ಪರಿಶಿಷ್ಟಜಾತಿ ಸಮುದಾಯದ ಬಗ್ಗೆ ಅವಹೇಳನ : ಶಿಕ್ಷಕ ಕೆ.ಸಿ.ಜೀವನ್ ಪ್ರಕಾಶ್ ಅಮಾನತ್ತು

ಶಿರಾ : ದೂರವಾಣಿ ಸಂಭಾಷಣೆಯಲ್ಲಿ ಮಾತನಾಡುವಾಗ ಪರಿಶಿಷ್ಟ ಜನಾಂಗದ ಬಗ್ಗೆ ಹೀನಾಯ ಪದಗಳನ್ನು ಬಳಸಿ ಸಮುದಾಯವನ್ನು ಅವಮಾನಿಸಿ ಜಾತಿ ನಿಂದನೆ ಮಾಡಿರುವ ಆರೋಪದಡಿ ಪದ್ಮಾಪುರ ಕಿರಿಯ ಪ್ರಾಥಮಿಕ ಪಾಠಶಾಲೆಯ ಸಹ ಶಿಕ್ಷಕ ಕೆ.ಸಿ.ಜೀವನ್ ಪ್ರಕಾಶ್ ಅವರನ್ನು ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರು ಹಾಗೂ ಶಿಸ್ತುಪ್ರಾಧಿಕಾರಿಗಳಾದ ಕೆ.ಜಿ.ರಂಗಯ್ಯ ಅವರು ಶನಿವಾರ ಅಮಾನುತ್ತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಶಿಕ್ಷಕ ಕೆ.ಸಿ.ಜೀವನ್ ಪ್ರಕಾಶ್ ಅವರು ಪರಿಶಿಷ್ಟ ಜಾತಿ ಸಮುದಾಯದ ಬಗ್ಗೆ ಉದ್ದೇಶಿಸಿ ಜಾತಿ ನಿಂದನೆ ಮಾಡಿರುವುದಲ್ಲದೇ ಆ ಸಮುದಾಯದ ಹೆಣ್ಣು ಮಕ್ಕಳ ಬಗ್ಗೆ ಬೇರೆ ಶಿಕ್ಷಕರ ಹತ್ತಿರ ಅವಹೇಳನಕಾರಿ ಪದಗಳನ್ನು ಬಳಕೆ ಮಾಡಿ ಮಾತನಾಡಿ. ಈ ಸಂಭಾಷಣೆಯನ್ನು ಸಾರ್ವಜನಿಕವಾಗಿ ಮೊಬೈಲ್ ವಾಟ್ಸ್ಆಪ್ ಮೂಲಕ ಹರಿಬಿಟ್ಟಿದ್ದು, ಸಮುದಾಯವನ್ನೇ ಅವಹೇಳನಕಾರಿಯಾಗಿ ಮಾನಹಾನಿ ಮಾಡಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಮಧುಗಿರಿ ಇವರ ದೂರು ಅರ್ಜಿ ಹಾಗೂ ಹೆಚ್.ಆರ್.ನಾಗಭೂಷಣ್ ಅವರು ಶಿರಾ ಟೌನ್ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಆರೋಪದ ಮೇಲೆ ಪ್ರಥಮ ವರ್ತಮಾನ ವರದಿ ಅಡಿ ಪ್ರಕರಣ ದಾಖಲು ಮಾಡಿದ್ದಾರೆ. ಶಿಕ್ಷಕ ಕೆ.ಸಿ.ಜೀವನ್ ಪ್ರಕಾಶ್ ಮೇಲಿನ ಕರ್ತವ್ಯಲೋಪ, ಬೇಜವಾಬ್ದಾರಿತನ ಹಾಗೂ ಸರಕಾರಿ ನೌಕರರಿಗೆ ತರವಲ್ಲದ ರೀತಿಯಲ್ಲಿನ ವರ್ತನೆಯಿಂದ ಆರೋಪಕ್ಕೆ ಗುರಿಯಾಗಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮ (ನಡತೆ) ನಿಯಮ 2021ರ ನಿಯಮ 3 (1) (2) (3) ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ವಿಚಾರಣೆಯನ್ನು ಕಾಯ್ದಿರಿಸಿ ಸೇವೆಯಿಂದ ಅಮಾನತ್ತುಗೊಳಿಸಿದ್ದಾರೆ.