ಶಿರಾ : ದೇಶದಲ್ಲಿ ಪೌರಕಾರ್ಮಿಕರು, ಸೈನಿಕರು ಇಬ್ಬರೂ ಸಹ ದೇಶಕ್ಕಾಗಿ ಸೇವೆ ಮಾಡುತ್ತಿದ್ದಾರೆ. ಸೈನಿಕರು ದೇಶವನ್ನು ಕಾಯುವಂತೆ, ಪೌರಕಾರ್ಮಿಕರು ದೇಶವನ್ನು ಸ್ವಚ್ಛ ಸುಂದರವಾಗಿಟ್ಟುಕೊಳ್ಳಲು ಕಾರಣಕರ್ತರಾಗಿದ್ದಾರೆ ಎಂದು ತಹಶೀಲ್ದಾರ್ ಮಮತ ಹೇಳಿದರು.
ಅವರು ನಗರದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕೊರೋನಾ ಸೋಂಕು ಇಡೀ ವಿಶ್ವದಲ್ಲಿಯೇ ಭೀತಿ ಸೃಷ್ಟಿಸಿ, ಜನತೆ ಮನೆಯಿಂದ ಹೊರಬರಲು ಹೆದರುತ್ತಿದ್ದಂತಹ ಸಂದರ್ಭದಲ್ಲಿ ಪೌರಕಾರ್ಮಿಕರು ಸೈನಿಕರ ರೀತಿಯಲ್ಲಿ ತಮ್ಮ ಜೀವವನ್ನು ಒತ್ತೆ ಇಟ್ಟು ರಸ್ತೆಗಿಳಿದು, ಬೀದಿಗಳನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡಿದ್ದು ಎಂದಿಗೂ ಮರೆಯಲು ಸಾಧ್ಯವಿಲ್ಲ. ಪೌರಕಾರ್ಮಿಕರು ತಮ್ಮ ವೃತ್ತಿಯನ್ನು ಪ್ರೀತಿಸಿ ಗೌರವಿಸಿ ಆದರೆ ಪೌರಕಾರ್ಮಿಕ ವೃತ್ತಿಯನ್ನು ಅನಿವಾರ್ಯವಾಗಿ ಮಾಡುವ ವಾತಾವರಣ ಸೃಷ್ಟಿಸಿಕೊಳ್ಳಬೇಡಿ. ಉತ್ತಮ ಆರೋಗ್ಯ ಕಾಪಾಡಿಕೊಂಡು, ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ. ದುರಭ್ಯಾಸಗಳಿಂದ ದೂರಾಗಿ. ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸ್ವಾಭಿಮಾನದಿಂದ ಜೀವನ ಮಾಡಿ ಎಂದರು.
ನಗರಸಭೆ ಅಧ್ಯಕ್ಷ ಬಿ.ಅಂಜಿನಪ್ಪ ಅವರು ಮಾತನಾಡಿ ಪೌರ ಕಾರ್ಮಿಕರಿಗೆ ಎಲ್ಲರೂ ಗೌರವ ಕೊಡಬೇಕು. ಪೌರಕಾರ್ಮಿಕರು ಒಂದು ದಿನ ನಗರವನ್ನು ಸ್ವಚ್ಛಗೊಳಿಸದಿದ್ದರೆ ವಾತಾವರಣವೇ ಕಲುಷಿತವಾಗುತ್ತದೆ. ಆದ್ದರಿಂದ ಪೌರಕಾರ್ಮಿಕರ ವೃತ್ತಿಯನ್ನು ಗೌರವಿಸಬೇಕು ಎಂದು ಅವರು ಶಿರಾ ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ 176 ಪೌರಕಾರ್ಮಿಕರಿಗೂ ಸಹ ಶೀಘ್ರದಲ್ಲಿಯೇ ನಿವೇಶನ ನೀಡಲಾಗುವುದು ಎಂದರು.
ಹಿರಿಯ ದಲಿತ ಮುಖಂಡ ಜೆ.ಎನ್.ರಾಜಸಿಂಹ ಅವರು ಮಾತನಾಡಿ ಪೌರಕಾರ್ಮಿಕರನ್ನು ಸರಕಾರ ಖಾಯಂ ಮಾಡುವುದಾಗಿ ಹೇಳುತ್ತಿದ್ದು, ಆಶಾದಾಯಕ ಬೆಳವಣಿಗೆಯಾಗಿದೆ. ಆದರೆ ಪೌರಕಾರ್ಮಿಕರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಬಾರದು. ಪೌರಕಾರ್ಮಿಕರು ಒಗ್ಗಟ್ಟಾಗಿ ನಿಮ್ಮ ಹಕ್ಕುಗಳನ್ನು ಪಡೆಯಬೇಕು ಎಂದ ಅವರು ನಗರಸಭೆ ವತಿಯಿಂದ ಪೌರ ಕಾರ್ಮಿಕರ ಮಕ್ಕಳು ಕಾನ್ವೆಂಟ್‌ಗಳಲ್ಲಿ ವಿದ್ಯಾಭ್ಯಾಸ ಮಾಡಲು ಶೇ. 2ರಷ್ಟು ಅನುದಾನವನ್ನು ಒದಗಿಸಬೇಕು ಎಂದರು.
ಪೌರಾಯುಕ್ತ ಯೋಗಾನಂದ್ ಮಾತನಾಡಿ ಯಾವುದೇ ಕೆಲಸವಾಗಲಿ ಒಳ್ಳೆಯ ಮನಸ್ಸಿನಿಂದ ಕೆಲಸ ಮಾಡುವವರು ನಮ್ಮ ಪೌರಕಾರ್ಮಿಕರು. ಕೊವಿಡ್ ಸಂದರ್ಭದಲ್ಲಿ ಪೌರಕಾರ್ಮಿಕರು ಎಲ್ಲಾ ಪ್ರಜೆಗಳ ಆರೋಗ್ಯ ಕಾಪಾಡುವಲ್ಲಿ ಮಹತ್ತರ ಪಾತ್ರ ವಹಿಸಿದರು. ಪೌರಕಾರ್ಮಿಕರ ಶ್ರೇಯೋಭಿವೃದ್ಧಿಗೆ ಸರಕಾರ ಹಲವು ಅನುದಾನಗಳನ್ನು ನೀಡುತ್ತಿದ್ದು, ಪೌರಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿಸಲಾಗುವುದು. ಎಲ್ಲಾ ಪೌರಕಾರ್ಮಿಕರು ತಪ್ಪದೆ ಆರೋಗ್ಯ ಪರೀಕ್ಷೆ ಮಾಡಿಸಿ ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷೆ ಅಂಬುಜ ನಟರಾಜ್, ಸದಸ್ಯರಾದ ಎಸ್.ಎಲ್.ರಂಗನಾಥ್, ಆರ್.ರಾಮು, ಲಕ್ಷ್ಮೀ ಕಾಂತ್, ಉಮಾ ವಿಜಯರಾಜ್, ಪೂಜಾ ಪೆದ್ದರಾಜು, ಶಿವಶಂಕರ್, ಇರ್ಷಾದ್ ಚಾಂದ್ ಪಾಷ, ಮಾಜಿ ಸದಸ್ಯರಾದ ಆರ್.ರಾಘವೇಂದ್ರ, ಮುಖಂಡರಾದ ನಸ್ರುಲ್ಲಾ ಖಾನ್, ಪರಿಸರ ಅಭಿಯಂತರರಾದ ಪಲ್ಲವಿ, ಕಂದಾಯ ಅಧಿಕಾರಿ ಪ್ರದೀಪ್, ಆರೋಗ್ಯ ನಿರೀಕ್ಷಕರಾದ ಮಹಮದ್ ಗೌಸ್, ಜಾಫರ್, ಮಾರೇಗೌಡ ಸೇರಿದಂತೆ ಹಲವರು ಹಾಜರಿದ್ದರು.