ಶ್ರೀ ಓಂಕಾರೇಶ್ವರ ಸ್ವಾಮಿ ಕಲ್ಲುಗಾಲಿ ರಥೋತ್ಸವ ಇಂದು
20ನೇ ವರ್ಷದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಉದ್ಘಾಟನೆ
ಶಿರಾ : ಜ. 12 ರ ಗುರುವಾರ ರಾತ್ರಿ 11 ಗಂಟೆಗೆ ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಐತಿಹಾಸಿಕ ಪ್ರಸಿದ್ಧ ಶ್ರೀ ಓಂಕಾರೇಶ್ವರ ಸ್ವಾಮಿ ಕಲ್ಲುಗಾಲಿ ರಥೋತ್ಸವ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ ಶ್ರೀ ನಂಜಾವಧೂತ ಸ್ವಾಮೀಜಿಗಳ ನೇತೃತ್ವದಲ್ಲಿ ವಿಜೃಂಭಣೆಯಿಂದ ನೆರವೇರಲಿದೆ.
ಮಧ್ಯಾಹ್ನ 3 ಗಂಟೆಗೆ ಪಟ್ಟನಾಯಕನಹಳ್ಳಿ, ಹೊಸಹಳ್ಳಿ, ಯಾದಲಡಕು ಕಾಮಗೊಂಡನಹಳ್ಳಿ ಸಿದ್ದನಹಳ್ಳಿ ಉದ್ದರಾಮನಹಳ್ಳಿ, ನಾದೂರು, ನೇರಲಹಳ್ಳಿ ಸೇರಿದಂತೆ ನೂರಾರು ಗ್ರಾಮಗಳ ಸಾವಿರಾರು ಭಕ್ತರು ಶ್ರೀ ಓಂಕಾರೇಶ್ವರ ಸ್ವಾಮಿಗೆ ಆರತಿ ಉತ್ಸವ ನೆರವೇರಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಲಿದ್ದಾರೆ.
ಆಂಧ್ರಪ್ರದೇಶ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಶ್ರೀ ಓಂಕಾರೇಶ್ವರ ಸ್ವಾಮಿ ದರ್ಶನ ಪಡೆಯಲಿದ್ದಾರೆ.
ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಉದ್ಘಾಟನೆ: ನೂತನ ತಾಂತ್ರಿಕತೆಯ ಕೃಷಿ ಪದ್ಧತಿಯನ್ನು ರೈತರಿಗೆ ತಿಳಿಸುವ ಮೂಲಕ ಕಡಿಮೆ ನೀರಿನ ಪ್ರಮಾಣದಲ್ಲಿ ಹೆಚ್ಚು ಲಾಭದಾಯಕ ಬೆಳೆಯನ್ನು ಬೆಳೆಯುವ ಬಗ್ಗೆ ರೈತರಲ್ಲಿ ಸತತವಾಗಿ ಎರಡು ದಶಕಗಳಿಂದ ಶ್ರೀಮಠ ಕೃಷಿ ವಸ್ತು ಪ್ರದರ್ಶನ ಏರ್ಪಡಿಸುವ ಮೂಲಕ ಸಹಸ್ರರು ರೈತರಲ್ಲಿ ಬದಲಾವಣೆ ತಂದಿದ್ದು ಕೃಷಿ ವಸ್ತು ಪ್ರದರ್ಶನ ರೈತರ ಪಾಲಿಗೆ ಹೆಚ್ಚು ಮಹತ್ವದ್ದಾಗಿದೆ, ಅಲ್ಲದೆ ತೋಟಗಾರಿಕೆ ಅರಣ್ಯ ಕೃಷಿ ರೇಷ್ಮೆ ಸೇರಿದಂತೆ ವಿವಿಧ ಬೆಳೆಗಳ ಬಗ್ಗೆ ಪ್ರಾತ್ಯಕ್ಷಿಕೆ ಬೆಳೆಯ ಮೂಲಕ ಅನ್ನದಾತರಿಗೆ ಅರಿವು ಮೂಡಿಸುತ್ತಿರುವುದು ಶ್ರೀಮಠದ ರೈತಪರ ಕಾಳಜಿಯನ್ನು ಸಾಕ್ಷಿಕರಿಸುತ್ತದೆ.
ಈ ನಿಟ್ಟಿನಲ್ಲಿ ಜ 12ರ ಗುರುವಾರ ಸಂಜೆ 6 ಗಂಟೆಗೆ 20ನೇ ವರ್ಷದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ .ಶ್ರೀ ನಂಜಾವಧೂತ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ನೆರವೇರಲಿದ್ದು, ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ವಸ್ತು ಪ್ರದರ್ಶನ ಉದ್ಘಾಟಿಸಲಿದ್ದಾರೆ. ಶಾಸಕ ಡಾ. ಸಿ.ಎಂ. ರಾಜೇಶ್ ಗೌಡ ಅಧ್ಯಕ್ಷತೆ ವಹಿಸಲಿದ್ದು, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ವಸ್ತು ಪ್ರದರ್ಶನದ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ. ನಗರಸಭೆ ಅಧ್ಯಕ್ಷ ಅಂಜಿನಪ್ಪ, ಸಮಾಜ ಸೇವಕ ಕಲ್ಕೆರೆ ರವಿಕುಮಾರ್, ಮೂಡಲಗಿರಿಯಪ್ಪ, ನಾದೂರು ಗ್ರಾ.ಪಂ. ಅಧ್ಯಕ್ಷ ಮೆಹರ್ ತಾಜ್ ಬಾಬು ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ.