ತಿಪಟೂರು : ರಾಜ್ಯದಲ್ಲಿ ದೀನ ದಲಿತರ, ಹಿಂದುಳಿದ ವರ್ಗಗಳ, ಬಡವರ, ಮಹಿಳೆಯರ, ಅಮಾಯಕರ ಪ್ರಗತಿಯಾಗಲು ರಾಜ್ಯದಲ್ಲಿ ಜನಪರ ಸರ್ಕಾರ ರಚನೆ ಆಗಬೇಕಾದರೆ ಜೆಡಿಎಸ್ ಪಕ್ಷಕ್ಕೆ ಸ್ಪಷ್ಟ ಬಹುಮತವನ್ನು ರಾಜ್ಯದ ಜನತೆ ನೀಡಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಶುಕ್ರವಾರ ಎಚ್.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ಕೆ.ಟಿ.ಶಾಂತಕುಮಾರ್ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾನು ಎರಡು ಬಾರಿ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದು, ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ಬಯಸುತ್ತಿಲ್ಲ ನಮ್ಮ ರಾಜ್ಯದಲ್ಲಿರುವ ಮಹಿಳೆಯರ, ಬಡವರ ಪರಿಸ್ಥಿಯ ಋಣ ತೀರಿಸಲು ಹಾಗೂ ಆರೋಗ್ಯದ ವಿಷಯದಲ್ಲಿ ದುಬಾರಿ ವೆಚ್ಚವನ್ನು ತಪ್ಪಿಸಬೇಕಾಗಿದೆ, ಅಧಿಕಾರದ ಸಂಧರ್ಭದಲ್ಲಿ 14 ತಿಂಗಳ ಸರ್ಕಾರದಲ್ಲಿ ಸಾಲಾಮನ್ನಾ, ಹೇಮಾವತಿ ನಾಲಾ ಸ್ವಚ್ಛತೆ ಸೇರಿದಂತೆ ಹಲವು ಅನುಕೂಲಗಳನ್ನು ಮಾಡಲಾಗಿದೆ. ರಾಜ್ಯದ ಜನತೆ ಮನಸ್ಸು ಮಾಡಿ 123 ಸ್ಥಾನವನ್ನು ನೀಡಿ ಪೂರ್ಣ ಬಹುಮತದೊಂದಿಗೆ ಸರ್ಕಾರ ನಡೆಸಿದರೆ ಇರುವ ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ಅನುಕೂಲ ಮಾಡುವ ಜೊತೆಗೆ 50 ಉಪ ನದಿಗಳ ನೀರನ್ನು ಜೋಡಿಸುವ ಯೋಜನೆಯ ಮೂಲಕ ರೈತರನ್ನು ಸದೃಢರನ್ನಾಗಿಸಿ ಮಾಸಿಕ 15 ಸಾವಿರ ಹಣ ಸಂದಾಯವಾಗುವಂತಹ ಯೋಜನೆ ಜಾರಿಗೆ ಎಂದು ತಿಳಿಸಿದರು.
ತಿಪಟೂರು ತಾಲ್ಲೂಕಿನಲ್ಲಿ ಹಿಂದಿನಿಂದಲೂ ಜೆಡಿಎಸ್ ಪಕ್ಷಕ್ಕೆ ಉತ್ತಮ ಕಾರ್ಯಕರ್ತರಿದ್ದು ಕಾರ್ಯನಿರ್ವಹಣೆ ಮಾಡುತ್ತಿದ್ದು 2008ರಿಂದ ಇತ್ತೀಚಿಗೆ ನಾಯಕರ ಹಾಗೂ ಕಾರ್ಯಕರ್ತರ ಬಿನ್ನಾಭಿಪ್ರಾಯದಿಂದ ಹಿನ್ನೆಡೆ ಸಾಧಿಸಿದ್ದೇವೆ. ಅದರೂ ಸಹ ವೀರಶೈವ ಸಮಾಜಕ್ಕೆ ಮನ್ನಣೆ ನೀಡಬೇಕಾಗಿದ್ದ ಪರಿಸ್ಥಿತಿಯಲ್ಲಿ ಕಳೆದ ಬಾರಿ ಚುನಾವಣೆಯಲ್ಲಿ ಟಿಕೇಟ್ ನೀಡಿದ್ದು, ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಎಚ್.ಡಿ.ದೇವೇಗೌಡರಿಗೆ ಹೆಚ್ಚಿನ ಮತ ನೀಡುವ ಮೂಲಕ ಋಣವನ್ನು ನೀಡಿದ್ದಾರೆ. ಪಕ್ಷವೂ ಸಂಕಷ್ಟದಲ್ಲಿ ಇರುವಾಗೆಲ್ಲಾ ತುಮಕೂರು ಜಿಲ್ಲೆಯೂ ಕೈಹಿಡಿದಿದ್ದನ್ನು ಮರೆಯಲು ಸಾಧ್ಯವಿಲ್ಲ. ಎಚ್.ಡಿ.ದೇವೇಗೌಡರು ನೀರಾವರಿ ವಿಚಾರದಲ್ಲಿ ತುಮಕೂರು ಜಿಲ್ಲೆಗೆ ನೀರನ್ನು ನೀಡಬಾರದು ಎಂದಿದ್ದಾರೆ ಎಂಬ ಅಪಪ್ರಚಾರ ನಡೆಯಿತು. 1966-67ರಲ್ಲಿ ಹೇಮಾವತಿ ಡ್ಯಾಂ ನಿರ್ಮಾಣ ಮಾಡಲು ಒತ್ತಡ ಹಾಕಿದ್ದೇ ದೇವೇಗೌಡರು. ನಂತರದ 14 ತಿಂಗಳ ಸರ್ಕಾರದಲ್ಲಿ ಸಾಲಾಮನ್ನಾ, ಹೇಮಾವತಿ ನಾಲಾ ಸ್ವಚ್ಛತೆ ಸೇರಿದಂತೆ ಹಲವು ಅನುಕೂಲಗಳನ್ನು ಮಾಡಲಾಗಿದೆ. ರಾಜ್ಯದ ಜನತೆ ಮನಸ್ಸು ಮಾಡಿ 123 ಸ್ಥಾನವನ್ನು ನೀಡಿ ಪೂರ್ಣ ಬಹುಮತದೊಂದಿಗೆ ಸರ್ಕಾರ ನಡೆಸಿದರೆ ಇರುವ ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ಅನುಕೂಲ ಮಾಡುವ ಜೊತೆಗೆ ರೈತರನ್ನು ಸದೃಢರನ್ನಾಗಿಸಿ ಮಾಸಿಕ 15 ಸಾವಿರ ಹಣ ಸಂದಾಯವಾಗುವಂತಹ ಯೋಜನೆ ಜಾರಿಗೆ ತರಲಾಗುವುದು ಎಂದರು.
ಚಿಕ್ಕನಾಯಕನಹಳ್ಳಿಯ ಮಾಜಿ ಶಾಸಕ ಸಿ.ಬಿ.ಸುರೇಶ್‌ಬಾಬು ಮಾತನಾಡಿ ರಾಜ್ಯದಲ್ಲಿ ಪಂಚರತ್ನ ಯಾತ್ರೆಯ ಮೂಲಕ ಜನರ ವಿಶ್ವಾಸವನ್ನು ಗಳಿಸಿದ್ದು ರಾಜ್ಯದ ಅಭಿವೃದ್ಧಿಗೆ ಶ್ರಮಿಸುವ ಏಕೈಕ ಪಕ್ಷ ಜೆಡಿಎಸ್ ಆಗಿದೆ. ಮುಂದಿನ 5 ವರ್ಷದಲ್ಲಿ ಜೆಡಿಎಸ್ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದ್ದು ಜನರ ಕಷ್ಟಗಳು ದೂರವಾಗಲಿದೆ ಎಂದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ ತಿಪಟೂರಿನಲ್ಲಿ ಹಿಂದೆ ಇದ್ದ ಶಾಸಕರು ಜನರಿಗೋಸ್ಕರ ಕೆಲಸ ಮಾಡುತ್ತಿದ್ದರು. ಆದರೆ ಶಿಕ್ಷಣ ಸಚಿವ ನಾಗೇಶ್ ರಾಜ್ಯದ ಪಠ್ಯಪುಸ್ತಕಗಳಲ್ಲಿ ಕುವೆಂಪು, ಬಸವಣ್ಣರಂತಹ ಚಿಂತಕರ, ಸಮಾನತೆ ಸಾರುವವರನ್ನು ತೆಗೆಯಲು ಪ್ರಯತ್ನಿಸಿದ್ದು ನಿಜಕ್ಕೂ ದುರಂತದ ಸಂಗತಿ. ಎರಡು ಪಕ್ಷಗಳಲ್ಲಿ ಬೇಲ್, ಜೈಲ್ ಶಾಸಕರು ಇದ್ದರೆ ನಮ್ಮ ಪಕ್ಷದಲ್ಲಿ ಸ್ವಚ್ಛತೆಯಿಂದರುವ ಶಾಸಕರು ಇದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಚ್.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ಕೆ.ಟಿ.ಶಾಂತಕುಮಾರ್ ಜೆಡಿಎಸ್‌ಗೆ ಅಧಿಕೃತವಾಗಿ ಸೇರ್ಪಡೆಗೊಂಡರು. ಶ್ರವಣಬೆಳಗೊಳ ಶಾಸಕ ಸಿ.ಎನ್.ಬಾಲಕೃಷ್ಣ, ತುರುವೇಕೆರೆ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ, ಕುಣಿಗಲ್‌ನ ಮಾಜಿ ಶಾಸಕ ಡಿ.ನಾಗರಾಜಯ್ಯ, ಜೆಡಿಎಸ್ ಮುಖಂಡ ಬೋಜೇಗೌಡ, ಜಕ್ಕನಹಳ್ಳಿ ಲಿಂಗರಾಜು, ಜೆಡಿಎಸ್ ಜಿಲ್ಲಾಧ್ಯಕ್ಷ ಅಂಜನಪ್ಪ, ತಾಲ್ಲೂಕು ಕಾರ್ಯಧ್ಯಕ್ಷ ಸೂಗೂರು ಶಿವಸ್ವಾಮಿ, ಮಾಜಿ ನಗರಸಭಾ ಸದಸ್ಯೆ ರೇಖಾ ಅನುಪ್, ಮಾಜಿ ಜಿ.ಪಂ.ಸದಸ್ಯೆ ರಾಧಾ ನಾರಾಯಣಗೌಡ ಸೇರಿದಂತೆ ಹಲವರು ಇದ್ದರು.