ಗುಬ್ಬಿ: ನನ್ನ ವಿದ್ಯಾರ್ಹತೆ ಬಗ್ಗೆ ಅಲ್ಲಗೆಳೆಯುವ ಗುಬ್ಬಿ ಶಾಸಕರು ಮೊದಲ ಬಾರಿ ಶಾಸಕರಾಗಿ ಮಾಡಿದ್ದು ನಮ್ಮ ತಂಡ ಅನ್ನೋದು ಮರೆಯಬೇಡಿ. ನಾನು ಕಟ್ಟಿದ ಕೋಟೆಯಲ್ಲಿ ಶಾಸಕರಾಗಿ ಮೆರೆಯುತ್ತಿರುವಿರಿ. ಹಿಂದುಳಿದ ವರ್ಗದ ನಾನು ಹತ್ತು ಎಕರೆ ಜಮೀನು ಖರೀದಿ ಮಾಡಿದರೆ ಸಹಿಸದ ಶಾಸಕರು ತಾಕತ್ತಿದ್ದರೆ ಕೂಡಲೇ ರಾಜೀನಾಮೆ ನೀಡಿ ನಂತರ ನಿಮ್ಮ ಬೆನ್ನು ಹಿಂದೆ ನೋಡಿಕೊಳ್ಳಿ ಎಂದು ಬಿಜೆಪಿ ಮುಖಂಡ ಜಿ.ಎನ್.ಬೆಟ್ಟಸ್ವಾಮಿ ನೇರ ಸವಾಲೆಸೆದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಶಾಸಕರು ನನ್ನ ವಿದ್ಯಾರ್ಹತೆ ಬಗ್ಗೆ ಎಲ್ಲೂ ಕುಳಿತು ಮಾತಾಡುತ್ತಾರೆ. ಆದರೆ ನಾನು ಈಗಲೂ ಕರಣೆ ಹಿಡಿಯುವ ಕಸಬು ನಂಬಿಯೇ ಬದುಕು ನಡೆಸಿದ್ದೇನೆ. ಆದರೆ ತಾವು ಯಾವ ರೀತಿ ಬದುಕಿದ್ದೀರಿ ಅನ್ನೋದು ಕ್ಷೇತ್ರದ ಜನಕ್ಕೆ ತಿಳಿದಿದೆ ಎಂದು ವ್ಯಂಗ್ಯವಾಡಿದರು.
ಇಪ್ಪತ್ತು ವರ್ಷದ ಶಾಸಕರು ಹೀಗೆ ತಮ್ಮ ಭಾವಚಿತ್ರ ಹಾಕಿಕೊಂಡು ಕುಕ್ಕರ್ ಹಂಚುವುದು ಹಾಸ್ಯಾಸ್ಪದ ವಿಚಾರ. ಸೋಲಿನ ಭೀತಿ ಕಾಡುತ್ತಿರುವುದು ತಿಳಿಯುತ್ತದೆ. ನಾನು ಹಂಚಿಲ್ಲ. ಯಾರೋ ಅಭಿಮಾನಿಗಳು ಹಂಚಿದ್ದಾರೆ ಅನ್ನುವ ಶಾಸಕರು ಕುಕ್ಕರ್ ಹಂಚಿಕೆ ನಿಮ್ಮ ಧರ್ಮ ಪತ್ನಿ ಖುದ್ದು ಹಂಚಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಕುಕ್ಕರ್, ಅಕ್ಕಿಕಾಳು, ಕುಂಕುಮ ಅರಿಶಿನ ಹಂಚುವ ಜೊತೆಗೆ ನೂರು ಗ್ರಾಂ ಚಿನ್ನದ ಬಿಸ್ಕತ್ ನೀಡಿದರೂ ನಿಮ್ಮ ಪಾಪದ ಹಣ ಖಾಲಿ ಆಗದು ಎಂದು ಕಿಡಿಕಾರಿದ ಅವರು ಜನರ ಮುಂದೆ ನಾನು ಫಕೀರ ಎನ್ನುತ್ತೀರಿ. ಮತ್ತೊಂದು ಕಡೆ ಇಪ್ಪತ್ತು ಮೂವತ್ತು ಕೋಟಿ ಚುನಾವಣೆಗೆ ಖರ್ಚು ಮಾಡುತ್ತೇನೆ. ಮಗನ ಸಿನಿಮಾಗೆ ಹಣ ನೀಡುವುದು ದೊಡ್ಡದಲ್ಲ ಎನ್ನುತ್ತೀರಿ. ಏನು ಸ್ವಾಮಿ ನಿಮ್ಮ ಮಾತು. ಜನ ಎಲ್ಲವನ್ನೂ ಸೂಕ್ಷ್ಮವಾಗಿ ನೋಡುತಿದ್ದಾರೆ ಎಂದು ಅಣಕಿಸಿದ ಅವರು ಇವರನ್ನು ಶಾಸಕರಾಗಿ ಮಾಡಿ ದೊಡ್ಡ ತಪ್ಪು ಮಾಡಿದೆವು. ಜನ ಸಂಘಟನೆಗೆ ತಾಪಂ ಅಧ್ಯಕ್ಷನಾಗಿ ಕೆಲಸ ಮಾಡಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲ್ಲಿಸಿದಕ್ಕೆ ನನ್ನ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಈ ಬಾರಿ ತಕ್ಕ ಪಾಠ ಕಲಿಸುತ್ತೇವೆ ಎಂದರು.
ಬಗರ್ ಹುಕುಂ ಸಮಿತಿ ಸಭೆಗೆ ಎರಡು ದಿನ ಮುನ್ನವೇ ಬಿಜೆಪಿ ಸದಸ್ಯರು ಸಭೆಗೆ ಬರುತ್ತಿಲ್ಲ ಎಂದು ಅಪಪ್ರಚಾರ ಮಾಡಿ. ಜನರನ್ನು ಸಭೆಯ ಬಳಿ ಸೇರಿಸಿ ಬಿಜೆಪಿ ವಿರುದ್ದ ಪ್ರತಿಭಟನೆ ಮಾಡುವ ಈ ಪೂರ್ವಯೋಜಿತ ತಂತ್ರ ತಿಳಿದಿದೆ. ಬಿಜೆಪಿ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸುವ ನಿಮ್ಮ ತಂತ್ರ ಫಲಿಸದು. ನಮ್ಮ ಸದಸ್ಯರು ಕಾನೂನಾತ್ಮಕವಾಗಿ ಪ್ರಶ್ನಿಸಿದ್ದಾರೆ. 30 ವರ್ಷದ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎನ್ನುವ ಶಾಸಕರು ತಾವು 20 ವರ್ಷದಿಂದ ಏನು ಮಾಡುತ್ತಿದ್ದೀರಿ. ಅವರಿಗೆ ಯಾಕೆ ಸಾಗುವಳಿ ಚೀಟಿ ನೀಡಿಲ್ಲ. ಕಾರಣ ಅವರಿಂದ ನಿಮಗೆ ಕಾಣಿಕೆ ಬಂದಿಲ್ಲ. ಕಾಣಿಕೆ ನೀಡಿದವರು ನಮೂನೆ 50 53 ರಲ್ಲಿ ಅರ್ಜಿ ಸೇರಿಸಿ ದಾಖಲೆ ಮಾಡಿದ್ದು ಹೇಗೆ, ಪಟ್ಟಣದ ಕೌನ್ಸಿಲರ್ ಹೆಸರಿಗೆ ಹೇಗೆ ಜಮೀನು ಮಂಜೂರು, ವಿಜಯಕುಮಾರ್, ಶಿವಣ್ಣ ಇವರ ಹೆಸರು ಹೇಗೆ ಸೇರಿತು ಅಂತ ತಿಳಿಸಬೇಕು ಎಂದು ಪ್ರಶ್ನಿಸಿದ ಅವರು ಈಗಾಗಲೇ ಹಗರಣ ಆಗಿರುವ ಹಿನ್ನಲೆ ನಮ್ಮ ಸದಸ್ಯರು ಸಭೆಯಲ್ಲಿ ನ್ಯಾಯಯುತ ಪ್ರಶ್ನೆ ಮಾಡಿದ್ದಾರೆ. ಶಾಸಕರೇ ಸಭೆ ಮುಂದೂಡಿಕೆ ಮಾಡಿ ಸದಸ್ಯರ ಮೇಲೆ ಆರೋಪ ಹೊರಿಸಿರುವ ಹಿಂದಿನ ತಂತ್ರ ಜನರಿಗೆ ತಿಳಿಯಲಿದೆ ಎಂದರು.
ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ ಉಡಾಫೆ ಉತ್ತರ ನೀಡುತ್ತಾ ಕಾಲಹರಣ ಮಾಡುವ ಗುಬ್ಬಿ ಶಾಸಕರು ಈಗ ಬಿಜೆಪಿಯ ಸಮಿತಿ ಸದಸ್ಯರ ಮೇಲೆ ಗೂಬೆ ಕೂಡಿಸುವ ಕೆಲಸ ಮಾಡುತ್ತಿದ್ದಾರೆ. ಚುನಾವಣೆ ಸಮೀಪದ ಈ ಸಭೆಯ ತರಾತುರಿ ತಿಳಿದೇ ನಾವು ಎಚ್ಚರಿಕೆ ವಹಿಸಿದ್ದೇವೆ. ಸಭೆಯ ಮುನ್ನಾ ದಿನ ಶಾಸಕರ ಧರ್ಮ ಪತ್ನಿ ತಾಲ್ಲೂಕು ಕಚೇರಿಗೆ ಬರುತ್ತಾರೆ. ಸಭೆಯ ನಂತರವೂ ಬರುತ್ತಾರೆ. ಇಲ್ಲಿ ಅವರಿಗೇನು ಕೆಲಸ. ತಮಗೆ ಬೇಕಾದ ಬೇನಾಮಿ ಕಡತಕ್ಕೆ ಸಹಿ ಹಾಕಿಸುವ ಕೆಲಸ ನಡೆದಿದೆ. ಹಣ ನೀಡದವರ ಫೈಲ್ ಮಾತ್ರ ಸಭೆಗೆ ತರುವ ಬಗ್ಗೆ ಮುಗ್ದ ರೈತರಿಗೆ ತಿಳಿದಿಲ್ಲ. ಈಗಾಗಲೇ ಟಿಟಿ ಹಣ ಕಟ್ಟಿ ಪರದಾಡುವ ಅರ್ಹ ರೈತನ ಕಡತ ಅಲ್ಲೇ ಇದೆ. ಕಾಣಿಕೆ ನೀಡಿದವರಿಗೆ ಸಾಗುವಳಿ ಚೀಟಿ ನೀಡುವ ಪ್ರಕ್ರಿಯೆಗೆ ಬ್ರೇಕ್ ಹಾಕುವ ಕಾರ್ಯ ನಮ್ಮ ಸದಸ್ಯರು ಮಾಡಿದ್ದಾರೆ ಅಷ್ಟೇ. ಅರ್ಹರಿಗೆ ಸ್ಥಳ ಪರಿಶೀಲಿಸಿ ಮಂಜೂರು ಮಾಡುವ ಪ್ರಕ್ರಿಯೆ ಸದಸ್ಯರು ಮಾಡುತ್ತಾರೆ ಎಂದು ಹೇಳಿದರು.
ಬಗರ್ ಹುಕುಂ ಮೂಲಕ ವಸೂಲಿ ಹಣದಲ್ಲೇ ಕುಕ್ಕರ್ ಹಂಚಿಕೆ ನಡೆದಿದೆ. ಹಗರಣದ ನಂತರ ಸಾಗುವಳಿ ಚೀಟಿ ನೀಡಿಲ್ಲ. ಸಾಲ ಮಾಡಿಕೊಂಡು, ಕೊಬ್ಬರಿ ದನಕರ ಮಾರಿ ಹಣವನ್ನು ಅಮ್ಮ ಬ್ಯಾಂಕ್ ಗೆ ಡೆಬಿಟ್ ಮಾಡಿರುವ ರೈತರ ಒತ್ತಡಕ್ಕೆ ಈ ತರಾತುರಿ ಸಭೆ ಕರೆಯುವ ನಾಟಕ ಆಡಿದ್ದಾರೆ. ಇಲ್ಲೂ ಸಹ ಕೇವಲ 20 ಕಡತ ಮಾತ್ರ ಸಭೆಯಲ್ಲಿ ಇದ್ದದ್ದು ಅನುಮಾನಕ್ಕೆ ಕಾರಣ. ಟಿ ಟಿ ಕಟ್ಟಿದ ಎಲ್ಲರ ಫೈಲ್ ಅಲ್ಲಿರಬೇಕಿತ್ತು ಎಂದು ಪ್ರಶ್ನಿಸಿದ ಅವರು ಸ್ಥಳ ಪರಿಶೀಲನೆಗೆ ಸಿದ್ದವಿಲ್ಲದ ಶಾಸಕರು ಈ ನಾಟಕ ಆಡಿದ್ದಾರೆ. ಇವರ ಭಂಡತನ ತಿಳಿದೇ ಜೆಡಿಎಸ್ ಈಗಾಗಲೇ ಹೊರ ಹಾಕಿದೆ. ಮತದಾರರು ಮೂಢರಲ್ಲ. ಬದಲಾವಣೆ ಮಾಡಿಯೇ ಮಾಡುತ್ತಾರೆ ಎಂದರು.
ಹಿರಿಯ ಮತ್ಸದ್ದಿ ಸಂಸದರ ಬಗ್ಗೆ ಹಗುರ ಮಾತು ಆಡಿದ್ದು ಸರಿಯಲ್ಲ. ಅರವತ್ತು ಎಕರೆ ಖರೀದಿ ಬಗ್ಗೆ ತಿಳಿದು ಹೇಳಿಕೆ ನೀಡಿ. ಅದು ಅವರ ರಕ್ತ ಸಂಬಂಧಿಯೊಬ್ಬರು ಜಮೀನು ಖರೀದಿಸಿದ್ದಾರೆ. ಎಲ್ಲವೂ ಆದಾಯ ತೆರಿಗೆ ಮೂಲಕವೇ ಕಾನೂನು ಪ್ರಕಾರ ಇದೆ. ತಲತಲಾಂತರದಿಂದ ಸಂಸದರು ಕೃಷಿಕ ಕುಟುಂಬ. ಅವರಿಗೂ ನಿಮ್ಮ ಹಾಗೆಯೇ ಕೋಟಿ ರೂಗಳ ವರಮಾನ ಕೃಷಿಯಲ್ಲಿದೆ. ಟೀಕೆ ಮಾಡುವ ಮುನ್ನ ಮಾಹಿತಿ ಪಡೆಯರಿ. ಈ ಸಲ್ಲದ ಮಾತು ಬಿಟ್ಟು ನೇರ ಚುನಾವಣೆ ಮಾಡೋಣ ಎಂದು ಜಿಪಂ ಮಾಜಿ ಸದಸ್ಯ ಪಿ.ಬಿ.ಚಂದ್ರಶೇಖರ ಬಾಬು ಆಹ್ವಾನಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಎಸ್.ಪಂಚಾಕ್ಷರಿ, ಬಗರ್ ಹುಕಂ ಸಮಿತಿಯ ಸದಸ್ಯರಾದ ಬಿ.ಎಸ್.ಚಂದ್ರಮೌಳಿ, ಸವಿತಾ, ಮಂಜುಳಾ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಯತೀಶ್, ಬಿ.ಲೋಕೇಶ್ ಇತರರು ಇದ್ದರು.