ತಿಪಟೂರು : ದಾನಿಗಳು, ಪೋಷಕರ ಸಹಕಾರದಿಂದ ಗ್ರಾಮೀಣ ಭಾಗದ ಶಾಲೆಯೊಂದು ಸಾವಿರಾರು ಮಂದಿಗೆ ಅಕ್ಷರ ಜ್ಞಾನವನ್ನು ನೀಡಿ ಶತಮಾನವನ್ನು ಪೂರೈಸಿದ್ದು ಇಂದಿಗೂ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ.
ತಾಲ್ಲೂಕಿನ ಕಸಬಾ ಹೋಬಳಿಯ ಮತ್ತಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯೂ ಸ್ವಾತಂತ್ರö್ಯ ಪೂರ್ವದಲ್ಲಿ 21-05-1919 ರಲ್ಲಿ ಕಿರಿಯ ಪ್ರಾಥಮಿಕ ಪಾಠಶಾಲೆಯಾಗಿ ದಾನಿಗಳು, ಪೋಷಕರ ಸಹಕಾರದಿಂದ ಪ್ರಾರಂಭವಾಗಿದ್ದು 50 ಜನ ವಿದ್ಯಾರ್ಥಿಗಳು ಪ್ರಾರಂಭದಲ್ಲಿದ್ದರು. ಶಾಲೆ ಪ್ರಾರಂಭದಲ್ಲಿ ಗ್ರಾಮದ ಹತ್ತು ಹಲವಾರು ಮಂದಿ ಸೇರಿ ತಮ್ಮ ಸ್ವಂತ ಜಮೀನನ್ನು ಶಾಲೆಯ ನಿರ್ಮಾಣ ಹಾಗೂ ಮೈದಾನಕ್ಕಾಗಿ ಕೊಡುಗೆ ನೀಡಿದರು. ಪ್ರಾರಂಭದ ಹಲವು ವರ್ಷಗಳಲ್ಲಿ ಮಣ್ಣಿನ ನೆಲ, ಮಣ್ಣು ಗೋಡೆ, ನಾಡ ಹಂಚಿನಿAದ ನಿರ್ಮಾಣವಾದ ಶಾಲೆಯೂ 280ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಹೊಂದಿದ ಶಾಲೆಯಾಯಿತು. 1973 ರಲ್ಲಿ ಶಾಲೆಯನ್ನು 1 ರಿಂದ 7ನೇ ತರಗತಿವರಗೆ ಹಿರಿಯ ಪ್ರಾಥಮಿಕ ಪಾಠಶಾಲೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಯಿತು.
ಪ್ರಾರಂಭದಿಂದಲೂ ಸ್ಥಳೀಯರ ಸಹಕಾರ ಇದ್ದ ಕಾರಣದಿಂದ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿದ್ದು ಸ್ಥಳೀಯರ ಅಚ್ಚುಮೆಚ್ಚಿನ ಶಾಲೆಯಾಗಿದೆ. ಇಲ್ಲಿಯವರೆವಿಗೂ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳಲ್ಲಿ 60ಕ್ಕೂ ಹೆಚ್ಚು ಮಂದಿ ಶಿಕ್ಷಕರಾಗಿದ್ದು, 5 ಜನ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಣೆ ಮಾಡಿರುವ ಹೆಗ್ಗಳಿಕೆ ಶಾಲೆಗೆ ಇದೆ.
ಮತ್ತಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ 6 ಕೊಠಡಿಗಳಿದ್ದು 57 ವಿದ್ಯಾರ್ಥಿಗಳು 4 ಜನ ಶಿಕ್ಷಕರುಗಳು ಇದ್ದಾರೆ. ಶತಮಾನದ ಶಾಲೆಯ ದುರಸ್ಥಿಗೆ 12 ಲಕ್ಷ ಅನುದಾನವನ್ನು ಶಿಕ್ಷಣ ಇಲಾಖೆ ನೀಡಿದ್ದು ನ.4 ರಂದು ಉದ್ಘಾಟನೆಗೊಳ್ಳಲಿದೆ. ಕನ್ನಡ ಶಾಲೆಗಳ ಉಳಿವಿಗಾಗಿ ಶ್ರಮಿಸುವ ಗ್ರಾಮೀಣ ಭಾಗದ ಜನರಿಂದ ಕನ್ನಡ ಉಳಿಯಲು ಸಾಧ್ಯವಾಗಲಿದೆ.
ಶತಮಾನದ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷನಾಗಿದ್ದರುವುದು ಹೆಮ್ಮೆಯ ಸಂಗತಿ. ಹಿಂದಿನಿಂದ ಬಂದಿರುವಂತೆ ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಮಕ್ಕಳಲ್ಲಿ ಮೌಲ್ಯಗಳನ್ನು ತುಂಬುವ ಕಾರ್ಯ ಮಾಡಲಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೌಕರ್ಯಗಳನ್ನು ಶಾಲೆಗೆ ಒದಗಿಸಲಾಗುವುದು. –ಸುದರ್ಶನ್, ಎಸ್.ಡಿ.ಎಂ.ಸಿ ಅಧ್ಯಕ್ಷ, ಮತ್ತಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.
ಶತಮಾನದ ಶಾಲೆಯಲ್ಲಿ ಕಲಿತಿರುವುದು ಸಂತೋಷ ತಂದಿದ್ದು, ಕನ್ನಡ ಶಾಲೆಗಳ ಉಳಿವಿಗೆ ನಾವೆಲ್ಲರೂ ಶ್ರಮಿಸುತ್ತೇವೆ. ಇನ್ನೂ ಹೆಚ್ಚಿನ ಸೌಕರ್ಯ ಸರ್ಕಾರದಿಂದ ಶಾಲೆಗೆ ದೊರೆಯುವಂತಾಗಲಿ ಎಂದರು. –ಬಸವರಾಜು, ಹಳೆಯ ವಿದ್ಯಾರ್ಥಿ, ಮತ್ತೀಹಳ್ಳಿ.