ಬೆಂಗಳೂರು : ಪ್ರಜಾಪ್ರಭುತ್ವ ಉಳಿಯಲು ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ಕೆಲಸ ಮಾಡಬೇಕು. ಈ ಮೂರೂ ಅಂಗಗಳು ಉತ್ತಮವಾಗಿ ಕೆಲಸ ಮಾಡುವಂತೆ ಪತ್ರಿಕಾರಂಗ ಎಚ್ಚರಿಕೆ ವಹಿಸಬೇಕು ಎಂದು ಕ್ರಿಸ್ತೊ ಜಯಂತಿ ಕಾಲೇಜಿನ ಪ್ರಾಂಶುಪಾಲ ಡಾ. ಅಗಸ್ತೀನ್ ಜಾರ್ಜ್ ಹೇಳಿದ್ದಾರೆ.
ಅವರು ತಮ್ಮ ಕಾಲೇಜನ ಸಭಾಂಗಣದಲ್ಲಿ ನಡೆದ ರೋಹಿತ್ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾಂಭದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು. ಇಂದಿನ ಪರಿಸ್ಥಿತಿಯಲ್ಲಿ ಮಾಧ್ಯಮ ಪ್ರಮುಖಪಾತ್ರವಹಿಸಬೇಕಿದೆ. ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರೆ ಪತ್ರಕರ್ತರು ನಿಷ್ಠೆ ಮತ್ತು ಪ್ರಾಮಾಣಿಕತೆಯನ್ನು ಉಳಿಸಿಕೊಳ್ಳಬೇಕು. ಯುವ ಪತ್ರಕರ್ತರಿಗೆ ಸೂಕ್ತ ಶಿಕ್ಷಣ ಮತ್ತು ತರಬೇತಿ ನೀಡಬೇಕು. ರೋಹಿತ್ ಚಿಕ್ಕವಯಸ್ಸಿನಲ್ಲೇ ಟೈಮ್ಸ್ ಆಫ್ ಇಂಡಿಯ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಕೆಲಸ ಮಾಡಿ ಹೆಸರುಗಳಿಸಿದವರು. ಅವರು ಆಕಸ್ಮಿಕವಾಗಿ ನಿಧನರಾದರು. ಅವರ ತಂದೆತಾಯಿ ಮಗನ ಹೆಸರಿನಲ್ಲಿ ಈ ಪ್ರಶಸ್ತಿ ಸ್ಥಾಪಿಸಿರುವುದು ಸ್ವಾಗತಾರ್ಹ. ಪ್ರಶಸ್ತಿ ಪಡೆದ ಪತ್ರಕರ್ತ ಜಗನ್ನಾಥ್ ಕಾಳೇನಹಳ್ಳಿ ರೋಹಿತ್ ಹೊಂದಿದ್ದ ಆದರ್ಶಗಳನ್ನು ಮುಂದುವರಿಸಬೇಕು ಎಂದರು.
ಐಎಂಎಸ್‌ಆರ್ ಸಂಸ್ಥೆಯ ಅಧ್ಯಕ್ಷ ಪ್ರೊ. ಕೆ.ವಿ. ನಾಗರಾಜ್ ಮಾತನಾಡಿ ಇಂದಿನ ಯುವ ಪತ್ರಕರ್ತರಿಗೆ ಇಂಟರ್‌ನೆಟ್ ಮತ್ತು ಕಂಪ್ಯೂಟರ್ ದೊಡ್ಡ ಅಸ್ತç ಸಿಕ್ಕಿದೆ. ಅದರೊಂದಿಗೆ ಸಾಮಾಜಿಕ ಜಾಲತಾಣಗಳತೀವ್ರಗತಿಯಲ್ಲಿ ಬೆಳೆಯುತ್ತಿದೆ. ಇದರ ಬಗ್ಗೆ ಎಚ್ಚರವಹಿಸುವುದು ಅಗತ್ಯ ಎಂದರು. ಪ್ರಶಸ್ತಿ ಸ್ಥಾಪಿಸಿರುವ ರೋಹಿತ್ ಅವರ ತಂದೆ ರಾಜಣ್ಣ ಮತ್ತು ಲಲಿತಮ್ಮ ಜಗನ್ನಾಥ್ ಕಾಳೇನಹಳ್ಳಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಸ್ವೀಕರಿಸಿದ ಜಗನ್ನಾಥ್ ರೋಹಿತ್ ಅವರ ಆದರ್ಶಗಳನ್ನು ಪಾಲಿಸಲು ಯತ್ನಿಸುವುದಾಗಿ ತಿಳಿಸಿದರು. ಎಚ್.ಆರ್. ಶ್ರೀಶ ವಂದಿಸಿದರು.