ತುಮಕೂರು

ಸರಕಾರ ಗೋ ರಕ್ಷಣೆಯ ಬದಲು ಗೋವುಗಳನ್ನು ಕಸಾಯಿಖಾನೆಗೆ ತಳ್ಳುತ್ತಿದೆ : ಕೋಡಿಹಳ್ಳಿ ಚಂದ್ರಶೇಖರ್

ತುಮಕೂರು : ಗೋ ರಕ್ಷಣೆ ಹೆಸರಿನಲ್ಲಿ ರೈತರ ಗೋವುಗಳನ್ನು ವಶಪಡಿಸಿಕೊಂಡು,ರೈತರು ಮತ್ತು ಗೋವುಗಳ ಮೇಲೆ ಎಫ್.ಐ.ಆರ್. ದಾಖಲಿಸಿ, ವಶಪಡಿಸಿಕೊಂಡ ಗೋವುಗಳನ್ನು ಗೋಶಾಲೆಗೆ ಕಳುಹಿಸಿ ಅವುಗಳು ಮರಣ ಹೊಂದುವಂತೆ ಮಾಡುವ ಮೂಲಕ ಬೊಮ್ಮಾಯಿ ಸರಕಾರ ಗೋ ರಕ್ಷಣೆಯ ಬದಲು ಗೋವುಗಳ ಕಸಾಯಿಖಾನೆಗೆ ಕಳುಹಿಸುವ ಕೆಲಸ ಮಾಡುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದ್ದಾರೆ.
ಗೋರಕ್ಷಣೆ ಹೆಸರಿನಲ್ಲಿ ಸಾಕಲು ತೆಗೆದುಕೊಂಡು ಹೋಗುತ್ತಿದ್ದ ಗೋವುಗಳನ್ನು ಕ್ಯಾತ್ಸಂದ್ರ ಮತ್ತು ಶಿರಾ ಟೋಲ್ ಬಳಿ ತಡೆದು, ಹತ್ತಾರು ಗೋವುಗಳಿಗೆ ಕಾರಣವಾಗಿರುವ, ರೈತರಿಗೆ ನಷ್ಟ ಉಂಟು ಮಾಡಿರುವ ಪೊಲೀಸರ ಕ್ರಮವನ್ನು ಖಂಡಿಸಿ, ಇಂದು ಜಾಸ್‌ಟೋಲ್‌ನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಆಯೋಜಿಸಿದ್ದ ರೈತರ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತಿದ್ದ ಅವರು,ಸರಕಾರ ಗೋ ಸಂರಕ್ಷಣಾ ಕಾಯ್ದೆಯ ಹೆಸರಿನಲ್ಲಿ ಕೆಲವು ಸಂಘಟನೆಗಳ ಮೂಲಕ ರೈತರ ಗೋವುಗಳನ್ನು ಕಸಾಯಿಖಾನೆಗೆ ಕಳುಹಿಸುವ ಕೆಲಸ ಮಾಡುತ್ತಿದೆ ಎಂದರು.
ರಾಜ್ಯದಲ್ಲಿ ಗೋ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದ ನಂತರ,ರಾಜ್ಯದಲ್ಲಿರುವ ಟೋಲ್‌ಗಳಲ್ಲಿ ಕೆಲವು ಗೋರಕ್ಷಕರ ಹೆಸರಿನ ಸಂಘಟನೆಗಳು ಸಾಕಲು ತೆಗೆದುಕೊಂಡು ಹೋಗುವ ಹಸುಗಳನ್ನು ಹಿಡಿದು,ಸಾಗಿಸುತ್ತಿದ್ದ ವಾಹನಗಳು, ಅದರ ಮಾಲೀಕರು ಮತ್ತು ಚಾಲಕರ ಮೇಲೆ ಕೇಸು ಹಾಕಿ ದಂಡ ವಸೂಲಿ ಮಾಡುವುದಲ್ಲದೆ,ಗೋವುಗಳನ್ನು ಗೋಶಾಲೆಗಳಿಗೆ ಕಳುಹಿಸುತ್ತಿದ್ದಾರೆ.ರೈತ ಕಾನೂನಿನ ಅಡಿಯಲ್ಲಿ ನ್ಯಾಯಾಲಯದಿಂದ ಗೋವುಗಳ ಬಿಡುಗಡೆಗೆ ನೋಟಿಷ್ ತೆಗೆದುಕೊಂಡು ಹೋದರೆ,ವಶಪಡಿಸಿ ಕೊಂಡ ಗೋವುಗಳಲ್ಲಿ ಕೆಲವು ಇರುವುದೇ ಇಲ್ಲ.ಕೇಳಿದರೆ ಗೋಶಾಲೆಗಳ ಮೇಲ್ವಿಚಾರಕರು ಸತ್ತು ಹೋಗಿವೆ ಎಂಬ ಉತ್ತರ ನೀಡಿ,ಪಶುವೈದ್ಯರಿಂದ ಸರ್ಟಿಪಿಕೇಟ್ ನೀಡುತ್ತಿದ್ದಾರೆ.ಸಾಲ ಸೋಲ ಮಾಡಿ ಹಸುಗಳನ್ನು ಕೊಂಡು,ಪೊಲೀಸ್ ಠಾಣೆಗೆ ತಿರುಗಿದ್ದಲ್ಲದೆ,ಕೊನೆಗೆ ಹಸುಗಳು ಇಲ್ಲದೆ ಪರದಾಡುವಂತಹ ಸ್ಥಿತಿ ಇದೆ.ಕೆಲವು ಟೋಲ್‌ಗಳಲ್ಲಿ ಪೊಲೀಸರೇ ಏಜೆಂಟರುಗಳನ್ನು ನೇಮಕ ಮಾಡಿಕೊಂಡು ಈ ರೀತಿಯ ದಂಧೆ ನಡೆಸುತ್ತಿದ್ದಾರೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದರು.

ನಗರದ ಜಾಸ್‌ಟೋಲ್‌ನಿಂದ ಬಿ.ಹೆಚ್.ರಸ್ತೆ ಮೂಲಕ ಸಾಗಿ ಬಂದ ರೈತರ ಪಾದಯಾತ್ರೆ, ಟೌನ್‌ಹಾಲ್, ಅಶೋಕ ರಸ್ತೆಯಲ್ಲಿ ಹಾದು ಜಿಲ್ಲಾಧಿಕಾರಿಗಳ ಕಚೇರಿ ತಲುಪಿತು.

ಗೋ ಸಂರಕ್ಷಕರ ಹೆಸರಿನಲ್ಲಿ ರೈತರು ಹಸುಗಳನ್ನು ಕೊಂಡು ತೆಗೆದುಕೊಂಡು ಹೋಗುವ ವಾಹನಗಳ ಮೇಲೆ ದಾಳಿ ಮಾಡಲು ಇವರಿಗೆ ಅಧಿಕಾರ ಕೊಟ್ಟವರು ಯಾರು ?,ಇವರೆನು ಸರಕಾರದ ಏಜೆಂಟರೇ,ಕಳೆದ ಒಂದು ವರ್ಷದಲ್ಲಿ ಇಂತಹ ಪ್ರಕರಣಗಳಲ್ಲಿ ಹತ್ತಾರು ಹಸುಗಳು ಕಳೆದು ಹೋಗಿವೆ.ಕಳೆದ 15 ದಿನಗಳ ಹಿಂದೆ ಚಿಕ್ಕೋಡಿಯಿಂದ ಹಸುಗಳನ್ನು ತರುತ್ತಿದ್ದ ಸುಮಾರು 11 ಲೋಡ್ ಹಸುಗಳನ್ನು ವಶಪಡಿಸಿಕೊಂಡಿದ್ದು,ಇವುಗಳಲ್ಲಿ 18 ಹಸುಗಳು ಸಾವನ್ನಪ್ಪಿವೆ.ಈ ನಷ್ಟವನ್ನು ರೈತರಿಗೆ ಕಟ್ಟಿಕೊಡುವವರು ಯಾರು? ಇದರಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸರು ನೇರವಾಗಿ ಭಾಗಿಯಾಗಿದ್ದಾರೆ.ಕೂಡಲೇ ಈ ರೀತಿಯ ದಂಧೆ ಯನ್ನು ನಿಲ್ಲಿಸಬೇಕು.ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದರು.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಆನಂದ ಪಟೇಲ್ ಮಾತನಾಡಿ,ಗೋಸಂರಕ್ಷಣಾ ಕಾಯ್ದೆಯನ್ನು ಮುಂದಿಟ್ಟುಕೊಂಡು ರೈತರನ್ನು ಶೋಷಣೆ ಮಾಡಲಾಗುತ್ತಿದೆ.ಕಳೆದ 15 ದಿನಗಳ ಹಿಂದೆ ವಶಪಡಿಸಿಕೊಂಡ 25 ಲೀಟರ್ ಹಾಲು ನೀಡುವ ಸಾಮರ್ಥ್ಯದ ಹಸು, ಗೋಶಾಲೆಯಲ್ಲಿ ಹಾಕು ಮೇವು ಸಾಕಾಗಿದೆ.ಬಡಕಲಾಗಿ ಸಾಯುವ ಹಂತಕ್ಕೆ ಬಂದಿದೆ. ಇವುಗಳಲ್ಲಿ ಕೆಲವು ಸಾವನ್ನಪ್ಪಿವೆ.ಇದರ ಹೊಣೆಯನ್ನು ಯಾರು ಹೋರುತ್ತಾರೆ.ನಿಮಗೆ ನಿಜವಾಗಿಯೂ ರೈತರು ಮತ್ತು ಗೋವುಗಳ ಮೇಲೆ ಕಾಳಜಿ ಇದ್ದರೆ, ಎಲ್ಲಿ ಗೋವುಗಳನ್ನು ವಶಪಡಿಸಿಕೊಳ್ಳುತ್ತೀರೋ ಅಲ್ಲಿಯೇ ಗೋವಿನ ಬೆಲೆ ನಿಗಧಿ ಪಡಿಸಿ, ರೈತನ ಖಾತೆಗೆ ಜಮಾ ಮಾಡಿ, ತೆಗೆದುಕೊಂಡು ಹೋಗಲಿ.ಸಾಲ ಮಾಡಿ,ಹೆಂಡತಿ ಮಾಂಗಲ್ಯ ಅಡವಿಟ್ಟು, ಹೈನುಗಾರಿಕೆ ಮಾಡಲು ಹಸುಗಳನ್ನು ತೆಗೆದುಕೊಂಡು ಹೋಗುತ್ತಿದ್ದರೆ, ಅವುಗಳನ್ನು ಹಿಡಿದು, ಗೋಶಾಲೆಗೆ ಕಳುಹಿಸಿ,ಮೂಕ ಪ್ರಾಣಿಗಳ ಮೇಲೂ ಕೇಸು ಹಾಕಲಾಗುತ್ತಿದೆ.ಇದು ಯಾವ ನ್ಯಾಯ. ಸರಕಾರ ರೈತರಿಗೆ ಮಾರಕವಾಗಿರುವ ಈ ಕರ್ನಾಟಕ ಗೋಸಂರಕ್ಷಣಾ ಕಾಯ್ದೆಯನ್ನು ವಾಪಸ್ ಪಡೆದು, ರೈತರು ಸಾಕುವ ಹಸುಗಳಿಗೆ ಸಹಾಯಧನ ನೀಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಭಕ್ತರಹಳ್ಳಿ ಭೈರೇಗೌಡ, ಧನಂಜಯ್ ಆರಾಧ್ಯ,ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಚನಹಳ್ಳಿ ಭೈರೇಗೌಡ, ಅನಿಲ್ ಕುಮಾರ್, ರಾಮನಗರ ಜಿಲ್ಲಾಧ್ಯಕ್ಷ ಭೈರೇಗೌಡ ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker