ಸಚಿವ ಜೆ.ಸಿ.ಮಾಧುಸ್ವಾಮಿ ಆಧುನಿಕ ಭಸ್ಮಾಸುರ : ಒಕ್ಕಲಿಗ ಜನಾಂಗವನ್ನು ಕೆಣಕಬೇಡಿ : ತಾ.ಅಧ್ಯಕ್ಷ ಶ್ರೀಹರ್ಷ
ಚಿಕ್ಕನಾಯಕನಹಳ್ಳಿ : ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿಕೆಗೆ ತಾಲ್ಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ಶ್ರೀಹರ್ಷ ಪ್ರತಿಕ್ರಿಯಿಸಿದ್ದು ಮಾಧುಸ್ವಾಮಿಯವರೆ ದೇವೇಗೌಡರು ಗುತ್ತಿಗೆ ಆರಂಭಿಸಿದ್ದಾಗ ನೀವು ಎಲ್ಲಿದ್ದೀರಿ? ನಿಮಗೆ ಸಹಾಯ ಮಾಡಿದವರನ್ನು ಅಪೋಷಣಾ ಮಾಡಿರುವ ನೀವು ಆಧುನಿಕ ಭಸ್ಮಾಸುರ ಎಂದು ಶ್ರೀಹರ್ಷ ಕಿಡಿಕಾರಿದ್ದಾರೆ.
ಅಯ್ನೋರಿಂದ ಸಾಲ ಪಡೆದು ಗುತ್ತಿಗೆ ಆರಂಭಿಸಿದ ದೇವೇಗೌಡರ ಕುಟುಂಬ ಇಡೀ ರಾಜ್ಯವನ್ನು ದೋಚುತ್ತಿದೆ, ಕುಮಾರಸ್ವಾಮಿ ಬೆಂಗಳೂರಿನಲ್ಲಿ ಮೂರು ಮನೆಯನ್ನು ಮಾಡಿಕೊಂಡಿದ್ದರು ಎಂಬ ವಿಜಯ ಸಂಕಲ್ಪ ಯಾತ್ರೆಯಲ್ಲಿ ಹೇಳಿಕೆ ನೀಡಿದ್ದ ಜೆ.ಸಿ.ಮಾಧುಸ್ವಾಮಿ ವಿರುದ್ದ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ದೇವೇಗೌಡರ ಕುಟುಂಬದ ಬಗ್ಗೆ ಲಘುವಾಗಿ ಮಾತನಾಡಲು ನಿಮಗೆ ಯೋಗ್ಯತೆ ಇಲ್ಲ ಎಂದು ಹರಿಹಾಯ್ದರು.
ಒಕ್ಕಲಿಗರೊಂದಿಗಿನ ಚೆಲ್ಲಾಟ ಒಳ್ಳೆಯದಲ್ಲ ಕನ್ನಡಿಗರ ಏಳ್ಗೆಗೆ ಪ್ರಾಮಾಣಿಕವಾಗಿ ದುಡಿಯುವ ದೇವೇಗೌಡರ ಬಗ್ಗೆ ನಾಲಗೆ ಹರಿಯಬಿಟ್ಟರೆ ಜನತೆ ಚುನಾವಣೆಯಲ್ಲಿ ತಕ್ಕ ಶಾಸ್ತಿ ಮಾಡುತ್ತಾರೆ. ನಿಮ್ಮ ಈ ದಿಢೀರ್ ಅಧಿಕಾರಕ್ಕೆ ಒಕ್ಕಲಿಗರಾದ ಸಂತೋಷ್ ಜಯಚಂದ್ರ ಕಾರಣರೆಂದು ಮನನ ಮಾಡಿಕೊಳ್ಳಿ. ನಿಮ್ಮ ದುರಾಂಹಕರದ ಕಥೆ ರಾಜ್ಯದ ಜನತೆಗೆ ತಿಳಿದಿದ್ದು ಹಲಾಲು ಟೋಪಿ ಕೆಲಸ ಮಾಡಿ ಮೇಲೆ ಬಂದಿರುವ ನೀವು ಯಾವ ನೈತಿಕತೆಯಿಂದ ದೇವೇಗೌಡgನ್ನು ಟೀಕಿಸುತ್ತೀರ? ಲಘುವಾಗಿ ಮಾತನಾಡುವುದನ್ನು ನಿಲ್ಲಿಸಿ ನಾಲಿಗೆ ಮೇಲೆ ಹಿಡಿತ ಇರಲಿ ಎಂದು ಗುಮ್ಮಿದರು.
ಒಕ್ಕಲಿಗ ಜನಾಂಗವನ್ನು ಕೆಣಕಬೇಡಿ:-
ಒಕ್ಕಲಿಗರ ಪರಮೋಚ್ಚ ನಾಯಕ ದೇವೇಗೌಡರನ್ನು ಕೆಣಕಿದರೆ ನಾವು ಸುಮ್ಮನಿರುವುದಿಲ್ಲ. ಸಚಿವರು ಅವರ ಅಭಿವೃದ್ದಿ ಕೆಲಸಗಳ ಬಗ್ಗೆ ಮಾತನಾಡಿಕೊಳ್ಳಲಿ ಅದರ ಮಧ್ಯೆ ದೇವೇಗೌಡ, ಕುಮಾರಸ್ವಾಮಿಯರನ್ನು ತರುವುದು ಸೂಕ್ತವಲ್ಲ. ಮಾತು ಎತ್ತಿದ್ರೆ ಆಧಾರರಹಿತ ಆರೋಪಗಳನ್ನು ಮಾಡಿ ದೇವೇಗೌಡರನ್ನು ಟೀಕಿಸುತ್ತಾರೆ. ಶೇ 40 ರಷ್ಟು ಕಮಿಷನ್ ಅನ್ನು ಶಾಸನಬದ್ದಗೊಳಿಸಿದ ಮಾಧುಸ್ವಾಮಿಯವರಿಗೆ ಬಹುಪರಾಕ್ ಎಂದು ಶ್ರೀಹರ್ಷ ವ್ಯಂಗ್ಯವಾಡಿದರು.
ತಾ.ಒಕ್ಕಲಿಗರ ಗೌರವಧ್ಯಕ್ಷ ರಾಮಚಂದ್ರಯ್ಯ ಮಾತನಾಡಿ ದೇವೇಗೌಡರ ಅನುಭವದ ಮುಂದೆ ಸಮವಲ್ಲದ ನೀವು ಮಾತನಾಡಬೇಕಿದ್ದರೆ ಎಚ್ಚರಿಕೆ ಇರಲಿ. ಚಿಕ್ಕನಾಯಕನಹಳ್ಳಿ ಕ್ಷೇತ್ರವನ್ನು ಮಾಧುಸ್ವಾಮಿ ಜಹಗೀರ ಮಾಡಿಕೊಂಡಿದ್ದಾರಾ ? ಕುಮಾರಸ್ವಾಮಿ ಕ್ಷೇತ್ರಕ್ಕೆ ಬರಬಾರದು ಎನ್ನಲು ಇದು ಅವರ ಅಪ್ಪನ ಮನೆ ಆಸ್ತಿಯೇ? ನಾಳೆ ಕುಮಾರಸ್ವಾಮಿಯವರನ್ನೇ ಈ ಕ್ಷೇತ್ರಕ್ಕೆ ನಿಲ್ಲಿಸಿ ಗೆಲ್ಲಿಸಿಕೊಂಡು ಬರುತ್ತೇವೆ ತಾಕತ್ತಿದ್ದರೆ ತಡೆಯಿರಿ ಎಂದು ಸವಾಲು ಹಾಕಿದರು.
ಅಜ್ಜೀಗುಡ್ಡೆ ಕುಮಾರ್, ಹರೀಶ್, ನಿರಂಜನಮೂರ್ತಿ, ಲಿಂಗರಾಜು, ಚಂದ್ರಣ್ಣ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.