ದೇವರಾಯಪಟ್ಟಣದ ರಸ್ತೆ ದುರಸ್ತಿ ಶೀಘ್ರ : ಮೇಯರ್ ಪ್ರಭಾವತಿ ಸುಧೀಶ್ವರ್
ತುಮಕೂರು : ನಗರದ ದೇವರಾಯಪಟ್ಟಣಕ್ಕೆ ಹೋಗುವ ರಸ್ತೆ ಕಳೆದ ಎರಡು ತಿಂಗಳ ಹಿಂದೆ ಬಿದ್ದ ಮಳೆಯಿಂದಾಗಿ ಹಾಳಾಗಿದ್ದು ಈ ರಸ್ತೆಯಲ್ಲಿ ಸಂಚರಿಸುವ ವಿದ್ಯಾರ್ಥಿಗಳಿಗೆ ಹಾಗೂ ನಾಗರೀಕರಿಗೆ ಅನಾನುಕೂವಾಗಿದ್ದು ಶೀಘ್ರವೇ ಸಮಸ್ಯೆ ಬಗೆಹರಿಸಲಾಗುವುದು ಎಂದು ಮೇಯರ್ ಪ್ರಭಾವತಿ ಸುಧೀಶ್ವರ್ ಹೇಳಿದರು.
ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ, ಮಳೆಯಿಂದಾಗಿ ರಸ್ತೆ ಹಾಳಾಗಿರುವ ಬಗ್ಗೆ ಸಾರ್ವನಿಕರಿಂದ ಅನೇಕ ದೂರುಗಳ ಬಂದ ಹಿನ್ನೆಲೆಯಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದರು.
ಉಪ ಮೇಯರ್ ನರಸಿಂಹಮೂರ್ತಿ ಮಾತನಾಡಿ, ದೇವರಾಯಪಟ್ಟಣ ಕೆರೆ ಕೋಡಿ ಬಿದ್ದಾಗ ನೀರು ಹರಿಯಲೆಂದು ಈ ಕಾಲುವೆಯನ್ನು ಒಡೆದು ಹಾಕಲಾಗಿತ್ತು. ಇದೀಗ ತುರ್ತಾಗಿ ಇದರ ದುರಸ್ತಿಕಾರ್ಯವಾಗಬೇಕಿದೆ. ಸೋಮವಾರ ಹಾಗೂ ಮಂಗಳವಾರದೊಳಗೆ ಪೈಪ್‌ಗಳನ್ನು ಹಾಕಿ ಇದರ ದುರಸ್ತಿ ಕಾರ್ಯ ಮಾಡಲಾಗುವುದು ಅಲ್ಲಿಯವರೆಗೂ ನಾಗರೀಕರು ಸಹಕರಿಸಬೇಕು ಎಂದು ಮನವಿ ಮಾಡಿದರು. ಸ್ಥಾಯಿ ಸಮಿತಿ ಅಧ್ಯಕ್ಷ ನಯಾಜ್ ಮಾತನಾಡಿ, ಕೆರೆ ಕೋಡಿ ಬಿದ್ದಾಗ ದೇವರಾಯಪಟ್ಟಣವೇ ಮುಳುಗಿಹೋಗುವ ಆತಂಕ ಎದುರಾಗಿತ್ತು. ಕೂಡಲೇ ಕಾಲುವೆ ಒಡೆದು ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಲಾಗಿತ್ತು. ಪೈಪ್‌ಲೈನ್ ಅಳವಡಿಸಿ ಶಾಶ್ವತ ಪರಿಹಾರ ಮಾಡಲಾಗುವುದು ಎಂದು ತಿಳಿಸಿದರು.