ಕುಣಿಗಲ್ : ಹಲವಾರು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಸಮರ್ಪಕವಾಗಿ ಒದಗಿಸಲು ಬೆಸ್ಕಾಂ ಇಲಾಖೆ ಅಧಿಕಾರಿಗಳು ಅಸಮರ್ಥರಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರೈತರೊಂದಿಗೆ ಪ್ರತಿಭಟನೆ ನಡೆಸಿದರು.
ಪಟ್ಟಣದ ಬೆಸ್ಕಾಂ ಕಾರ್ಯ ಪಾಲಕ ಇಂಜಿನಿಯರ್ ಕಚೇರಿ ಮುಂಭಾಗದಲ್ಲಿ ರೈತ ಸಂಘಟನೆ ಹಾಗೂ ರೈತರು ಪ್ರತಿಭಟನೆ ನಡೆಸಿ ಇಲಾಖೆ ಕಾರ್ಯವೈಕರಿಗೆ ಇಡೀ ಶಾಪ ಹಾಕಿದರು ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ಹಾಗೂ ತಾಲೂಕ ಅಧ್ಯಕ್ಷ ಅನಿಲ್ ಕುಮಾರ್, ಮಾತನಾಡಿ ಮಾರ್ಕೋನಹಳ್ಳಿ ಹಿನ್ನೀರಿನ ಗ್ರಾಮಗಳಾದ ಹಂಪಾಪುರ, ರಾಗಿಹಳ್ಳಿ, ಹೊಸೂರು, ಕಿತ್ತಘಟ್ಟ,ಕುರುಬರ ಶೆಟ್ಟಿಹಳ್ಳಿ, ಇತರೆ ಗ್ರಾಮಗಳ ಜನರಿಗೆ ಯಡಿಯೂರು ಬೆಸ್ಕಾಂ ಉಪವಿಭಾಗ ಸಮರ್ಪಕವಾಗಿ ವಿದ್ಯುತ್ ನೀಡದೆ ಸಾರ್ವಜನಿಕರು ಕಂಗಾಲಾಗಿದ್ದಾರೆ ಎಂದರು.
ಹಳ್ಳಿಗಳಲ್ಲಿ ಕುಡಿಯುವುದಕ್ಕೆ ನೀರಿಲ್ಲ, ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುವುದಕ್ಕೆ ದೀಪವಿಲ್ಲ, ಸಮರ್ಪಕವಾಗಿ ವಿದ್ಯುತ್ ಇಲ್ಲದೆ ರೈತರ ಕೊಳವೆಬಾವಿಗಳು ನಿಂತು ವ್ಯವಸಾಯ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ ಸುಮಾರು 7 ತಿಂಗಳುಗಳಿಂದ ಜನರು ವಿದ್ಯುತ್ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಈ ಸಂಬಂಧ ಈ ಹಿಂದೆ ನಾವುಗಳು ಇದೇ ಕಚೇರಿಯ ಮುಂದೆ ಪ್ರತಿಭಟನೆ ಮಾಡಿದಾಗ ಬೆಸ್ಕಾಂ ಅಧಿಕಾರಿಗಳು ತಾತ್ಕಾಲಿಕವಾಗಿ ವಿದ್ಯುತ್ ನೀಡಿದ್ದರು ಅದು ಕೂಡ ಸರಿಯಾಗಿ ಬರುತ್ತಿಲ್ಲ ಮಾರ್ಕೋನಹಳ್ಳಿ ಹಿನ್ನೇರಿನಲ್ಲಿ ವಿದ್ಯುತ್ ಕಂಬಗಳೆಲ್ಲ ನೀರಿನಲ್ಲಿ ಮುಳುಗಿವೆ ಕೆಲವು ಮುರಿದುಹೋಗಿವೆ ಆದರೂ ಬೇಸ್ಕಾಂ ಇಲಾಖೆ ಎಚ್ಚೆತ್ತುಕೊಂಡು ಸರಿಪಡಿಸುವ ಗೋಜಿಗೆ ಹೋಗದೆ ವಿದ್ಯುತ್ ಗೆ ಆಹಾಕಾರವಾಗಿದೆ, ಗ್ರಾಮೀಣ ಜನರು ಹಾಳಾದರೂ ಪರವಾಗಿಲ್ಲ, ಗ್ರಾಮಗಳಲ್ಲಿ ಕುಡಿಯುವ ನೀರಿಗೂ ಆಹಾಕಾರವಾಗಿದೆ ಬೆಸ್ಕಾಂ ಇಲಾಖೆ ಪಟ್ಟಣಗಳಿಗೆ ಹಾಗೂ ಕೈಗಾರಿಕೆಗಳಿಗೆ ಮಾತ್ರ 24 ಗಂಟೆಗಳ ಕಾಲ ವಿದ್ಯುತ್ ನೀಡುತ್ತಾರೆ ಗ್ರಾಮಗಳಲ್ಲಿ ವಾಸಿಸುವ ಜನರು ಮನುಷ್ಯರಲ್ಲವೇ ಎಂದು ಪ್ರಶ್ನಿಸಿದ ಅವರು ರೈತರು ವ್ಯವಸಾಯ ಮರೆತು ಸುಮ್ಮನೆ ಕುಳಿತರೆ ಪಟ್ಟಣದಲ್ಲಿ ವಾಸ ಮಾಡುವ ಪ್ರತಿಯೊಬ್ಬರು ಮಣ್ಣು ತಿನ್ನಬೇಕಾಗುತ್ತದೆ ಎಂಬುದನ್ನು ಬೆಸ್ಕಾಂ ಇಲಾಖೆ ಮರೆತಂತೆ ಕಾಣುತ್ತಿದೆ ಈ ಎಲ್ಲ ವಿಚಾರಗಳು ತಾಲೂಕಿನ ಜನಪ್ರತಿನಿಧಿಗಳಿಗೆ ಗೊತ್ತಿದ್ದರೂ ರೈತರಿಗೆ ತಾನೇ ತೊಂದರೆ ಆಗಿರುವುದು ನಮಗೇನಲವಲ್ಲ ಎಂದು ಕಣ್ಮುಚ್ಚಿ ಕುಳಿತಿದ್ದಾರೆ ತಾಲೂಕಿನ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತುಂಬಿತುಳುಕುತ್ತಿದೆ ಅಧಿಕಾರಿಗಳನ್ನು ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದೆ ಜನಪ್ರತಿನಿಧಿಗಳಿಗೆ ಜನರು ಮತ ಹಾಕಲು ಬೇಕೆ ವಿನಹ ಜನರ ಕಷ್ಟ ಸುಖಗಳಿಗೆ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ, ಜನಪ್ರತಿನಿಧಿಗಳು ಅವರದೇ ಆದ ಲೋಕದಲ್ಲಿ ಮುಳುಗಿದ್ದಾರೆ ಎಂದು ಕಿಡಿಕಾರಿದರು ಇನ್ನಾದರೂ ಬೆಸ್ಕಾಂ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ವಿದ್ಯುತ್ ಸಂಪರ್ಕ ಕಳೆದುಕೊಂಡಿರುವ ಗ್ರಾಮಗಳಲ್ಲಿ ವಿದ್ಯುತ್ ಶಕ್ತಿಯನ್ನು ಸಮರ್ಪಕವಾಗಿ ಹರಿಸಲು ಕೂಡಲೇ ಕ್ರಮ ಕೈಗೊಳ್ಳದೆ ಇದ್ದ ಪಕ್ಷದಲ್ಲಿ ಫೆಬ್ರವರಿ 26ರಂದು ಇಲಾಖೆಯ ಕಾರ್ಯ ವೈಖರಿಯನ್ನು ಖಂಡಿಸಿ ತಾಲೂಕಿನಾದ್ಯಂತ ರೈತರು ಬಂದು ಬೆಸ್ಕಾಂ ಕಚೇರಿಯ ಮುಂಬಾಗ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಪ್ರತಿಭಟನೆ ಹಮ್ಮಿಕೊಂಡಿದ್ದ ರೈತರ ಮನವಿಯನ್ನು ಸ್ವೀಕರಿಸಲು ಬೆಸ್ಕಾಂ ಇಲಾಖೆ ಅಧಿಕಾರಿಗಳು ತಡ ಮಾಡಿದ ಹಿನ್ನೆಲೆಯಲ್ಲಿ ರೈತರು ತಾಳ್ಮೆ ಮೀರಿ ಬೆಸ್ಕಾಂ ಕಚೇರಿಯ ಬಾಗಿಲು, ಗೇಟ್, ಮುಚ್ಚಲು ಮುಂದಾದಾಗ ಪೊಲೀಸರು ತಕ್ಷಣ ಸ್ಥಳಕ್ಕೆ ಬಂದು ರೈತರನ್ನು ಸಮಾಧಾನಪಡಿಸಿ ತಡೆದರು.
ಈ ಸಂದರ್ಭದಲ್ಲಿ ರೈತ ಮುಖಂಡರುಗಳು ಹಾಗೂ ನೂರಾರು ರೈತರು, ರೈತ ಮಹಿಳೆಯರು, ಗ್ರಾಮಸ್ಥರು, ಉಪಸ್ಥಿತರಿದ್ದರು.
ವರದಿ: ರೇಣುಕ ಪ್ರಸಾದ್, ಕುಣಿಗಲ್