ಸುರೇಶಗೌಡರಿಗೆ 50 ಸಾವಿರ ಅಂತರದ ಗೆಲುವು ನಿಶ್ಚಿತ : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಹೆಬ್ಬೂರು : ಸುರೇಶ್ ಗೌಡರು ಮಾದರಿ ಶಾಸಕರಾಗಿ ಕೆಲಸ ಮಾಡಿದ್ದರು, ಮೋಸದಿಂದ ಸೋತರು, ಈ ಬಾರಿ ಐವತ್ತು ಸಾವಿರ ಮತಗಳ ಅಂತರದಿಂದ ಗೆಲ್ಲಬೇಕು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದರು.
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ರೋಡ್ ಶೋ ನಡೆಸಿ ಮಾತನಾಡಿದ ಅವರು, ಒಬ್ಬ ಮಾದರಿ ಶಾಸಕ ಹೇಗೆ ಕೆಲಸ ಮಾಡಬೇಕು ಎಂಬುದನ್ನು ಸುರೇಶ್ ಗೌಡರನ್ನು ನೋಡಿ ಕಲಿಯಬೇಕು ಎನ್ನುವಂತಿದ್ದ ಸುರೇಶ್ ಗೌಡರನ್ನು ಕುತಂತ್ರದಿಂದ ಸೋಲಿಸಲಾಯಿತು ಎಂದರು.
ಸುರೇಶ್ ಗೌಡರು ಅವರಂತಹ ಶಾಸಕರು ಮತ್ತೆ ಸಿಗುವುದಿಲ್ಲ, ಕಳೆದ ಬಾರಿ ಸೋತಿರುವ ಆದರ್ಶ ಶಾಸಕ ಸುರೇಶ್ ಗೌಡರನ್ನು 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸಲು ಕೆಲಸ ಮಾಡಬೇಕು ಎಂದು ಕರೆ ನೀಡಿದ ಅವರು, ಬಿಪಿಎಲ್ ಕುಟುಂಬಗಳಿಗೆ ಮೂರು ಸಿಲಿಂಡರ್ ಹಾಗೂ ಅರ್ಧ ಲೀಟರ್ ಹಾಲು ನೀಡುವ ಯೋಜನೆ ಹಾಕಿಕೊಂಡಿದ್ದು ಮೋದಿ ಅವರ ನೇತೃತ್ವದಲ್ಲಿ ಸಮಗ್ರ ಅಭಿವೃದ್ಧಿ ಸಾಧಿಸುವುದಾಗಿ ಹೇಳಿದರು.
ಮಾಜಿ ಶಾಸಕ ಸುರೇಶ್ ಗೌಡ ಮಾತನಾಡಿ, ತುಮಕೂರು ಗ್ರಾಮಾಂತರ ಕ್ಷೇತ್ರ ಅಭಿವೃದ್ಧಿಯಾಗಲು ಯಡಿಯೂರಪ್ಪ ಕಾರಣ, ನೀರಾವರಿ ಮತ್ತು ರಸ್ತೆ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದರಿಂದ ಸಮಗ್ರ ಅಭಿವೃದ್ಧಿ ಸಾಧಿಸಲು ಸಾಧ್ಯವಾಯಿತು ಎಂದರು.
ನೀರಾವರಿಯಿಂದ ವಂಚಿತವಾಗಿದ್ದ ಹೆಬ್ಬೂರು ಮತ್ತು ನಾಗವಲ್ಲಿ ಭಾಗಕ್ಕೆ ಏತ ನೀರಾವರಿ ಯೋಜನೆಯನ್ನು ಅನುಷ್ಠಾನಕ್ಕೆ ಅನುದಾನ ನೀಡಿದರು, ಏತ ನೀರಾವರಿ, ಬಹುಗ್ರಾಮ ನೀರಾವರಿ ಯೋಜನೆಗಳಿಂದಾಗಿ ರೈತರು ನೆಮ್ಮದಿಯಿಂದ ಬದುಕುವಂತಾಯಿತು ಎಂದರು.
ಗ್ರಾಮಾಂತರ ಕ್ಷೇತ್ರದ 22 ಸಾವಿರ ರೈತರ ಜಮೀನುಗಳಿಗೆ ಟ್ರಾನ್ಸ್ ಫಾರಂ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾತ್ರ, ಈ ಭಾಗದಲ್ಲಿ ನಾನೇನಾದರೂ ಅಭಿವೃದ್ಧಿ ಮಾಡಿದ್ದರೆ ಅದಕ್ಕೆ ಯಡಿಯೂರಪ್ಪ ಅವ್ರೇ ಕಾರಣ, ಕಳೆದ ಬಾರಿ ಅಲ್ಪ ಮತಗಳ ಅಂತರದಿಂದ ಸೋತಿದ್ದ ನನ್ನನ್ನು ಗೆಲ್ಲಿಸಿದರೆ ತುಮಕೂರು ಗ್ರಾಮಾಂತರವನ್ನು ಮಾದರಿ ಕ್ಷೇತ್ರ ಮಾಡುವುದಾಗಿ ಭರವಸೆ ನೀಡಿದರು.
ಹೆಬ್ಬೂರಿನ ಹೇಮಾವತಿ ಕಚೇರಿಯಿಂದ ಆರಂಭಗೊಂಡ ರೋಡ್ ಶೋನಲ್ಲಿ ಸಂಸದ ಜಿ.ಎಸ್.ಬಸವರಾಜು, ಮಾಜಿ ಸಂಸದ ಮುದ್ದಹನುಮೇಗೌಡ, ವೈ.ಟಿ.ನಾಗರಾಜು, ಪಂಚೆ ರಾಮಚಂದ್ರಯ್ಯ, ಸಿದ್ದೇಗೌಡ, ಕೆಂಪರಾಜು ಸೇರಿದಂತೆ ಇತರರು ಭಾಗವಹಿಸಿದ್ದರು.