ಮನೆ ಹೆಸರಿನಲ್ಲಿ ಶಾಸಕ ಮಸಾಲಜಯರಾಮ್‌ರಿಂದ ಓಟ್ ಗಿಮಿಕ್ ರಾಜಕಾರಣ : ಎಂ.ಟಿ.ಕೃಷ್ಣಪ್ಪ
ತುರುವೇಕೆರೆ : ಕ್ಷೇತ್ರದ ಬಡ ಜನತೆಗೆ ಮನೆ ಹಂಚಿಕೆ ಮಾಡುವುದಾಗಿ ಸುಳ್ಳು ಹೇಳಿಕೊಂಡು ಶಾಸಕ ಮಸಾಲಜಯರಾಮ್ ಓಟ್ ಗಿಮಿಕ್ ರಾಜಕಾರಣ ಮಾಡುತ್ತಿದ್ದಾರೆಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ದೂರಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸರಕಾರದಿಂದ ಸಾವಿರಾರು ಮನೆಗಳನ್ನು ತಂದಿದ್ದೇನೆ, ಬಡವರಿಗೆ ಮನೆ ನೀಡುತ್ತೇನೆ ಎಂದು ಜನರಿಗೆ ಸುಳ್ಳು ಆಶ್ವಾಸನೆ ನೀಡುತ್ತಿರುವುದು ಹಾಸ್ಯಾಸ್ಪದವಾಗಿದೆ. ಅಸಲಿಗೆ ಶಾಸಕರಿಗೆ ಮನೆ ಹಂಚಿಕೆ ಮಾಡುವ ಅಧಿಕಾರವೇ ಇರುವುದಿಲ್ಲ ಎಂಬುದು ಸ್ಪಷ್ಟ. ಗ್ರಾಮಸಭೆಗಳ ಮೂಲಕ ಮನೆ ಹಂಚಿಕೆ ಮಾಡುವ ಮುನ್ನ ಫಲಾನುಭವಿಗಳ ಆಯ್ಕೆ ನಡೆಸಲಾಗುತ್ತದೆ. ಫಲಾನುಭವಿಗಳನ್ನು ಗುರುತಿಸಿ ಆಯ್ಕೆ ಪಟ್ಟಿಯನ್ನು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಕಳುಹಿಸಲಾಗುತ್ತಿದೆ. ಫಲಾನುಭವಿಗಳಿಗೆ ಮನೆ ನಿರ್ಮಿಸಿಕೊಳ್ಳಲು ಕಾರ್ಯಾದೇಶ ನೀಡುವ ಹಂತ ತಲುಪಲು ಕನಿಷ್ಟ ಮೂರು ತಿಂಗಳ ಅವಧಿ ಬೇಕಾಗುತ್ತದೆ. ಆದರೇ ಚುನಾವಣೆ ಸಮಯದಲ್ಲಿ ಮನೆ ನೀಡುತ್ತಿದ್ದೇನೆಂದು ಓಟಿಗಾಗಿ ಬಡ ಜನತೆಯನ್ನು ಮಸಾಲಜಯರಾಮ್ ಮಂಕುಬೂದಿ ಎರಚುತ್ತಿದ್ದಾರೆ ಕ್ಷೇತ್ರದ ಜನತೆ ಎಚ್ಚರವಹಿಸುವಂತೆ ಮನವಿ ಮಾಡಿದರು.
ಕಳಪೆ ಕಾಮಗಾರಿಗಳು :
ಕ್ಷೇತ್ರ ವ್ಯಾಪ್ತಿಯಲ್ಲಿ ಭೂ ಸೇನಾ ನಿಗಮದಡಿ ನಡೆಯುತ್ತಿರುವ ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿಗಳು ಅತ್ಯಂತ ಕಳಪೆಯಿಂದ ಕೂಡಿವೆ. ಸಿ.ಸಿ.ರಸ್ತೆ ನಿರ್ಮಾಣ ಮಾಡುತ್ತಿರುವ ಗುತ್ತಿಗೆದಾರರು ಬೆಂಗಳೂರು, ಕುಣಿಗಲ್ ಹಾಗೂ ವೀರಣ್ಣನಗುಡಿಯವರಾಗಿರುತ್ತಾರೆ. ಜನತೆ ಗುಣಮಟ್ಟದ ಬಗ್ಗೆ ಪ್ರಶ್ನಿಸಿದರೇ ನಾವು ಶಾಸಕರಿಗೆ ಕಮಿಷನ್ ನೀಡಿದ್ದೇವೆ, ಕಾಮಗಾರಿ ಹೀಗೆ ಮಾಡುವುದು ಎಂದು ಉಡಾಫೆ ಉತ್ತರ ನೀಡುತ್ತಿದ್ದಾರೆ. ಸಿ.ಸಿ.ರಸ್ತೆ ನಿರ್ಮಾಣದ ಹೆಸರಿನಲ್ಲಿ ಸಾವಜನಿಕರ ಹಣವನ್ನು ಲೂಟಿ ಮಾಡುತ್ತಿರುವ ಗುತ್ತಿಗೆದಾರ ವಿರುದ್ದ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು. ಸಂಬಂದಪಟ್ಟ ಎಂಜಿನಿಯರ್‌ಗಳು ಗುತ್ತಿಗೆದಾರರಿಗೆ ಬಿಲ್ ಬರೆದುಕೊಡಲು ಶಾಮೀಲಾದರೇ ಶಿಸ್ತುಕ್ರಮಕ್ಕೆ ಒತ್ತಾಯಿಸುತ್ತೇನೆ ಎಂದು ಎಚ್ಚರಿಸಿದರು.
ಮಹಾನ್ ಸುಳ್ಳುಗಾರ :
ಈ ಹಿಂದೆ ಸಚಿವರಾಗಿದ್ದ ಪುಟ್ಟರಾಜುರವರಿಂದ ಕಲ್ಲೂರು ಕೆರೆ ನೀರು ತುಂಬಿಸಲು ಅನುಮೋದನೆ ನನ್ನ ಕಾಲದಲ್ಲೇ ದೊರೆತಿರುವುದಕ್ಕೆ ದಾಖಲೆ ಇದೆ. ಈ ಸಲುವಾಗಿ ಅಂದಿನ ಸಂಸದ ಮುದ್ದಹನುಮೇಗೌಡರ ಪರಿಶ್ರಮವನ್ನು ಸ್ಮರಿಸುತ್ತೇನೆ. ಅದೇ ರೀತಿ ಶೆಟ್ಟಿಗೊಂಡನಹಳ್ಳಿ ಪವರ್ ಸ್ಟೇಷನ್ ಸ್ಥಾಪನೆ ಮಾಡುವಂತೆ ನನಗಿಂತ ಮೊದಲು ಶಾಸಕ ಮಸಾಲಜಯರಾಮ್ ಸರಕಾರಕ್ಕೆ ಪತ್ರ ಬರೆದಿಲ್ಲ. ಎಲ್ಲ ನನ್ನದೇ ಸಾಧನೆ ಎಂದು ಪುನರುಚ್ಚರಿಸುತ್ತಿರುವ ಮಸಾಲೆಜಯರಾಮ್ ಮಹಾನ್ ಸುಳ್ಳುಗಾರ ಎಮದು ಲೇವಡಿ ಮಾಡಿದರು.
ಗೋಷ್ಟಿಯಲ್ಲಿ ಯುವ ಘಟಕದ ಅಧ್ಯಕ್ಷ ಬಾಣಸಂದ್ರರಮೇಶ್,ವಕ್ತಾರ ಯೋಗೀಶ್, ಮುಖಂಡರಾದ ಡಿ.ಪಿ.ರಾಜು, ಹೆಡಗೀಹಳ್ಳಿವಿಶ್ವನಾಥ್,ಹರೀಶ್, ಪ್ರಸನ್ನಕುಮಾರ್, ಗ್ರಾ.ಪಂ . ಮಾಜಿ ಅದ್ಯಕ್ಷರುಗಳಾದ ರಾಮಕೃಷ್ಣ, ಚನ್ನಬಸವಣ್ಣ ಮತ್ತಿತರಿದ್ದರು.