ಶಿರಾ : ಕೇಂದ್ರ ಸರಕಾರಕಾರದಲ್ಲಿರುವ ಎಸ್‌ಟಿ ಮೀಸಲಾತಿ ಹೋರಾಟದ ಕಡತವನ್ನು ಕೂಡಲೇ ಎಸ್‌ಟಿ ಪಟ್ಟಿಗೆ ಸೇರ್ಪಡೆ ಮಾಡಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಕಡತವನ್ನು ಕೈಗೆತ್ತಿಕೊಳ್ಳಬೇಕು ಎಂದು ರಾಜ್ಯ ಕಾಡುಗೊಲ್ಲ ಸಂಘದ ರಾಜ್ಯಾಧ್ಯಕ್ಷ ರಾಜಣ್ಣ ಒತ್ತಾಯಿಸಿದರು.
ಅವರು ತಾಲ್ಲೂಕಿನ ಕಳುವರಹಳ್ಳಿಯಲ್ಲಿರುವ ಜುಂಜಪ್ಪನಗುಡ್ಡೆಯಲ್ಲಿ ಕಾಡುಗೊಲ್ಲ ಸಮುದಾಯದ ವತಿಯಿಂದ ಕಾಡುಗೊಲ್ಲರನ್ನು ಎಸ್‌ಟಿ ಮೀಸಲಾತಿಗೆ ಸೇರಿಸುವ ಸಂಬಂಧ ನಡೆದ ಚಿಂತನ ಮಂಥನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ರಾಜ್ಯಾದ್ಯಂತ ಕಾಡುಗೊಲ್ಲ ಸಮುದಾಯವು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದೇವೆ. ಕಾಡುಗೊಲ್ಲರು ಕುರಿ ಮೇಯಿಸಿಕೊಂಡು ಊರುಗಳಿಂದ ಮತ್ತೊಂದು ಊರಿಗೆ ಅಲೆಮಾರಿಗಳಾಗಿ ಭೂರಹಿತರಾಗಿ ಜೀವನ ನಡೆಸುತ್ತಿದ್ದೇವೆ. ಮುಂದಿನ ಪೀಳಿಗೆಗೆ ಸಾಕ್ಷರತೆ ಪ್ರಮಾಣ ಹೆಚ್ಚಾಗಲು ನಾವು ಎಸ್.ಟಿ ಮೀಸಲಾತಿಯನ್ನು ಕೇಳುತ್ತಿದ್ದೇವೆ. ಎಸ್‌ಟಿ ಮೀಸಲಾಗೆ ಸೇರಿಸುವಂತೆ ಎಲ್ಲಾ ನಾಯಕರನ್ನು, ಎಲ್ಲಾ ರಾಜಕೀಯ ಪಕ್ಷಗಳನ್ನೂ ಸಹ ಕೇಳಿದ್ದೇವೆ. ಆದರೂ ಸಹ ಇದುವರೆಗೂ ನಮ್ಮ ಬೇಡಿಕೆ ಈಡೇರಿಲ್ಲ. ಕೇಂದ್ರ ಸರಕಾರಕ್ಕೆ ಎಸ್‌ಟಿ ಮೀಸಲಾತಿ ಕಡತವನ್ನು ಸಲ್ಲಿಸಿ 8 ವರ್ಷಗಳಾದರೂ ಕಡತವನ್ನು ಕೈಗೆತ್ತಿಕೊಂಡಿಲ್ಲ. ಆದ್ದರಿಂದ ಕಾಡುಗೊಲ್ಲರು ಇಂದು ಚಿಂತನ ಮಂಥನ ಸಭೆ ಮಾಡಿ ನಮ್ಮ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಿದ್ದೇವೆ. ಬೆಂಗಳೂರು ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತೇವೆ. ಅಹೋರಾತ್ರಿ ಧರಣಿ ನಡೆಸುತ್ತೇವೆ. ಮುಂದಿನ ದಿನಗಳಲ್ಲಿ ಮತದಾನ ಬಹಿಷ್ಕರಿಸುತ್ತೇವೆ ಎಂದರು.
ಚಿಂತನ ಮಂಥನ ಸಭೆಯಲ್ಲಿ ಕಾಡುಗೊಲ್ಲ ಸಂಘದ ತಾಲ್ಲೂಕು ಅಧ್ಯಕ್ಷ ಈಶ್ವರಪ್ಪ, ಕಾರ್ಯದರ್ಶಿ ಚಂದ್ರಣ್ಣ, ನಂದೀಶ್ ಹೊಸದುರ್ಗ, ಪಾಪಣ್ಣ, ಲಾಯರ್ ತಿಮ್ಮಣ್ಣ, ಗುಮ್ಮನಹಳ್ಳಿ ಈರಣ್ಣ, ಬಂದಕುಂಟೆ ಮಂಜು, ಖ್ಯಾತ ಗಾಯಕ ಮೋಹನ್ ಕುಮಾರ್, ಮೀಸೆ ಮಹಲಿಂಗಣ್ಣ, ನಿವೃತ್ತ ಅರಣ್ಯ ಅಧಿಕಾರಿ ಚಿಕ್ಕಪ್ಪಯ್ಯ, ಸಿದ್ದೇಶ್ ಕಾಡುಗೊಲ್ಲ, ಮಾಜಿ ಚೇರ್ಮನ್‌ಗಳಾದ ಡಿ.ಎಂ.ಕರಿಯಣ್ಣ, ಈರಣ್ಣ, ಬೇವಿನಹಳ್ಳಿ ಸುದರ್ಶನ್, ಪಟೇಲ್ ಕೃಷ್ಣೇಗೌಡ, ಕಳುವರಹಳ್ಳಿ ಜುಂಜಣ್ಣ, ಗಾಣದಹುಣಸೆ ದೊಡ್ಡಯ್ಯ, ಗಿರೀಶ್, ಕಾಡುಗೊಲ್ಲ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಗಂಗಾಧರ್, ಚಿಕ್ಕಮಂಗಳೂರು ಜಿಲ್ಲಾಧ್ಯಕ್ಷ ಈರಣ್ಣ, ದಾವಣಗೆರೆ ಜಿಲ್ಲಾಧ್ಯಕ್ಷ ಸುಂಕಪ್ಪ, ಚಿತ್ರದುರ್ಗ ಜಿಲ್ಲಾಧ್ಯಕ್ಷ ರಾಜ್‌ಕುಮಾರ್ ಹಾಗೂ ಗೌಡರು ಮತ್ತು ಪೂಜಾರಿಗಳು ಭಾಗವಹಿಸಿದ್ದರು.