ಧ್ವಜಾರೋಹಣಕ್ಕೆ ಪಿ.ಡಿ.ಓ. ಗೈರು : ಲಿಂಗರಾಜೇಗೌಡ ಅಮಾನತ್ತು
ತುರುವೇಕೆರೆ : ಆಗಸ್ಟ್ 15 ರಂದು 75 ನೇ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣಕ್ಕೆ ಗೈರಾಗುವ ಮೂಲಕ ಕರ್ತವ್ಯ ಲೋಪವೆಸಗಿದ್ದ ಮಾದಿಹಳ್ಳಿ ಗ್ರಾ.ಪಂ. ಪಿ.ಡಿ.ಓ. ಲಿಂಗರಾಜೇಗೌಡ ಅವರನ್ನು ಅಮಾನತ್ತುಗೊಳಿಸಿ ಜಿ.ಪಂ. ಸಿ.ಇ.ಓ. ಡಾ.ವಿದ್ಯಾಕುಮಾರಿ ಅವರು ಆದೇಶಿಸಿದ್ದಾರೆ.
ತಾಲೂಕಿನ ಮಾದಿಹಳ್ಳಿ ಗ್ರಾ.ಪಂ. ಆವರಣದಲ್ಲಿ ಅಗಸ್ಟ್ 15 ಸೋಮವಾರದಂದು 75 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣದ ವೇಳೆ ಗ್ರಾ.ಪಂ. ಪಿ.ಡಿ.ಓ. ರವರು ಹಾಜರಾಗದೇ ಕರ್ತವ್ಯ ನಿರ್ಲಕ್ಷö್ಯ ತೋರಿದ್ದರು. ಗ್ರಾ.ಪಂ. ಅಧ್ಯಕ್ಷರಾದ ಗಿರೀಶ್, ಮಾದಿಹಳ್ಳಿ ಶಾಲಾ ಶಿಕ್ಷಕರುಗಳು ಹಾಗೂ ಸದಸ್ಯರುಗಳ ಸಮ್ಮುಖದಲ್ಲಿ ಪಿ.ಡಿ.ಓ. ಗೈರಿನಲ್ಲಿ ಧ್ವಜಾರೋಹಣ ನೆರವೇರಿಸಿದ್ದರು. ಧ್ವಜಾರೋಹಣಕ್ಕೆ ಹಾಜರಾಗದ ಪಿ.ಡಿ.ಓ. ವಿರುದ್ದ ಶಿಸ್ತು ಕ್ರಮ ಕೈಗೊಳ್ಳುವಂತೆ ಗ್ರಾ.ಪಂ. ಸದಸ್ಯರುಗಳು, ಸಾರ್ವಜನಿಕರು ಅಧಿಕಾರಿಗಳಿಗೆ ದೂರು ನೀಡಿದ್ದರು. ಧ್ವಜಾರೋಹಣಕ್ಕೆ ಪಿ.ಡಿ.ಓ.ಗೈರು, ಶಿಸ್ತು ಕ್ರಮಕ್ಕೆ ಆಗ್ರಹ ಶಿರ್ಷಿಕೆಯಡಿ ಆಗಸ್ಟ್ 16 ರಂದು ವಿಕ ವರದಿ ಮಾಡಿತ್ತು. ಸಾರ್ವಜನಿಕ ದೂರು ಹಾಗೂ ಇ.ಓ. ಸತೀಶ್‌ಕುಮಾರ್ ಅವರ ವರದಿಯ ಮೇರೆಗೆ ಪಿ.ಡಿ.ಓ. ಲಿಂಗರಾಜೇಗೌಡ ಅವರನ್ನು ಅಮಾನತ್ತು ಮಾಡಿದ್ದಾರೆ.