ಚಿಕ್ಕನಾಯಕನಹಳ್ಳಿಜಿಲ್ಲೆತುಮಕೂರುರಾಜಕೀಯರಾಜ್ಯ

ಸ್ರೀ ಶಕ್ತಿ ಸಂಘದ ಸಂಪೂರ್ಣ ಸಾಲ ಮನ್ನಾ ಮಾಡುಲು ಜೆಡಿಎಸ್‌ಗೆ ಸ್ಪಷ್ಟ ಬಹುಮತ ನೀಡಿ : ಹೆಚ್.ಡಿ. ದೇವೇಗೌಡ

ತುಮಕೂರು : ಪ್ರಧಾನಿ ನರೇಂದ್ರ ಮೋದಿಯವರು ನುಡಿದಂತೆ ನಡೆಯಲ್ಲ. ಹಾಗಾಗಿ ನುಡಿದಂತೆ ನಡೆಯುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಕೈ ಬಲಪಡಿಸಲು ಈ ಬಾರಿ ಜೆಡಿಎಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ನೀಡಬೇಕು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್.ಡಿ. ದೇವೇಗೌಡರು ಹೇಳಿದರು.
ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸಿ.ಬಿ. ಸುರೇಶ್‌ಬಾಬು ಪರ ಮತಯಾಚಿಸಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಮಹಿಳೆಯರಿಗೆ ಶಕ್ತಿ ತುಂಬುತ್ತೇನೆ ಅಂತ ಹೇಳುತ್ತಾರೆ. ಆದರೆ ಅವರು ನುಡಿದಂತೆ ಮೋದಿ ನಡೆಯುವುದಿಲ್ಲ ಎಂದರು.
ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕೊಟ್ಟವರು ನಾವು. ಈಗಾಗಲೇ ನಾನು ಲೋಕಸಭೆ, ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಬಿಲ್ ಪಾಸ್ ಮಾಡುವಂತೆ ಪತ್ರ ಬರೆದಿದ್ದೇನೆ. ಯಾವುದೇ ಒಂದು ಸಮಾಜಕ್ಕೆ ದೇವೇಗೌಡರಿಂದ ಅನ್ಯಾಯವಾಗಿಲ್ಲ ಎಂದು ಹೇಳಿದರು.
ಸ್ರೀ ಶಕ್ತಿ ಸಂಘದ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ಜೆಡಿಎಸ್‌ಗೆ ಸ್ಪಷ್ಟ ಬಹುಮತ ನೀಡಿ ಅಧಿಕಾರಕ್ಕೆ ತಂದರೆ ಕುಮಾರಸ್ವಾಮಿ ಅವರು ನುಡಿದಂತೆ ನಡೆಯುತ್ತಾರೆ ಎಂದರು.
ದೇಶದಲ್ಲಿ ರೈತರ ಸಾಲ ಮನ್ನಾ ಮಾಡಿದ ಏಕೈಕ ಮುಖ್ಯಮಂತ್ರಿ ಎಂದರೆ ಅದು ಕುಮಾರಸ್ವಾಮಿ ಎಂದ ಅವರು, ರೈತರಿಗೆ 5 ಸಾವಿರ ಮಾಸಾಶನ ಕೊಡುತ್ತೇನೆ ಎಂದು ಹೇಳಿದ್ದಾರೆ. ಇದಕ್ಕೆಲ್ಲ ರಾಜ್ಯದ ಜನತೆ ಅವರಿಗೆ ಶಕ್ತಿ ತುಂಬಬೇಕು ಎಂದು ಅವರು ಮನವಿ ಮಾಡಿದರು.

90ನೇ ವಯಸ್ಸಿನಲ್ಲಿ ಏಳೆಂಟು ಸಭೆ ಮಾಡುತ್ತಿದ್ದೇನೆ. ಏತಕ್ಕೆ, ಯಾರಿಗೋಸ್ಕರ ಗೊತ್ತಾ ಎಂದು ಪ್ರಶ್ನಿಸಿದ ಅವರು, ಈ ಇಳಿವಯಸ್ಸಿನಲ್ಲೂ ರಾಜ್ಯದ ಜನರಿಗೋಸ್ಕರ ನನ್ನ ಸೇವೆ ಮುಡುಪಾಗಿಟ್ಟಿದ್ದೇನೆ ಎಂದರು.
ಪ್ರತಿ ಹಳ್ಳಿಗೆ ಶುದ್ಧ ನೀರು ಒದಗಿಸುವ ಗುರಿಯನ್ನು ಜೆಡಿಎಸ್ ಪಕ್ಷ ಹೊಂದಿದೆ. ರಾಷ್ಟçದಲ್ಲಿರುವ ಕುಡಿಯುವ ನೀರಿನ ಸಮಸ್ಯೆ, ನದಿ, ಉಪನದಿಗಳ ಮಾಹಿತಿಯನ್ನು ಕುಮಾರಸ್ವಾಮಿ ಸಂಗ್ರಹ ಮಾಡಿದ್ದಾರೆ ಎಂದ ಅವರು,
ಮುಸ್ಲಿಂರಿಗೆ ಮೀಸಲಾತಿ ಕೊಟ್ಟಿದ್ದು ಯಾರು, ಈದ್ಗಾ ಮೈದಾನ ಸಮಸ್ಯೆ ಬಗೆಹರಿಸಿದ್ದು ಯಾರು ಎಂದು ಅವರು ಪ್ರಶ್ನಿಸಿದರು.
ಬಿಜೆಪಿ ಹೆಸರೆತ್ತಿ ಮಾತನಾಡಲು ನಾನು ಬಯಸಲ್ಲ. ಬಿಜೆಪಿಯವರು ಮೀಸಲಾತಿ ತೆಗೆಯುತ್ತೇವೆ ಅಂತಾರೆ. ಇದಕ್ಕೆ ಕೋರ್ಟ್ ಆತಂಕ ವ್ಯಕ್ತಪಡಿಸಿದೆ. ಕುಮಾರಸ್ವಾಮಿ ಅಧಿಕಾರಕ್ಕೆ ಬಂದ ತಕ್ಷಣ ಮುಸ್ಲಿಂರ ಮೀಸಲಾತಿ ವಾಪಸ್ ಕೊಡ್ತೀವಿ ಎಂದು ಹೇಳಿದ್ದಾರೆ ಎಂದರು.
ಅಪಪ್ರಚಾರಕ್ಕೆ ತಾವು ಮಾರು ಹೋಗಬಾರದು. ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ತಂದವರು ಯಾರು ಎಂಬ ಬಗ್ಗೆ ಸತ್ಯ ಹೇಳಬೇಕು. ಈ ಸಮುದಾಯಕ್ಕೂ ಮೀಸಲಾತಿ ನೀಡಿದ್ದು ನಾನೇ ಎಂದು ಅವರು ಹೇಳಿದರು.
ಸುರೇಶ್‌ಬಾಬು ಅವರು ತಮ್ಮ ಮನಸಿನ ನೋವನ್ನು ಹೇಳಿಕೊಂಡಿದ್ದಾರೆ. ಯಾವುದೇ ಆಮಿಷಕ್ಕೆ ಒಳಗಾಗದೆ, ದೇವೇಗೌಡರ ಪಕ್ಷದಲ್ಲಿ ಉಳಿಯುತ್ತೇನೆ ಎಂದು ಹೇಳಿದವರು ಸುರೇಶ್ ಬಾಬು. ತನೆಹೊತ್ತ ಮಹಿಳೆಯ ಗುರುತಿಗೆ ಮತ ನೀಡಿ ಅವರನ್ನು ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.
ಜೆಡಿಎಸ್ ಮುಖಂಡರಾದ ಎಸ್. ಷಫಿಅಹಮದ್ ಮಾತನಾಡಿ, ನಾನು ಕಳೆದ 40 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಕ್ರಿಯವಾಗಿ ಕೆಲಸ ಮಾಡಿ ಪಕ್ಷವನ್ನು ಕಟ್ಟಿದ್ದೆ. ಆದರೆ ನಾನು ನನ್ನ ಅಳಿಯನಿಗೆ ಟಿಕೆಟ್ ಕೇಳಿದೆ, ಆದರೆ ನನ್ನ ಮನವಿ ಸ್ಪಂದಿಸದೆ ಸೋಲುವ ಅಭ್ಯರ್ಥಿಗೆ ಟಿಕೆಟ್ ನೀಡಿದ್ದರಿಂದ ಬೇಸರಗೊಂಡು ಜಾತ್ಯಾತೀತ ನಿಲುವುಳ್ಳ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ ಎಂದರು.
ಜೆಡಿಎಸ್ ಪಕ್ಷದ ಪ್ರಣಾಳಿಕೆಯಲ್ಲಿ ಬಡವರು, ರೈತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದ ಹಿತ ಕಾಪಾಡಲು ನಾನಾ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಪ್ರಣಾಳಿಕೆಯಲ್ಲಿರುವ ಅಂಶಗಳು ಜಾರಿಗೆ ಬರಬೇಕಾದರೆ ಜೆಡಿಎಸ್ ಪಕ್ಷವನ್ನು ಗೆಲ್ಲಿಸುವ ಮೂಲಕ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಮನವಿ ಮಾಡಿದರು.
ನಮ್ಮ ಪಕ್ಷದ ಅಭ್ಯರ್ಥಿ ಸುರೇಶ್‌ಬಾಬು ಅವರು ಬಡವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದು, ಸದಾ ಬಡವರ ಪರವಾಗಿಯೇ ಕೆಲಸ ಮಾಡುತ್ತಾರೆ. ಇಂತಹ ಸರಳ ಸಜ್ಜನಿಕೆಯ ವ್ಯಕ್ತಿಯನ್ನು ಈ ಬಾರಿ ಗೆಲ್ಲಿಸುವ ಮೂಲಕ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಆಶೀರ್ವದಿಸಬೇಕು ಎಂದರು.

ಅಭ್ಯರ್ಥಿ ಸಿ.ಬಿ. ಸುರೇಶ್‌ಬಾಬು ಮಾತನಾಡಿ, ನನ್ನ ತಂದೆ ತೀರಿ ಹೋದಾಗ ಮಾಜಿ ಪ್ರಧಾನಿ ದೇವೇಗೌಡರು ಪ್ರಧಾನಿಯಾಗಿದ್ದರು. ಆ ಸಂದರ್ಭದಲ್ಲಿ ನನ್ನನ್ನು ಗುರುತಿಸಿ ರಾಜಕೀಯಕ್ಕೆ ಕರೆ ತಂದರು ಎಂದರು.
ಕ್ಷೇತ್ರದ ಜನರ ಋಣ ನನ್ನ ಮೇಲಿದೆ. ಋಣವನ್ನು ತೀರಿಸಲು ಕ್ಷೇತ್ರದ ಜನತೆ ನನಗೆ ಮತ್ತೊಂದು ಬಾರಿ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಬಡವರ ನಾಡಿ ಮಿಡಿತವನ್ನು ದೇವೇಗೌಡರು, ಕುಮಾರಸ್ವಾಮಿ ಅವರು ಅರಿತಿದ್ದಾರೆ. ಹಾಗಾಗಿ ಅವರು ಸದಾ ಬಡವರ ಕಷ್ಟಗಳಿಗೆ ಸ್ಪಂದಿಸುತ್ತಾರೆ ಎಂದರು.
ಜಾತ್ಯಾತೀತ ಹೆಸರಿಗೆ ತಕ್ಕಂತೆ ನಮ್ಮ ಪಕ್ಷದಲ್ಲಿ ಎಲ್ಲ ಜಾತಿ, ವರ್ಗದವರು ಇದ್ದಾರೆ. ಎಲ್ಲ ವರ್ಗ, ಸಮುದಾಯದ ಏಳ್ಗೆಯನ್ನು ಜೆಡಿಎಸ್ ಪಕ್ಷ ಬಯಸುತ್ತದೆ. ಇದಕ್ಕೆ ಬದ್ಧವಾಗಿ ಸದಾ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಕಿರಣ್‌ಕುಮಾರ್ ಮನೆಯಲ್ಲಿ ಸಾವರ್ಕರ್ ಫೋಟೋ ಇದೆ. ಡಿ.ಕೆ. ಶಿವಕುಮಾರ್ ಬಂದರೆ ಅವರ ತಲೆಗೆ ಕೇಸರಿ ಪೇಟೆ ತೊಡಿಸುತ್ತಾರೆ. ಇವರು ಚುನಾವಣೆಯಾದ ಬಳಿಕ ಎಲ್ಲಿ ಇರುತ್ತಾರೆ ಎಂಬುದು ಗೊತ್ತಿಲ್ಲ. ಹಾಗಾಗಿ ಇವರ ಮಾತುಗಳಿಗೆ ಜನತೆ ಮರುಳಾಗಬಾರದು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಮಹದೇವಯ್ಯ, ಜಯಪ್ರಕಾಶ್, ರಾಜಕುಮಾರ್, ರಾಮಚಂದ್ರಯ್ಯ, ಪಾವಗಡ ಶ್ರೀರಾಮ್, ಸೋಲಾರ್ ಕೃಷ್ಣಮೂರ್ತಿ, ಹರ್ಷ, ಪುಷ್ಪಾ, ನಗ್ಮಾ, ಕಲ್ಲೇಶ್ ಮತ್ತಿತರರು ಭಾಗವಹಿಸಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker