ತುಮಕೂರು : ತಾಲೂಕಿನ ಹೆಬ್ಬೂರು ಗ್ರಾಮ ಪಂಚಾಯತಿಯ ಮತಗಟ್ಟೆ ಕೇಂದ್ರದಲ್ಲಿಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೆ ವಿದ್ಯಾಕುಮಾರಿ ಅವರು ಧ್ವಜಾರೋಹಣ ನೆರೆವೇರಿಸಿ ‘ನಮ್ಮ ನಡೆ ಮತಗಟ್ಟೆ ತೋರಿಸುವ ಕಡೆ’ ಎಂಬ ಮತದಾನದ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದರು.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮನೆ ಮನೆ ಭೇಟಿ ನೀಡಿ ಮಾತನಾಡುತ್ತಾ ವಿಶೇಷಚೇತನರಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತಷ್ಟು ಗಟ್ಟಿಗೊಳ್ಳಲು ನಿಮ್ಮೆಲ್ಲರ ಸಹಕಾರ ಅತ್ಯಗತ್ಯ. ವಯೋವೃದ್ದರು, ವಿಕಲಚೇತನ ಮತದಾರರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಚುನಾವಣಾ ಆಯೋಗವು ಮನೆಯಿಂದಲೇ ಮತದಾನ ಮಾಡುವ ಅವಕಾಶ ಕಲ್ಪಿಸಿದೆ ಎಂದು ತಿಳಿಸಿದರು.
ಮತದಾನವು ಪ್ರಜಾಪ್ರಭುತ್ವದ ಶ್ರೇಷ್ಠ ದಾನವಾಗಿದ್ದು ಪ್ರತಿಯೊಬ್ಬರು ತಮ್ಮ ಮತವನ್ನು ಚಲಾಯಿಸುವ ಮುಖಾಂತರ ಮತದಾನ ಹಬ್ಬಕ್ಕೆ ಎಲ್ಲರೂ ಕೈ ಜೋಡಿಸಬೇಕು ಹಾಗೂ ಯಾವುದೇ ಹಣ ಆಮಿಷಕ್ಕೆ ಒಳಗಾಗದೇ ಮತದಾನ ಮಾಡಬೇಕು ಪ್ರತಿಶತ ಮತದಾನ ತುಮಕೂರು ಜಿಲ್ಲೆಯ ವಾಗ್ದಾನ ಎಂಬ ಧ್ಯೇಯವಾಕ್ಯದೊಂದಿಗೆ ಎಲ್ಲರೂ ಕಡ್ಡಯವಾಗಿ ಮತಚಲಾಯಿಸಲು ಪಣ ತೊಡಬೇಕು. ಇದರಿಂದ ಉತ್ತಮ ರಾಷ್ಟ್ರ ನಿರ್ಮಿಸಲು ನಾವೆಲ್ಲರೂ ಸಹಕಾರ ನೀಡೊಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಮ್ಮ ನಡೆ ಮತಗಟ್ಟೆಯ ಕಡೆ ಕಾರ್ಯಕ್ರಮಕ್ಕೆ ತಾಲ್ಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಕೈ ಜೋಡಿಸಿ ಪ್ರಜಾಪ್ರಭುತ್ವದ ಹಬ್ಬಕ್ಕೆ ತಾವೆಲ್ಲರೂ ಮೇ ೧೦ ರಂದು ತಪ್ಪದೇ ಮತದಾನ ಮಾಡುವ ಮೂಲಕ ತಮ್ಮ ಶಕ್ತಿಯನ್ನು ತೋರಿಸುವ ಸುವರ್ಣಾವಕಾಶ ಬಂದಿದೆ. ಹಾಗಾಗಿ ತಾವೆಲ್ಲರೂ ತಪ್ಪದೇ ಮತದಾನ ಮಾಡಬೇಕೆಂದು ವಾಗ್ದಾನ ಮಾಡಿದರು. ಮತದಾನ ಜಾಗೃತಿಗೆ ಪ್ರಮುಖ ಆಕರ್ಷಣೆಯಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಎತ್ತಿನಗಾಡಿ ಮುಖಾಂತರ ಮತದಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳಾದ ಡೊಳ್ಳು ಕುಣಿತ, ವೀರಗಾಸೆ, ಮತದಾನ ಜಾಗೃತಿ ಗೀತೆಗಳ ಮೂಲಕ ಆಟೋ ಪ್ರಚಾರ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಪಂಚಾಯತಿಯ ಅಭಿವೃದ್ದಿ ಅಧಿಕಾರಿಗಳು, ಎನ್.ಆರ್.ಎಲ್.ಎಮ್ ಸಿಬ್ಬಂದಿ ಸದಸ್ಯರು, ಅಂಗನವಾಡಿ ಟೀಚರ್ ಕಾರ್ಯಕರ್ತರು, ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ಭಾಗವಹಿಸಿದ್ದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು