ಭಾರತ ಸಂವಿಧಾನ ವಿಶ್ವದಲ್ಲೇ ದೊಡ್ಡ ಸಂವಿಧಾನ : ನ್ಯಾ. ಗೀತಾಂಜಲಿ
ಶಿರಾ : ಭಾರತ ದೇಶದ ಸಂವಿಧಾನ ವಿಶ್ವದಲ್ಲೇ ದೊಡ್ಡ ಸಂವಿಧಾನ ಎಂಬ ಹಿರಿಮೆ ಹೊಂದಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಗೀತಾಂಜಲಿ ಜಿ ಹೇಳಿದರು.
ನಗರದ ನ್ಯಾಯಾಲಯದ ಅವರಣದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ತುಮಕೂರು, ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಭಾರತದ ಸಂವಿಧಾನ ದಿನಾಚರಣೆ ಕುರಿತಾದ ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸಂವಿಧಾನದ ಮಹತ್ವದ ಬಗ್ಗೆ ಎಲ್ಲರಿಗೂ ಅರಿವು ಮೂಡಿಸುವುದರ ಜೊತೆಗೆ ಸಂವಿಧಾನ ಶಿಲ್ಪಿಯಾದ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಿ ಜತೆಗೆ ಅವರ ಸಾಧನೆಯ ಬಗ್ಗೆ ತಿಳಿಸಿ ಕೊಡುವುದು ಈ ದಿನದ ವಿಶೇಷತೆಯಾಗಿದೆ ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಸಂದೀಶ್ ಟಿ.ಎಲ್ ಮಾತನಾಡಿ ದೇಶಕ್ಕೆ ಸಂವಿಧಾನವೇ ದೊಡ್ಡ ಶಕ್ತಿಯಾಗಿದ್ದು ನಮ್ಮೆಲ್ಲರನ್ನು ರಕ್ಷಿಸುವ ಬಹುದೊಡ್ಡ ಕಾನೂನಾಗಿದೆ, ಸರ್ವರಿಗೂ ಸಮಾನತೆಯನ್ನು ನೀಡಿದ್ದು. ಮೂಲಭೂತ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನು ನೀಡಿದೆ ಎಂದರು.
ಅಧಿಕ ಸಿವಿಲ್ ನ್ಯಾಯಾಧೀಶೆ ಲಕ್ಷ್ಮೀ ಎಂ.ವಿ ನಮ್ಮ ಸಂವಿಧಾನ ದೇಶದ ಜನರನ್ನು ಸಶಕ್ತಗೊಳಿಸಿದೆ. ನಾಗರಿಕರಲ್ಲಿ ಸಂವಿಧಾನದ ಮೌಲ್ಯಗಳನ್ನು ಉತ್ತೇಜಿಸಲು ಈ ದಿನವನ್ನು ಆಚರಿಸಲಾಗುತ್ತದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಧರಣೇಶ್ ಗೌಡ, ಖಚಾಂಚಿ ಎಚ್.ಗುರುಮೂರ್ತಿ ಗೌಡ, ಕಾರ್ಯದರ್ಶಿ ಕಂಬದೂರಪ್ಪ, ಹಿರಿಯ ಶಿರಸ್ತೇದಾರರಾದ ರೇಣಕಾ ದೇವಿ ಕೆ.ಆರ್, ಸತೀಶ್, ವಕೀಲ ರಂಗನಾಥ್ ಇದ್ದರು.