿಂದೆ ಹೇಮಾವತಿ ನಾಲೆ ಈ ಭಾಗದಲ್ಲಿ ನಿರ್ಮಿಸಿದ್ದು ಕಾಂಗ್ರೆಸ್ ಎನ್ನುವ ಅಂಶ ತಿಳಿಯಬೇಕು. ಆ ಸಮಯದಲ್ಲಿ ಬಿಜೆಪಿ ರಾಜ್ಯದಲ್ಲಿ ಇರಲಿಲ್ಲ ಎಂದು ಕುಟುಕಿದ ಅವರು ಎಲ್ಲಾ ಕಡೆ ಸಿಸಿ ರಸ್ತೆ ಎನ್ನುತ್ತಾರೆ. ಅದು ಎಲ್ಲವೂ ಅವೈಜ್ಞಾನಿಕ. ಒಂದು ಗುಣಮಟ್ಟ ರಸ್ತೆ ಇಲ್ಲ. ಚರಂಡಿ ಇಲ್ಲದ ಈ ರಸ್ತೆ ಅನುಪಯುಕ್ತ. ಈ ಬಗ್ಗೆ ಜನರೇ ಆಲೋಚಿಸಬೇಕು. ಈ ಬಾರಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬರುತ್ತದೆ. ಈ ನಿಟ್ಟಿನಲ್ಲಿ ನನಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.
ಜೆಡಿಎಸ್ ಪಕ್ಷದಲ್ಲಿ ನಾನು ಇದ್ದೆ. ಅದು ಎಂದಿಗೂ ಆಡಳಿತಕ್ಕೆ ಬರುವುದಿಲ್ಲ. 113 ಸ್ಥಾನ ಗಳಿಸುವುದಿಲ್ಲ. ಅಧಿಕಾರಕ್ಕೆ ಬರುವುದು ಇಲ್ಲ. ದೇವೇಗೌಡರು ನಡೆಸಿದ ಪಕ್ಷ ಇಂದು ವರ್ಚಸ್ಸು ಕಳೆದುಕೊಂಡಿದೆ. ಇನ್ನೂ ಬಿಜೆಪಿ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿಸಿ ಈಗ ಅದು ಇದು ಎಂದು ಆಸೆ ಹುಟ್ಟಿಸುತ್ತಿದೆ. ರೈತರ ಪಂಪ್ ಸೆಟ್ ಗೆ ಮೀಟರ್, ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಮೀಟರ್ ಅಳವಡಿಕೆ. ಹೀಗೆ ವ್ಯಾಪಾರದ ಸರ್ಕಾರ ಸೇವೆ ಮರೆತಿದೆ ಎಂದ ಅವರು ತುರುವೇಕೆರೆ ಕಾಂಗ್ರೆಸ್ ಪಕ್ಷದ ಭದ್ರಕೋಟೆ. ಈ ಹಿಂದೆ ಕಾರ್ಯಕರ್ತರನ್ನು ಒಗ್ಗೂಡಿಸಿ ಮುಂದೆ ಸಾಗುವಲ್ಲಿ ತೊಡಕು ಮೂಡಿತ್ತು. ಈ ಬಾರಿ ಎಲ್ಲಾ ಸಮಸ್ಯೆ ಬಗೆಹರಿಸಿ ಒಗ್ಯೂಡಿ ಸಾಗಿದ್ದೇವೆ. ನಮ್ಮ ಗೆಲುವು ಶತಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಉಪಾಧ್ಯಕ್ಷ ತಿಮ್ಮರಾಜು, ಮುಖಂಡ ಹರೀಶ್, ಗ್ರಾಪಂ ಸದಸ್ಯರಾದ ಅಶ್ವತ್ಥ್, ಕರಿಯಪ್ಪ, ಲೋಹಿತ್, ಧನಂಜಯ್, ತಮ್ಮಯ್ಯ, ಅಬ್ಬಾಸ್, ನಂದೀಶ್, ರಾಜು ಇತರರು ಇದ್ದರು.