ನಾನು ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತ : ಚಿದಾನಂದ್ ಎಂ.ಗೌಡ
ಶಿರಾ : ನಾನು ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷಕ್ಕೆ ನಿಷ್ಠನಾಗಿದ್ದೇನೆ. ಅದರಲ್ಲಿ ಯಾವುದೇ ಸಂದೇಹ ಬೇಡ. ರಾಜ್ಯದಲ್ಲಿ ಮುಂದಿನ ಮುಖ್ಯಮಂತ್ರಿ ಕೂಡ ಬಿಜೆಪಿ ಪಕ್ಷದವರೇ ಆಗಲಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಹೇಳಿದರು.
ಅವರು ನಗರದ ಸೇವಾ ಸದನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಚಿಕ್ಕಹುಲಿಕುಂಟೆ ಗ್ರಾಮದಲ್ಲಿ ಭಾನುವಾರ ನಡೆದ ನಾಡಪ್ರಭು ಕೆಂಪೇಗೌಡ ಪುತ್ಥಳಿ ಅನಾವರಣ ಹಾಗೂ ಕುಂಚಿಟಿಗ ಒಕ್ಕಲಿಗ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡುವ ಸಂದರ್ಭದಲ್ಲಿ ಕುಂಚಿಟಿಗ ಸಮುದಾಯಕ್ಕೆ ಓಬಿಸಿ ವಂಚನೆಯಾಗಿದೆ. ಒಕ್ಕಲಿಗರ ಉಪಜಾತಿಯಾಗಿ ರಾಜ್ಯದಲ್ಲಿ ಓಬಿಸಿ ಸೌಲಭ್ಯ ಇದೆ. ಆದರೆ ಕೇಂದ್ರದ ಪಟ್ಟಿಯಲ್ಲಿ ಇಲ್ಲ. ಆದ್ದರಿಂದ ರಾಜ್ಯದಲ್ಲಿ ಮುಂದಿನ ಮುಖ್ಯಮಂತ್ರಿ ಯಾರೇ ಆದರೂ ಸಹ ಓಬಿಸಿ ಮೀಸಲಾತಿ ಕೊಡಿಸಬೇಕು ಎಂಬ ಮಾತನ್ನು ಹೇಳಿದ್ದೇನೆ. ಆದರೆ ಕೆಲವು ಮಾದ್ಯಮಗಳಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದರೆ ನನಗೆ ಸಂತೋಷ ಎಂಬ ರೀತಿಯಲ್ಲಿ ಬಿಂಬಿಸಿದ್ದಾರೆ. ಈ ನಿಟ್ಟಿನಲ್ಲಿ ನಾನು ಸ್ಪಷ್ಟನೆ ನೀಡುತ್ತಿದ್ದೇನೆ. ಕೇಂದ್ರದಲ್ಲಿ ನರೇಂದ್ರ ಮೋದಿಯವರು ಹಾಗೂ ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿಯವರು ಉತ್ತಮ ಆಡಳಿತ ನೀಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬೇರೆ ಪಕ್ಷ ಅಧಿಕಾರಕ್ಕೆ ಬರುವ ಪ್ರಶ್ನೆಯೇ ಇಲ್ಲ ಎಂದರು.
ನವೆಂಬರ್ 11 ರಂದು ಬೆಂಗಳೂರಿನ ಅಂತರಾಷ್ಟಿçÃಯ ವಿಮಾನ ನಿಲ್ದಾಣದ ಬಳಿ ನಿರ್ಮಾಣವಾಗಿರುವ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡ ಅವರ ಪ್ರತಿಮೆ ಉದ್ಘಾಟನೆಗೆ ಪ್ರಧಾನಮಂತ್ರಿ ನರೇಂದ್ರಮೋದಿಯವರು ಆಗಮಿಸಲಿದ್ದಾರೆ. ಹಾಗೂ 23 ಎಕರೆಯಲ್ಲಿ ಕೆಂಪೇಗೌಡ ಅವರ ಜೀವನ ಚರಿತ್ರೆ ಹಾಗೂ ಸಾಧನೆಗಳ ಮ್ಯೂಸಿಯಂ ಮಾಡುವ ಬಗ್ಗೆ ಸರಕಾರ ತೀರ್ಮಾನ ತೆಗೆದುಕೊಂಡಿದೆ. ಯಡಿಯೂರಪ್ಪ ಅವರು ಶಿಕಾರಿಪುರ ಕಾರ್ಯಕ್ರಮದಲ್ಲಿ ಕುಂಚಿಟಿಗ ಸಮುದಾಯಕ್ಕೆ ಓಬಿಸಿ ಕೊಡಿಸುವುದು ನಮ್ಮ ಜವಾಬ್ದಾರಿ ಎಂದು ಹೇಳಿದ್ದಾರೆ. ನಾವು ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದೇವೆ. ಯಾವುದೇ ಗೊಂದಲಕ್ಕೆ ಯಾರೂ ಕಿವಿಗೊಡಬೇಡಿ ಎಂದರು.