ಅಪ್ಪರ್ ಭದ್ರ ನೀರಾವರಿ ಯೋಜನೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ : ಡಾ. ಶ್ರೀ ಹನುಮಂತನಾಥ ಸ್ವಾಮೀಜಿ
ದೇವರಕೆರೆ ಮತ್ತು ಕಾಮಗೊಂಡನಹಳ್ಳಿ ಕೆರೆಗಳಿಗೆ ಶ್ರೀಗಳಿಂದ ಬಾಗಿನ ಅರ್ಪಣೆ
ಶಿರಾ : ಬಯಲು ಸೀಮೆ ಅನ್ನದಾತರ ಮುಖದಲ್ಲಿ ಮಂದಹಾಸ ಮೂಡಿಸುವಂತಹ ಅಪ್ಪರ ಭದ್ರ ನೀರಾವರಿ ಯೋಜನೆ ಕಾಮಗಾರಿ ಶೀಘ್ರವಾಗಿ ಪೂರ್ಣಗೊಳಿಸಿ ಕೆರೆಗಳಿಗೆ ನೀರು ಹರಿಸುವಂತಹ ಕೆಲಸವನ್ನು ತ್ವರಿತ ಗತಿಯಲ್ಲಿ ಸರಕಾರ ಮಾಡಬೇಕು ಎಂದು ಎಲೆ ರಾಮಪುರ ಕುಂಚಿಟಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ ಶ್ರೀ ಹನುಮಂತನಾಥ ಸ್ವಾಮೀಜಿ ಹೇಳಿದರು .
ಅವರು ತಾಲೂಕಿನ ಕಾಮಗೊಂಡನಹಳ್ಳಿ ಗ್ರಾಮದಲ್ಲಿ ತುಂಬಿರುವ ದೇವರಕೆರೆ ಮತ್ತು
ಕಾಮಗೊಂಡನಹಳ್ಳಿ ಕೆರೆಗಳಿಗೆ ಶ್ರೀ ಮದ್ದಮ್ಮ ದೇವಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಗಂಗಾ ಪೂಜೆಯೊಂದಿಗೆ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದರು. ಶಿರಾ ತಾಲೂಕಿನಲ್ಲಿ ನೀರಿನ ಅಂತರ್ಜಲ ಮಟ್ಟ ವೃದ್ಧಿಯಾಗಿದೆ ಅದೇ ರೀತಿ ಪಾವಗಡ ಮಧುಗಿರಿ ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ಗುರಿಯೊಂದಿಗೆ ನೀರಾವರಿ ಯೋಜನೆಯನ್ನು ರೂಪಿಸಿ ತ್ವರಿತ ಗತಿಯಲ್ಲಿ ಅನುಷ್ಠಾನಕ್ಕೆ ತರಬೇಕು. ಭೂಮಿ, ಗಂಗೆ, ಪಂಚಭೂತಗಳಿಗೆ ಹಿಂದೂ ಸಂಪ್ರದಾಯ ಪ್ರಕಾರ ಸ್ಮರಣೆ ಮಾಡುವುದು ನಮ್ಮ ಕರ್ತವ್ಯ. ಆಕಾಶ, ನೀರು, ನೆರಳಿಗೆ ಯಾವುದೇ ರಾಜಕೀಯ ಬಣ್ಣ ಕಟ್ಟುವುದು ಬೇಡ ಕಳೆದ 40 ವರ್ಷಗಳ ನಂತರ ಕಾಮಗೊಂಡನಹಳ್ಳಿಯ ಎರಡು ಕೆರೆಗಳು ಭರ್ತಿಯಾಗಿರುವುದು ಈ ಭಾಗದ ಜನರಲ್ಲಿ ಹರ್ಷ ಮೂಡಿಸಿದೆ. ಶ್ರೀ ಮುದ್ದಮ್ಮ ದೇವಿ ಆಶೀರ್ವಾದದಿಂದ ಮಳೆ ಬೆಳೆ ಚೆನ್ನಾಗಿ ಆಗಿ ರೈತರು ಸುಭಿಕ್ಷೆಯಿಂದ ಇರಲಿ ಎಂದು ದೇವಿಯಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು.
ಶ್ರೀ ಮದ್ದಮ್ಮ ದೇವಿ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಡಾ. ನಾಗಣ್ಣ ಮಾತನಾಡಿ ವೈಜ್ಞಾನಿಕವಾಗಿ ಪ್ರಪಂಚ ಎಷ್ಟೇ ಬೆಳೆದಿದ್ದರೂ ಸಹ ಪಂಚಭೂತಗಳನ್ನು ನಂಬಿಯೇ ಮನುಷ್ಯ ಜೀವಿಸಬೇಕು ದೇವಿಯ ಕೃಪಾ ಆಶೀರ್ವಾದದಿಂದ ಕೆರೆಗಳು ಭರ್ತಿಯಾಗಿರುವುದು ತಾಲೂಕಿನ ಅಂತರ್ಜಲ ಮಟ್ಟ ಮತ್ತಷ್ಟು ಹೆಚ್ಚಾಗಿ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ನೀಗಿದೆ ಎಂದರು.
ಈ ಸಂದರ್ಭದಲ್ಲಿ ಪಟ್ಟದ ಪೂಜಾರ್ ದೊಡ್ಡರಾಜಪ್ಪ ತಾಲೂಕು ಕುಂಚಿಟಿಗರ ಸಂಘದ ಕಾರ್ಯದರ್ಶಿ ಗುಳಿಗೆನಹಳ್ಳಿ ನಾಗರಾಜು, ಮುಖಂಡರಾದ ನಾಗೇಶ್, ನಾಗಭೂಷಣ್ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.