ತುಮಕೂರು : ರಾಜ್ಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಪರಿಹಾರವಿದೆ, ಕಲ್ಯಾಣ ಕರ್ನಾಟಕ, ಪರಿಶಿಷ್ಟ ಜಾತಿ, ಪಂಗಡ, ನೀರಾವರಿ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಬದ್ಧವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ವ್ಯಕ್ತಪಡಿಸಿದರು.
ಕೊರಟಗೆರೆಯ ರಾಜೀವ್ ಭವನದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷ ಈಗಾಗಲೇ 5 ಗ್ಯಾರೆಂಟಿಗಳನ್ನು ರಾಜ್ಯದ ಜನರಿಗೆ ನೀಡಿದ್ದು, ಗ್ಯಾರೆಂಟಿ ಕಾರ್ಡ್ಗಳನ್ನು ಮನೆಮನೆಗೆ ತಲುಪಿಸಿದ್ದೇವೆ, ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿರುವ ಡಾ.ಜಿ.ಪರಮೇಶ್ವರ್ ಅವರು ಉತ್ತಮ ಪ್ರಣಾಳಿಕೆಯನ್ನು ಸಿದ್ಧಪಡಿಸಿದ್ದು, ಪಕ್ಷದ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು,
ಕೊರಟಗೆರೆಯಲ್ಲಿ ಪರಮೇಶ್ವರ್ ಗೆದ್ದರೆ ನಾನೇ ಗೆದ್ದಂತೆ ಎನ್ನುವುದನ್ನು ಅರಿತು ಮತದಾರರು ಪರಮೇಶ್ವರ್‌ಗೆ ಮತ ನೀಡುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತದಾರರಲ್ಲಿ ಮನವಿ ಮಾಡಿದ ಅವರು, ನಾನು ರಾಜೀವ್ ಭವನ ಉದ್ಘಾಟನೆಗೆ ಬರದೇ ಇದ್ದಿದ್ದನ್ನೆ ಅಪಪ್ರಚಾರ ಮಾಡಿದ್ದಾರೆ, 2013ರಲ್ಲಿ ಇದೇ ರೀತಿ ಅಪಪ್ರಚಾರ ಮಾಡಿದ್ದರು, ನನ್ನ ಮತ್ತು ಪರಮೇಶ್ವರ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಪರಮೇಶ್ವರ್ ನಾನು 8 ವರ್ಷಗಳ ಕಾಲ ವಿರೋಧ ಪಕ್ಷದಲ್ಲಿ ಕೆಲಸ ಮಾಡಿ, 2013ರಲ್ಲಿ ಸೋತ ನಂತರ ವಿಧಾನ ಪರಿಷತ್ ಸದಸ್ಯನಾಗಿ ಮಾಡಿ ಗೃಹ ಸಚಿವರನ್ನಾಗಿ ಜೊತೆಯಲ್ಲಿ ಕೆಲಸ ಮಾಡಿದ್ದರೂ ಸಹ ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಇದೆ ಎಂದು ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ ಎಂದರು.
ರಾಜಕೀಯ ವಿರೋಧಿಗಳು ಪರಮೇಶ್ವರ್ ಅವರಿಗೆ ಕಲ್ಲೆಸೆದಿದ್ದಾರೆ, ಸೋಲುವ ಹತಾಶೆ ಅವರಿಗೆ ಕಾಡುತ್ತಿದೆ, ಕೊರಟಗೆರೆಯಲ್ಲಿ ಡಾ.ಜಿ.ಪರಮೇಶ್ವರ್ ಅವರು ಗೆಲ್ಲುವುದು ನಿಶ್ಚಿತ, ಪರಮೇಶ್ವರ್ ಗೆದ್ದರೆ ರಾಜ್ಯದ ಶೋಷಿತ ವರ್ಗಗಳ ಅದೃಷ್ಟ, ಪರಮೇಶ್ವರ್ ಗೆಲ್ಲುವುದು ಗ್ಯಾರೆಂಟಿ, ಪರಮೇಶ್ವರ್ ಗೆದ್ದರೆ ನನಗೆ ಸಂತೋಷವಾಗಲಿದೆ ಎಂದರು.
ಕರ್ನಾಟಕದಲ್ಲಿ ಜನವಿರೋಧಿ, ಕಡು ಭ್ರಷ್ಟ, ನಿಷ್ಕಿçÃಯ, ಅಭಿವೃದ್ಧಿ ವಿರೋಧಿ ಬಿಜೆಪಿ ಸರ್ಕಾರವಿದೆ, ಕಳೆದ 50 ವರ್ಷಗಳಲ್ಲಿ ಇಂತಹ ಭ್ರಷ್ಟ ಸರ್ಕಾರವನ್ನು ಜನರು ಕಂಡಿರಲಿಲ್ಲ, 40 ಪರ್ಸೆಂಟ್ ಕಮೀಷನ್ ಬಗ್ಗೆ ರಾಜ್ಯದ ಜನರು ಬೀದಿ ಬೀದಿಗಳಲ್ಲಿ ಚರ್ಚೆ ಮಾಡ್ತಾರೆ, ಜನರ ಕೆಲಸ ದೇವರ ಕೆಲಸ ಎನ್ನುವುದನ್ನು ಬಿಜೆಪಿ ಮರೆತು ರಾಜ್ಯಕ್ಕೆ ಕೆಟ್ಟ ಹೆಸರು ತಂದಿದ್ದಾರೆ ಎಂದರು.
ರಾಜ್ಯದಲ್ಲಿರುವ ಭ್ರಷ್ಟ ಸರ್ಕಾರವನ್ನು ಕಿತ್ತುಹಾಕಬೇಕಿರುವುದು ರಾಜ್ಯದ 7 ಕೋಟಿ ಜನರ ಆಶಯವಾಗಿದೆ, ಪ್ರಜಾಪ್ರಭುತ್ವ, ಸಂವಿಧಾನದ ಉಳಿವಿಗಾಗಿ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಬೇಕಿದೆ, ರಾಜ್ಯದ ಜನರು ತಲೆ ತಗ್ಗಿಸುವಂತೆ ರಾಜ್ಯಭಾರ ಮಾಡುತ್ತಿರುವ ಬಿಜೆಪಿಯನ್ನು ತೊಲಗಿಸಿ ರಾಜ್ಯವನ್ನು ಉಳಿಸಲು ಕಾಂಗ್ರೆಸ್ ಗೆಲ್ಲಿಸಿ ಎಂದು ಕರೆ ನೀಡಿದರು.
ಸ್ವಾತಂತ್ರ ಬಂದಾಗಿನಿಂದ ನಾನು ಮುಖ್ಯಮಂತ್ರಿ ಹುದ್ದೆ ಬಿಡುವವರೆಗೆ ರಾಜ್ಯದ ಸಾಲ 2.70 ಲಕ್ಷ ಕೋಟಿ, ಆದರೆ ಈಗ 5.64 ಲಕ್ಷ ಕೋಟಿ ಸಾಲವನ್ನು ಮಾಡಿದ್ದಾರೆ, ಕೇವಲ ಮೂರು ವರ್ಷದಲ್ಲಿ 3 ಲಕ್ಷ ಕೋಟಿ ಸಾಲ ಮಾಡಿ, ರಾಜ್ಯದ ಜನರ ಮೇಲೆ ಸಾಲದ ಹೊರೆ ಹೊರಿಸಿದ್ದಾರೆ, ಯೋಜನಾ ಬದ್ಧ ವೆಚ್ಚ 103ರಷ್ಟಿದೆ, ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 15 ಲಕ್ಷ ಮನೆ ಕಟ್ಟಿಸಿಕೊಟ್ಟಿದ್ದೆ, ಬಿಜೆಪಿ ಸರ್ಕಾರ ಒಂದು ಮನೆಯನ್ನು ನೀಡಿಲ್ಲ ಎಂದರು.
ಬಿಜೆಪಿ ಲಂಚ ಹೊಡೆಯುವುದನ್ನು ಕಡಿಮೆ ಮಾಡಿದ್ದರೆ ಅನ್ನಭಾಗ್ಯ ಯೋಜನೆಯಡಿ ಅಕ್ಕಿಯನ್ನು ಕಡಿಮೆ ಮಾಡುವ ಅಗತ್ಯ ಬರುತ್ತಿರಲಿಲ್ಲ, ಕಾಂಗ್ರೆಸ್ ಸರ್ಕಾರದ ಅಧಿಕಾರಕ್ಕೆ ಬರಲಿದೆ, ಬಡವರಿಗೆ 10 ಕೆಜಿ ಅಕ್ಕಿಯನ್ನು ಕೊಡುತ್ತೇವೆ, ರೈತರ ಸಾಲಮನ್ನಾ ಮಾಡಲು ಆಗದ ಬಿಜೆಪಿ ಉದ್ಯಮಿಗಳ 12 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದ್ದಾರೆ, ಶ್ರೀಮಂತರ ಪರ ಇರುವ ಬಿಜೆಪಿ, ರೈತರ ಸಾಲ ಮನ್ನಾ ಮಾಡಿದರೆ ದೇಶ ದಿವಾಳಿಯಾಗಲಿದೆ ಎನ್ನುವ ಮನೋಭಾವನೆ ಇರುವವರಿಗೆ ಅಧಿಕಾರ ಕೊಡಬೇಕೆ ಎಂದು ಪ್ರಶ್ನಿಸಿದರು.
ಮೋದಿ ಚುನಾವಣೆಗಾಗಿ ಬರುತ್ತಿದ್ದಾರೆ, ಬಿ.ಎಸ್.ಯಡಿಯೂರಪ್ಪ, ಬೊಮ್ಮಾಯಿ ಮುಖ ನೋಡಿ ಜನರು ಬಿಜೆಪಿಗೆ ಮತ ಹಾಕುವುದಿಲ್ಲ ಎನ್ನುವುದು ಬಿಜೆಪಿಗೆ ಗೊತ್ತಿದೆ, ಮೋದಿ ನೂರು ಬಾರಿ ಬಂದರೂ ಬಿಜೆಪಿಯ ಭ್ರಷ್ಟçತೆಯನ್ನು ಮುಚ್ಚಲು ಆಗುವುದಿಲ್ಲ, ರಾಜ್ಯದ ಜನರು ಪ್ರಬುದ್ಧರಿದ್ದಾರೆ, ಅಚ್ಛೇದಿನ್ ಬರುತ್ತದೆ ಎಂದರು ಬಂತಾ ಎಂದು ಪ್ರಶ್ನಿಸಿದರು.
ಮಾಜಿ ಉಪಮುಖ್ಯಮಂತ್ರಿ ಹಾಗೂ ಕೊರಟಗೆರೆ ಕಾಂಗ್ರೆಸ್ ಅಭ್ಯರ್ಥಿ ಡಾ.ಜಿ.ಪರಮೇಶ್ವರ್ ಅವರು ಮಾತನಾಡಿ, ರಾಜ್ಯದ ಜನ ಬದಲಾವಣೆಯನ್ನು ಬಯಸಿದ್ದು, ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ಕಾಂಗ್ರೆಸ್ ಪಕ್ಷ ಅಧಿಕಾರ ನೀಡಬೇಕೆಂಬ ಜನರ ಭಾವನೆ ರಾಜ್ಯದ ಜನರಲ್ಲಿ ದೃಢವಾಗಿದ್ದು, ಅಗತ್ಯವಸ್ತುಗಳ ಬೆಲೆ ಏರಿಸಿ, ಜನಸಾಮಾನ್ಯರ ಜೀವನದೊಂದಿಗೆ ಚೆಲ್ಲಾಟವಾಡಿದ ಬಿಜೆಪಿ ಸರ್ಕಾರಕ್ಕೆ ತಕ್ಕಪಾಠವನ್ನು ಚುನಾವಣೆಯಲ್ಲಿ ಜನರು ಕಲಿಸಲಿದ್ದಾರೆ ಎಂದರು.
40 ಪರ್ಸೆಂಟ್ ಭ್ರಷ್ಟಾಚಾರದಿಂದ ಇಡೀ ದೇಶದಲ್ಲಿಯೇ ರಾಜ್ಯದ ಮರ್ಯಾದೆಯನ್ನು ಬಿಜೆಪಿ ಸರ್ಕಾರ ತೆಗೆದು ಹಾಕಿದೆ, ಬಡವರಿಗಾಗಿ ಹಸಿವು ನೀಗಿಸುವ ಅನ್ನಭಾಗ್ಯವನ್ನು ಸಿದ್ದರಾಮಯ್ಯ ಅವರ ಸರ್ಕಾರ ನೀಡಿತ್ತು, ಬಿಜೆಪಿ ಅಂದು ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿತ್ತು, ಸೋಮಾರಿಗಳನ್ನಾಗಿ ಮಾಡುತ್ತಿದ್ದಾರೆ ಎಂದು ಆರೋಪಿಸಿತ್ತು, ಹಸಿವನ್ನೇ ಕಾಣದ ಬಿಜೆಪಿ ಸರ್ಕಾರ ಅನ್ನಭಾಗ್ಯ ಯೋಜನೆಯನ್ನು ವಿರೋಧಿಸಿತ್ತು ಎಂದರು.
ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿಯನ್ನು ನೀಡಲು ಪಕ್ಷ ನಿರ್ಧಾರಮಾಡಿದೆ, 13,500 ಕೋಟಿ ವೆಚ್ಚದಲ್ಲಿ ಎತ್ತಿನಹೊಳೆ ಯೋಜನೆ ಜಾರಿಗೆ ಮುಂದಾಗಿತ್ತು, ಇಂದು 21 ಸಾವಿರ ಕೋಟಿ ತಲುಪಿದೆ, ಬೊಮ್ಮಾಯಿ ಸರ್ಕಾರ ಎತ್ತಿನ ಹೊಳೆ ಯೋಜನೆಗೆ ಅನುದಾನವನ್ನು ನೀಡಲಿಲ್ಲ, ಎತ್ತಿನಹೊಳೆ ಯೋಜನೆ ಪೂರ್ಣಗೊಂಡರೆ ಕೊರಟಗೆರೆಯ 109 ಕೆರೆಗಳು ತುಂಬಲಿದ್ದು, ಶಾಶ್ವತ ನೀರಾವರಿ ದೊರೆಯಲಿದೆ ಎಂದರು.
ಕೊರಟಗೆರೆ ಕ್ಷೇತ್ರದ ಅಭಿವೃದ್ಧಿಗೆ 2500 ಕೋಟಿ ಅನುದಾನವನ್ನು ಸರ್ಕಾರದಿಂದ ತಂದಿದ್ದೇನೆ, 7 ವಸತಿ ಶಾಲೆ, ಏಕಲವ್ಯ ಶಾಲೆ ಮಾಡಿದ್ದೇನೆ, ಆ ಶಾಲೆಯಲ್ಲಿ ಓದಿದ ನಾಲ್ಕು ಮಂದಿ ಐಐಟಿಗೆ ಆಯ್ಕೆಯಾಗಿದ್ದಾರೆ ಇದು ಬಿಜೆಪಿ, ಜೆಡಿಎಸ್ ಕಣ್ಣಿಗೆ ಕಾಣುವುದಿಲ್ಲ ಎಂದು ಟೀಕಿಸಿದರು.
ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ಮಾತನಾಡಿ ಬಡವರ ಯೋಜನೆಗಳನ್ನು ಯಾವುದೇ ಮುಲಾಜಿಗೆ ಒಳಗಾಗದೇ ಜಾರಿ ಮಾಡುವುದರಲ್ಲಿ ಸಿದ್ದರಾಮಯ್ಯ ಮೊದಲಿಗರು, ಎಲ್ಲ ಸಮುದಾಯಗಳ ಬಡವರ ಪರವಾದ ಯೋಜನೆಗಳನ್ನು ಜಾರಿಗೆ ತರುವುದು ಕಾಂಗ್ರೆಸ್ ಪಕ್ಷ ಮಾತ್ರ ಎಂದರು.
ಜೆಡಿಎಸ್ ಜಾತಿಗೆ ಸೀಮಿತವಾಗಿದ್ದು, ಬಿಜೆಪಿ ಭ್ರಷ್ಟರ ಪಕ್ಷ ಎನ್ನುವುದರಲ್ಲಿ ಅನುಮಾನವಿಲ್ಲ, ಜನಪರವಾಗಿ ಕೆಲಸ ಮಾಡದ ಭ್ರಷ್ಟರನ್ನು ಪಕ್ಷಕ್ಕೆ ಸೇರಿಸಿಕೊಂಡು ಭ್ರಷ್ಟಾಚಾರಕ್ಕೆ ಇಂಬು ನೀಡುತ್ತಿದೆ ಎಂದ ಅವರು, ನಾಟಕದ ಕಂಪನಿ ಹುಟ್ಟು ಹಾಕಿರುವುದೇ ಜೆಡಿಎಸ್, ಕುಟುಂಬದವರನ್ನೇ ಸೇರಿಸಿಕೊಂಡು ಕಣ್ಣೀರು ಹಾಕುತ್ತಾರೆ ಎಂದು ವ್ಯಂಗ್ಯವಾಡಿದರು.
ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರನ್ನು ಸೋಲಿಸಿದ್ದು ನಾನು, ಗೆಲ್ಲಿಸಲು ಹೋರಾಡಿದವರು ಡಾ.ಜಿ.ಪರಮೇಶ್ವರ್ ಅವರು, ನನ್ನ ವಿರುದ್ಧ ಮಧುಗಿರಿಯಲ್ಲಿ ಹೇಳಿಕೆ ಕೊಡಲಿ ಅದನ್ನು ಬಿಟ್ಟು ಹಗಲು ರಾತ್ರಿ ದೇವೇಗೌಡರನ್ನು ಗೆಲ್ಲಿಸಲು ಹೋರಾಡಿದ ಪರಮೇಶ್ವರ್ ಅವರನ್ನು ಸೋಲಿಸಿ ಎಂದು ಕಣ್ಣೀರು ಹಾಕುತ್ತಾರೆ ಎಂದರೆ ಎಂತಹ ಡ್ರಾಮಾ ಎನ್ನುವುದನ್ನು ಜನರು ಅರಿಯಬೇಕು ಎಂದು ಹೇಳಿದರು.
ಡಾ.ಜಿ.ಪರಮೇಶ್ವರ್ ಸೇರಿದಂತೆ ಎಲ್ಲ ಶಾಸಕರು ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗಬೇಕೆಂದು ಬಯಸುತ್ತಾರೆ, ಸಿಎಂ ಅಭ್ಯರ್ಥಿಯನ್ನು ಹೈಕಮಾಂಡ್ ಮತ್ತು ಶಾಸಕರು ತೀರ್ಮಾನಿಸಲಿದ್ದಾರೆ, ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ 11 ಕ್ಷೇತ್ರಗಳಲ್ಲಿ 11 ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಗೆಲ್ಲಿಸಬೇಕು, ಒಬ್ಬರ ಕಾಲು ಒಬ್ಬರು ಎಳೆಯುವ ಪರಿಸ್ಥಿತಿ ಇಲ್ಲ ಎನ್ನುವುದನ್ನು ಅರಿತು ಕಾಂಗ್ರೆಸ್‌ಗೆ ಮತ ನೀಡಿ, ಪರಮೇಶ್ವರ್ ಅವರನ್ನು ಗೆಲ್ಲಿಸಿ ಎಂದರು.
ಆಂಧ್ರ ಪ್ರದೇಶ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ರಘುವೀರರೆಡ್ಡಿ ಮಾತನಾಡಿ ಪರಮೇಶ್ವರ್ ಪರ ಅಲೆ ಇರುವಂತೆ ರಾಜ್ಯದಲ್ಲಿ ಕಾಂಗ್ರೆಸ್ ಬಿರುಗಾಳಿ ಬಿಸುತ್ತಿದೆ, ಸಿದ್ದರಾಮಯ್ಯ ಅವರು ಎಲ್ಲಿ ಹೋದರೆ ಅಲ್ಲಿ ಸುನಾಮಿ ಸೃಷ್ಟಿಯಾಗುತ್ತಿದ್ದು, ಬಿಜೆಪಿ, ಜೆಡಿಎಸ್ ಸೇರಿದಂತೆ ಯಾವುದೇ ಪಕ್ಷಗಳು ಇಲ್ಲಿಲ್ಲ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ 150 ಸ್ಥಾನಗಳೊಂದಿಗೆ ಗೆಲುವು ಸಾಧಿಸಲಿದೆ ಎಂದರು.
ಪರಮೇಶ್ವರ್ ಮೇಲೆ ಕಲ್ಲು ಎಸೆದಿರುವುದು ಬೇರೆ ಪಕ್ಷಗಳ ಮೇಲೆ ಆಗಿದ್ದರೆ ಮನೆ ಮನೆಗೆ ಪೋಸ್ಟರ್ ಅಂಟಿಸಿ, ಸಿಂಪತಿಗಾಗಿ ಪ್ರಚಾರ ನಡೆಸುತ್ತಿದ್ದರು, ಕೊರಟಗೆರೆಯಲ್ಲಿ ಅಧಿಕಾರಕ್ಕಾಗಿ ಈ ರೀತಿ ಪ್ರಕರಣಗಳು ನಡೆಯುತ್ತಿರುವುದು ಖಂಡನೀಯ ಶಾಂತಿಯ ಕೊರಟಗೆರೆಯನ್ನು ಉಳಿಸುವುದಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು,2013ರಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗ ಪರಮೇಶ್ವರ್ ಸೋತಿದ್ದರು, 2023ರಲ್ಲಿ ಕಾಂಗ್ರೆಸ್ ಸರ್ಕಾರ ಬರಲಿದೆ ಈ ಬಾರಿ ಮೋಸ ಹೋಗಬೇಡಿ ಎಂದರು.
ಕಾರ್ಯಕ್ರಮದಲ್ಲಿ ಎಐಸಿಸಿ ಹಿಂದುಳಿದ ವರ್ಗದ ಅಧ್ಯಕ್ಷ ಅಜಯ್‌ಸಿಂಗ್, ಮಾಜಿ ಸಚಿವ ಎಂ,ಆರ್,ಸೀತಾರಾಮ್, ಮಾಜಿ ಶಾಸಕರಾದ ಕೆ,ಎನ್,ರಾಜಣ್ಣ, ಗಂಗಹನುಮಯ್ಯ, ಎಪಿಸಿಸಿ ಅಧ್ಯಕ್ಷ ರಘುವೀರರೆಡ್ಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್‌ಗೌಡ ಜಿ,ಪಂ.ಮಾಜಿ ಅಧ್ಯಕ್ಷ ಜಿ.ಜೆ.ರಾಜಣ್ಣ, ತಿಮ್ಮರಾಯಪ್ಪ, ಪ್ರಸನ್ನಕುಮಾರ್, ಕೆಂಚಮಾರಯ್ಯ, ತುಂಬಾಡಿ ತಿಮ್ಮಜ್ಜ, ವಾಲೆಚಂದ್ರಯ್ಯ, ಡಿ.ಟಿ.ವೆಂಕಟೇಶ್, ಆರ್.ರಾಮಕೃಷ್ಣಪ್ಪ, ನಿಕೇತ್ ರಾಜ್ ಮೌರ್ಯ, ರಾಯಸಂದ್ರ ರವಿಕುಮಾರ್, ಎ.ಡಿ.ಬಲರಾಮಯ್ಯ, ಅರಕೆರೆ ಶಂಕರ್, ಅಶ್ವತ್ಥ್ನಾರಾಯಣ್, ಪ್ರಜಾಪ್ರಗತಿ ಸಂಪಾದಕ ನಾಗಣ್ಣ, ಮೈಲಾರಪ್ಪ, ಚಿಕ್ಕರಂಗಯ್ಯ ಸೇರಿದಂತೆ ಇತರರಿದ್ದರು.