ಆರೋಗ್ಯಜಿಲ್ಲೆತುಮಕೂರು

ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ಅಧಿಕಾರಿಗಳಿಗೆ ಸೂಚನೆ : ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ

ತುಮಕೂರು : ಬೀದಿ ನಾಯಿ ಕಡಿತಕ್ಕೊಳಗಾದವರಿಗೆ ನೀಡುವ ಇಮ್ಯುನೋಗ್ಲೋಬಲಿನ್ ಚುಚ್ಚುಮದ್ದಿನ ವೆಚ್ಚವನ್ನು ಸಂಬಂಧಿಸಿದ ಸ್ಥಳೀಯ ಸಂಸ್ಥೆಗಳೇ ಭರಿಸಬೇಕೆಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಸಮಗ್ರ ರೋಗಗಳ ಕಣ್ಗಾವಲು ಸಮಿತಿ ಸಭೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಬೀದಿ ನಾಯಿ ಕಡಿತಕ್ಕೊಳಗಾದವರಿಗೆ ಉಚಿತವಾಗಿ ಇಮ್ಯುನೋಗ್ಲೋಬಲಿನ್ ಚುಚ್ಚುಮದ್ದನ್ನು ಗ್ರಾಮ ಪಂಚಾಯತಿ, ಪುರಸಭೆ, ನಗರಸಭೆ, ಪಟ್ಟಣ ಪಂಚಾಯತಿ, ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳೇ ನೀಡುವ ವ್ಯವಸ್ಥೆ ಮಾಡಬೇಕು. ಬಿಪಿಎಲ್ ಪಡಿತರ ಚೀಟಿ ಹೊಂದಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ವೈದ್ಯಕೀಯ ಪ್ರಮಾಣ ಪತ್ರ ಹಾಜರುಪಡಿಸಿದವರಿಗೆ ಮಾತ್ರ ಉಚಿತ ಚುಚ್ಚುಮದ್ದಿನ ವೆಚ್ಚವನ್ನು ಸ್ಥಳೀಯ ಸಂಸ್ಥೆಗಳು ಭರಿಸಬೇಕೆಂದು ತಿಳಿಸಿದರು.
ನಗರ ಪ್ರದೇಶಗಳಲ್ಲಿ ಮಾಂಸದ ತ್ಯಾಜ್ಯ ಎಲ್ಲೆಂದರಲ್ಲಿ ವಿಲೇವಾರಿ ಮಾಡುತ್ತಿರುವುದರಿಂದ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿದ್ದು, ಮಹಿಳೆಯರು ಮತ್ತು ಮಕ್ಕಳು ರಸ್ತೆಯಲ್ಲಿ ನಿರ್ಭಯವಾಗಿ ಓಡಾಡದಂತಾಗಿದೆ. ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳು ಬೀದಿ ನಾಯಿಗಳನ್ನು ನಿಯಂತ್ರಿಸಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ: ಪುರುಷೋತ್ತಮ್ ಸಭೆಗೆ ಮಾಹಿತಿ ನೀಡುತ್ತಾ, ಕಳೆದ 2022ರಲ್ಲಿ ಜಿಲ್ಲೆಯಲ್ಲಿ 185 ಡೆಂಗ್ಯೂ, 102 ಚಿಕುನ್‌ಗುನ್ಯಾ, 2 ಮೆದುಳು ಜ್ವರ ಹಾಗೂ 53 ಆನೆ ಕಾಲು ರೋಗ ಪ್ರಕರಣಗಳು ವರದಿಯಾಗಿದ್ದು, ಈ ಅವಧಿಯಲ್ಲಿ ಯಾವುದೇ ಮಲೇರಿಯಾ ಪ್ರಕರಣ ವರದಿಯಾಗಿರುವುದಿಲ್ಲ. ಜಿಲ್ಲೆಯಲ್ಲಿ 4852 ಶಂಕಿತ ಡೆಂಗ್ಯೂ ಪ್ರಕರಣಗಳಲ್ಲಿ 2477 ರಕ್ತದ ಮಾದರಿಯನ್ನು ಹಾಗೂ 2947 ಶಂಕಿತ ಚಿಕುನ್‌ಗುನ್ಯಾ ಪ್ರಕರಣಗಳಲ್ಲಿ 1496 ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಸರ್ವೇಲೆನ್ಸ್ ಅಧಿಕಾರಿ ಡಾ: ಮೋಹನ್ ದಾಸ್ ಮಾತನಾಡುತ್ತಾ, ಕಳೆದ ಜನವರಿ ಮಾಹೆಯಿಂದ ಡಿಸೆಂಬರ್‌ವರೆಗೆ 3997 ಕರುಳುಬೇನೆ, 51 ಕುಷ್ಠರೋಗ, 226 ದಡಾರ, 1 ಹೆಚ್1ಎನ್1 ಪ್ರಕರಣಗಳು ವರದಿಯಾಗಿವೆ. ಇದೇ ಅವಧಿಯಲ್ಲಿ 21596 ನಾಯಿ ಕಡಿತ ಪ್ರಕರಣಗಳು ವರದಿಯಾಗಿದ್ದು, ತಿಪಟೂರು ತಾಲ್ಲೂಕಿನಲ್ಲಿ ನಾಯಿ ಕಡಿತದಿಂದ ಒಂದು ಸಾವು ಸಂಭವಿಸಿದೆ ಹಾಗೂ 527 ಹಾವು ಕಡಿತ ಪ್ರಕರಣಗಳು ವರದಿಯಾಗಿದ್ದು, 15 ಮಂದಿ ಹಾವು ಕಡಿತದಿಂದ ಮರಣ ಹೊಂದಿದ್ದಾರೆಂದು ಮಾಹಿತಿ ನೀಡಿದರು.
ಕ್ಷಯರೋಗ ನಿಯಂತ್ರಣಾಧಿಕಾರಿ ಡಾ: ಸನತ್ ಮಾತನಾಡಿ, 2020ರಲ್ಲಿ ಒಟ್ಟು 60007 ಕಫ ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 2290 ಮಂದಿಯಲ್ಲಿ ಕ್ಷಯರೋಗ ಪತ್ತೆಯಾಗಿದೆ ಎಂದು ಸಭೆಗೆ ತಿಳಿಸಿದರು.

ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು ತೀವ್ರತರ ಕ್ಷಯರೋಗಿಗಳಿಗೆ ಚಿಕಿತ್ಸೆ ನೀಡಲು ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ಕನಿಷ್ಠ 2 ಹಾಸಿಗೆಗಳನ್ನು ಕಾಯ್ದಿರಿಸಬೇಕೆಂದು ಸೂಚನೆ ನೀಡಿದರು.
ಇದಕ್ಕೂ ಮುನ್ನ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು ಕಾನೂನು ಬಾಹಿರ ತಂಬಾಕು ಉತ್ಪನ್ನಗಳ ಮಾರಾಟ ಮಾಡುವವರ ಮೇಲೆ ನಿಗಾವಹಿಸಬೇಕು. ಶಾಲಾ ಆವರಣದ 100 ಯಾರ್ಡ್ ಒಳಗೆ ತಂಬಾಕು ಉತ್ಪನ್ನ, ಮಾರಾಟ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ನಗರದ ಶಿರಾಗೇಟ್ ಬಳಿ ಇರುವ ಶಾಲೆಯ ಸಮೀಪದಲ್ಲಿಯೇ ಕೋಟ್ಪಾ ಕಾಯ್ದೆಯನ್ನು ಉಲ್ಲಂಘಿಸಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ದೂರು ಕೇಳಿ ಬಂದಿದ್ದು, ಸದರಿ ಶಾಲಾ ಮುಖ್ಯೋಪಾಧ್ಯಾಯರಿಗೆ ಎಚ್ಚರಿಕೆ ನೋಟಿಸ್ ನೀಡಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ. ನಂಜಯ್ಯ ಅವರಿಗೆ ನಿರ್ದೇಶನ ನೀಡಿದರು.
ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಕಾರ್ಯಾಚರಣೆ ನಡೆಸದೇ ಇರುವ ತಿಪಟೂರು, ಪಾವಗಡ ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಕಡ್ಡಾಯವಾಗಿ ಕಾರ್ಯಾಚರಣೆ ನಡೆಸಲು ತಾಕೀತು ಮಾಡಿದರು.
ಜಿಲ್ಲೆಯಲ್ಲಿರುವ ಸರ್ಕಾರಿ ಅಧಿಕಾರಿ, ನೌಕರರಿಗಾಗಿ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಆಯೋಜಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಡಿ.ಎನ್. ಮಂಜುನಾಥ್ ಅವರಿಗೆ ಸೂಚನೆ ನೀಡಿದರು.
ತಂಬಾಕು ನಿಯಂತ್ರಣ ಕಾಯ್ದೆ ಕುರಿತು ಅರಿವು ಮೂಡಿಸಲು ಬರುವ ಫೆಬ್ರವರಿ ಮಾಹೆಯಲ್ಲಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಂದ ಏಕಕಾಲದಲ್ಲಿ ‘ಗುಲಾಬಿ ಆಂದೋಲನ’ ಕಾರ್ಯಕ್ರಮವನ್ನು ಏರ್ಪಡಿಸಬೇಕೆಂದು ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ: ಕೆ. ವಿದ್ಯಾಕುಮಾರಿ ಮಾತನಾಡುತ್ತಾ, ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ/ಧೂಮಪಾನ ಮಾಡುವವರ ಮೇಲೆ ಕ್ರಮ ಕೈಗೊಂಡು ದಂಡ ವಿಧಿಸಬೇಕು. ತಂಬಾಕು ಜಗಿದು ಉಗಿಯುವುದರಿಂದ ಪರಿಸರ ಹಾಳಾಗುತ್ತಿದೆ. ಸುತ್ತಮುತ್ತಲಿನ ಪರಿಸರದಲ್ಲಿ ನೈರ್ಮಲ್ಯತೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲು ಪ್ರತಿ ಪಂಚಾಯತಿಯಲ್ಲಿ ಸ್ವಸಹಾಯ ಸಂಘದ ಸದಸ್ಯರಿಗೆ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಶಸ್ತçಚಿಕಿತ್ಸಕಿ ಡಾ: ವೀಣಾ, ಪಾಲಿಕೆ ಆರೋಗ್ಯಾಧಿಕಾರಿ ಮದಕರಿ ನಾಯಕ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ರವೀಶ್, ವಿವಿಧ ತಾಲ್ಲೂಕು ಆರೋಗ್ಯಾಧಿಕಾರಿಗಳು ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker