ಶಿರಾ : ಶಿರಾ ಕ್ಷೇತ್ರ ಜಿಲ್ಲಾಮಟ್ಟಕ್ಕೆ ಅಭಿವೃದ್ಧಿಯಾಗಿದ್ದರೆ, ನೀರಾವರಿ ಕೆಲಸಗಳಾಗಿದ್ದರೆ, ಚೆಕ್‌ಡ್ಯಾಂ, ಬ್ಯಾರೇಜ್, ಕೆರೆಗಳನ್ನು ತುಂಬಿಸುವ ಕೆಲಸಗಳಾಗಿದ್ದರೆ, ಹೇಮಾವತಿ ನೀರು ಹರಿದಿದ್ದರೆ, ಅಪ್ಪರ್ ಭದ್ರ, ಎತ್ತಿನಹೊಳೆಯಿಂದ ಶಿರಾಕ್ಕೆ ನೀರು ಸಿಗುತ್ತಿದ್ದರೆ, ಉತ್ತಮ ರಸ್ತೆಗಳಾಗಿದ್ದರೆ ಎಲ್ಲದಕ್ಕೂ ಟಿ.ಬಿ.ಜಯಚಂದ್ರ ಕಾರಣ. ಆದ್ದರಿಂದ ಈ ಬಾರಿ ಟಿ.ಬಿ.ಜಯಚಂದ್ರ ಅವರು ಸೋಲಬಾರದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅವರು ನಗರದ ಪ್ರೆಸಿಡೆನ್ಸಿ ಶಾಲೆಯ ಪಕ್ಕದ ಆವರಣದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಪಕ್ಷದ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು. ಟಿ.ಬಿ.ಜಯಚಂದ್ರ ಅವರು ಕಾನೂನು ಸಚಿವರಾಗಿದ್ದಾಗ 24 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರು. ನನಗೆ ಹೆಗಲಿಗೆ ಹೆಗಲು ಕೊಟ್ಟು ನನ್ನ ಅರ್ಧ ಕೆಲಸದ ಒತ್ತಡ ಕಡಿಮೆ ಮಾಡುತ್ತಿದ್ದರು. ಅಂತಹವರು ಯಾವುದೇ ಕಾರಣಕ್ಕೂ ಸೋಲಬಾರದು ಎಂದರು.
ನರೇಂದ್ರ ಮೋದಿಯವರು ಅಧಿಕಾರಕ್ಕೆ ಬರುವ ಮುಂಚೆ ನಾನು ತಿನ್ನುವುದಿಲ್ಲ ತಿನ್ನಲು ಬಿಡುವುದಿಲ್ಲ. ಕಪ್ಪು ಹಣ ತಂದು ಪ್ರತಿ ಕುಟುಂಬಕ್ಕೆ 15 ಲಕ್ಷ ರೂ. ನೀಡುತ್ತೇನೆ. ಅಚ್ಚೆದಿನ್ ಮಾಡುತ್ತೇನೆ ಎಂದು ಸುಳ್ಳು ಹೇಳಿ ಅಧಿಕಾರಕ್ಕೆ ಬಂದರು ಆದರೆ ಇದುವರೆಗೂ ಕರ್ನಾಟಕ ಸರ್ಕಾರದ 40 ಪರ್ಸೆಂಟ್ ಕಮಿಷನ್‌ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇಂತಹ ಸುಳ್ಳು ಹೇಳುವ ಪ್ರಧಾನಿಯನ್ನು ಇದುವರೆಗೂ ಭಾರತದಲ್ಲಿ ನಾನು ಕಂಡಿಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ, ಮನೆಯ ಯಜಮಾನಿಗೆ 2000 ಧನಸಹಾಯ, 200 ವ್ಯಾಟ್ ವಿದ್ಯುತ್ ಉಚಿತ, ಬಸ್‌ಗಳಲ್ಲಿ ಹೆಣ್ಣುಮಕ್ಕಳಿಗೆ ಉಚಿತ ಪ್ರಯಾಣ ಸೇರಿದಂತೆ ಕಾಂಗ್ರೆಸ್ ಅವಧಿಯಲ್ಲಿ ಜಾರಿಗೆ ತಂದಿದ್ದ ಎಲ್ಲಾ ಯೋಜನೆಗಳನ್ನು ಮರು ಜಾರಿ ಮಾಡುತ್ತೇವೆ ಎಂದರು.
ಭ್ರಷ್ಟ ಬಿಜೆಪಿ ಸರ್ಕಾರ ತೊಲಗಿಸಿ: ರಾಜ್ಯದಲ್ಲಿ ಆಪರೇಷನ್ ಕಮಲದ ಮೂಲಕ ಶಾಸಕರುಗಳನ್ನು ಖರೀದಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯವನ್ನು ಲೂಟಿ ಮಾಡಿ 40 ರಿಂದ 50 ಪರ್ಸೆಂಟ್ ಕಮಿಷನ್ ಮೂಲಕ ಆಡಳಿತ ನಡೆಸುತ್ತಿದ್ದಾರೆ. ಇಂತಹ ಭ್ರಷ್ಟ ಬಿಜೆಪಿ ಸರ್ಕಾರವನ್ನು ಮತದಾರರು ತೊಲಗಿಸಿ, ಉತ್ತಮ ಆಡಳಿತಕ್ಕೆ ಕಾಂಗ್ರೆಸ್ ಸರಕಾರವನ್ನು ಅಧಿಕಾರಕ್ಕೆ ತನ್ನಿ ಎಂದರು.
ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ ಶಿರಾ ಕ್ಷೇತ್ರವನ್ನು ಜಿಲ್ಲಾ ಕೇಂದ್ರದ ಮಟ್ಟಕ್ಕೆ ಅಭಿವೃದ್ಧಿ ಮಾಡಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊಡುವೆ ಅಪಾರ. ಕಾಂಗ್ರೆಸ್ ಸರ್ಕಾರದ ಅಧಿಕಾರವಧಿಯಲ್ಲಿ ನಾನು ಕೇಳಿದ ಯಾವುದಕ್ಕೂ ಇಲ್ಲಾ ಎನ್ನದೆ ಅನುದಾನ ನೀಡುತ್ತಿದ್ದರು. ಅಪ್ಪರ್ ಭದ್ರ ಯೋಜನೆಗೆ 6000 ಕೋಟಿ ರೂ. ನೀಡಿ ತುಮಕೂರು ಭಾಗಕ್ಕೆ ನೀರು ಹರಿಸಲು ಕಾರಣರಾಗಿದ್ದಾರೆ. ಅಪ್ಪರ್ ಭದ್ರ, ಎತ್ತಿನ ಹೊಳೆ ಕಾಮಗಾರಿಗಳು ಸ್ಥಗಿತಗೊಂಡಿವೆ. ನಾನು ಚುನಾವಣೆಗೆ ನಿಂತ ಉದ್ದೇಶವೇ ಎತ್ತಿನ ಹೊಳೆ, ಅಪ್ಪರ್ ಭದ್ರ ನೀರು ತಂದು ರಾಜಕೀಯದಿಂದ ನಿವೃತ್ತಿಯಾಗುತ್ತೇನೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ತಾಲ್ಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸುವ ಕೆಲಸ ಮಾಡುತ್ತೇನೆ ಎಂದರು.
35 ಅಡಿ ಉದ್ದದ ಕಂಬಳಿ ಹಾರ: ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿ ಅಂಬೇಡ್ಕರ್ ಸರ್ಕಲ್‌ನಿಂದ ಸಮಾವೇಶದವರೆಗೂ ಅದ್ಧೂರಿ ಮೆರವಣಿಗೆ ಮಾಡಿದರು. ನಂತರ 35 ಅಡಿ ಉದ್ದದ ಕಂಬಳಿ ಹಾರ ಹಾಕಿದರು.
ಸಮಾವೇಶದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಚಂದ್ರಪ್ಪ, ವಿ.ಪ. ಸದಸ್ಯ ನಾಗರಾಜ್ ಯಾದವ್, ಆಂದ್ರ ಪ್ರದೇಶದ ಮಾಜಿ ಸಚಿವ ರಘುವೀರ ರೆಡ್ಡಿ, ಮಾಜಿ ಶಾಸಕ ಸಾ.ಲಿಂಗಯ್ಯ, ಶಿರಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ.ಆರ್.ಮಂಜುನಾಥ್, ನಟರಾಜ್ ಬರಗೂರು, ಮಾಜಿ ನಗರಸಭಾ ಅಧ್ಯಕ್ಷ ಅಮಾನುಲ್ಲಾ ಖಾನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಗೌಡ, ಕೆಪಿಸಿಸಿ ಸದಸ್ಯ ಟಿ.ಲೋಕೇಶ್, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಅಬ್ದುಲ್ಲಾ ಖಾನ್, ಮಾಜಿ ಜಿ.ಪಂ. ಸದಸ್ಯ ಸಿ.ಆರ್.ಉಮೇಶ್, ಕಾನೂನು ಘಟಕದ ಅಧ್ಯಕ್ಷ ಹೆಚ್.ಗುರುಮೂರ್ತಿ ಗೌಡ, ನಗರ ಉಪಾಧ್ಯಕ್ಷ ರೂಪೇಶ್ ಕೃಷ್ಣಯ್, ಶ್ರೀರಾಮೇಗೌಡ, ಪಿ.ಎಸ್.ತ್ಯಾಗರಾಜ್, ಕೊಟ್ಟಶಂಕರ್, ಗುಳೀಗೇನಹಳ್ಳಿ ನಾಗರಾಜ್, ಡಾ.ಮಂಜುನಾಥ್, ಎ.ಎಂ.ಎ. ಕೆ. ಪ್ಯಾರು, ನಗರಸಭೆ ಸದಸ್ಯರಾದ ಅಜಯ್‌ಕುಮಾರ್, ಲಕ್ಷ್ಮೀಕಾಂತ್, ಪೂಜಾ ಪೆದ್ದರಾಜು ಸೇರಿದಂತೆ ಹಲವರು ಹಾಜರಿದ್ದರು.