ತಿಪಟೂರು : ಅದ್ದೂರಿಯಾಗಿ ನೆರವೇರಿದ “ಕೋಟಿ ಕಂಠ ಗೀತ ಗಾಯನ” ಕಾರ್ಯಕ್ರಮ
5 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು, ಅಧಿಕಾರಿಗಳಿಂದ ಗೀತ ಗಾಯನ
ತಿಪಟೂರು : 67 ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ “ಕೋಟಿ ಕಂಠ ಗೀತ ಗಾಯನ” ಕಾರ್ಯಕ್ರಮವನ್ನು ಆಯೋಜಿಸಿದ್ದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸೇರಿದಂತೆ 5 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು, ಅಧಿಕಾರಿಗಳು, ಸಂಘ ಸಂಸ್ಥೆ ಪದಾಧಿಗಳು ಭಾಗವಹಿಸಿ ಯಶಸ್ವಿಗೊಳಿಸಿದರು.
ನಗರದ ಬಾಲಕರ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಶುಕ್ರವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ “ಕೋಟಿ ಕಂಠ ಗೀತ ಗಾಯನ” ಕಾರ್ಯಕ್ರಮವನ್ನು ಅದ್ದೂರಿಯಾಗಿ ನೆರವೇರಿಸಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಸಕಾಲ ಸಚಿವ ಬಿ.ಸಿ.ನಾಗೇಶ್ ಮಾತನಾಡಿ ಕನ್ನಡ ಭಾಷೆ, ನೆಲ, ಜಲದ ಬಗ್ಗೆ ಅಭಿಮಾನ, ಗೌರವ ಹೆಚ್ಚಾಗಲು ಹಾಗೂ ಕನ್ನಡ ಭಾಷೆಯ ಉಳಿವಿಗಾಗಿ ಸರ್ಕಾರದಿಂದ ಹಮ್ಮಿಕೊಂಡಿರುವ ಕಾರ್ಯಕ್ರಮ ಇದಾಗಿದೆ. ಪಠ್ಯ ಪುಸ್ತಕದಲ್ಲಿ ಆತ್ಮಾಭಿಮಾನ ಮೂಡಿಸುವಂತಹ ಅನೇಕ ವಿಚಾರಗಳು ಇರುವುದಿಲ್ಲ. ಹಲವು ಬಾರಿ ಪಠ್ಯಪುಸ್ತಕದ ಬದಲಾವಣೆಯೂ ಆಗುವುದರಿಂದ ಪಠ್ಯದ ಹೊರತಾಗಿ ಮಕ್ಕಳಲ್ಲಿ ಕನ್ನಡ ಭಾಷೆಯ ಬಗ್ಗೆ ಜಾಗೃತಿ ಮೂಡಿಸುವುದೇ ಮುಖ್ಯ ಉದ್ದೇಶವಾಗಿದೆ. ಕನ್ನಡದ ಸಾಹಿತಿಗಳು, ವಾಗ್ಮಿಗಳು ಕನ್ನಡದ ಉಳಿವಿಗಾಗಿ ಸಾಹಿತ್ಯ ಬಂಡಾರವನ್ನೇ ಕೊಡುಗೆಯಾಗಿ ನೀಡಿದ್ದು ಇಂದಿನ ಯುವಸಮೂಹ ಅವುಗಳನ್ನು ಅಭ್ಯಾಸಿಸುವಂತಾಗಬೇಕು. ಕನ್ನಡ ಭಾಷೆಯ ಬಳಕೆಯೂ ದಿನದಿಂದ ದಿನಕ್ಕೆ ಹೆಚ್ಚಾದಂತೆ ಮಾತ್ರವೇ ಉಳಿಸಲು ಸಾಧ್ಯ. ಹೊರ ರಾಜ್ಯ, ಹೊರ ದೇಶದವರಿಗೂ ಕನ್ನಡವನ್ನು ಕಲಿಸಿ ಭಾಷೆಯ ಶ್ರೇಷ್ಠತೆಯನ್ನು ಹೆಚ್ಚಿಸುವ ಕಾರ್ಯವನ್ನು ಪ್ರತಿಯೊಬ್ಬರು ಮಾಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಕಲ್ಪಶ್ರೀ, ತಹಶೀಲ್ದಾರ್ ಆರ್.ಜೆ.ಚಂದ್ರಶೇಖರ್, ನಗರಸಭೆ ಅಧ್ಯಕ್ಷ ಪಿ.ಜೆ.ರಾಮಮೋಹನ್, ಸ್ಥಾಐಇ ಸಮಿತಿ ಅಧ್ಯಕ್ಷ ಶಶಿಕಿರಣ್, ಡಿವೈಎಸ್‌ಪಿ ಸಿದ್ದಾರ್ಥ ಗೋಯಲ್, ನಗರಸಭೆ ಪೌರಾಯುಕ್ತ ಉಮಾಕಾಂತ್, ತಾ.ಪಂ. ಇ.ಓ. ಸುದರ್ಶನ್, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ.ಪ್ರಭುಸ್ವಾಮಿ, ಸಿಡಿಪಿಓ ಪಿ.ಓಂಕಾರಪ್ಪ, ಬಿಸಿಎಂ ಇಲಾಖೆಯ ಸಹಾಯಕ ನಿರ್ದೇಶಕರಾದ ಜಲಜಾಕ್ಷಮ್ಮ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ದಿನೇಶ್, ಗ್ರೇಡ್ 2 ತಹಶೀಲ್ದಾರ್ ಜಗನ್ನಾಥ್ ಸೇರಿದಂತೆ ಹಲವು ಅಧಿಕಾರಿಗಳು ಇದ್ದರು.