ಶಾಲೆಗಳು ದೇವಾಲಯಗಳಿದ್ದಂತೆ, ಮಕ್ಕಳು ದೇವರಿದ್ದಂತೆ : ತಹಶೀಲ್ದಾರ್ ಮಮತ
ದೊಡ್ಡ ಅಗ್ರಹಾರ ಗ್ರಾಮದಲ್ಲಿ ನವೀಕರಣಗೊಂಡ ಸರ್ಕಾರಿ ಶಾಲಾ ಕೊಠಡಿ ಉದ್ಘಾಟನೆ
ಶಿರಾ : ದೇಶದ ಮುಂದಿನ ಪ್ರಜೆಗಳ ಭವಿಷ್ಯ ನಿರ್ಧಾರ ಆಗುವುದು ಶಾಲೆಗಳಲ್ಲಿ. ಶಾಲೆಗಳೇ ಊರಿನ ದೇವಾಲಯಗಳು, ಇಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳೇ ದೇವರುಗಳು, ಮಕ್ಕಳ ಭವಿಷ್ಯ ನಿರ್ಧಾರ ಆಗುವುದು ಈ ದೇವಾಲಯಗಳಲ್ಲಿ ಆದ್ದರಿಂದ ದೇವಾಲಯಗಳಂತಿರುವ ಶಾಲೆಗಳ ಅಭಿವೃದ್ಧಿಗೆ ಸಮುದಾಯದ ಸಹಕಾರ ಅಗತ್ಯ ಎಂದು ತಹಶೀಲ್ದಾರ್ ಮಮತ ಹೇಳಿದರು.
ಅವರು ತಾಲ್ಲೂಕಿನ ದೊಡ್ಡ ಅಗ್ರಹಾರ ಗ್ರಾಮದಲ್ಲಿ ಜೀನಿ ಹೆಲ್ತ್ಮಿಕ್ಸ್ ಅವರ ಸಹಾಯದಿಂದ ನವೀಕರಣಗೊಂಡಿದ್ದ ಶಾಲಾ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡಬೇಕು. ಶಾಲೆಗಳ ಅಭಿವೃದ್ಧಿಗೆ ಸಹಕಾರ ನೀಡಿದರೆ ಉತ್ತಮ ಸಮಾಜದ ನಿರ್ಮಾಣ ಸಾಧ್ಯವಾಗಲಿದೆ. ಎಲ್ಲರೂ ಸಮಾಜದಿಂದ ಸಾಕಷ್ಟು ಪಡೆತ್ತೇವೆ. ಅದರಲ್ಲಿ ನಾವು ಸಮಾಜಕ್ಕೆ ಅಲ್ಪಮಟ್ಟದಲ್ಲಿ ನೆರವಾಗುವ ಮೂಲಕ ಋಣ ತೀರಿಸೋಣ ಎಂದರು.
ಜೀನಿ ಹೆಲ್ತ್ಮಿಕ್ಸ್ನ ಮಾಲೀಕರು ಹಾಗೂ ರಾಜ್ಯ ಕೃಷಿ ಸಂಚಲನ ಸಮಿತಿಯ ಸದಸ್ಯರಾದ ದಿಲೀಪ್‌ಕುಮಾರ್ ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳು ದೊರೆತಾಗ ಉತ್ತಮ ಕಲಿಕೆಯ ವಾತಾವರಣ ಸೃಷ್ಟಿಯಾಗುತ್ತದೆ. ಈ ನಿಟ್ಟಿನಲ್ಲಿ ನಾನು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನನ್ನಿಂದಾದ ಅಲ್ಪ ಸಹಾಯವನ್ನು ಮಾಡಿದ್ದೇನೆ. ಇದೇ ರೀತಿ ಉಳ್ಳವರು ತಮ್ಮ ತಮ್ಮ ಗ್ರಾಮಗಳಲ್ಲಿನ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಹಕಾರ ನೀಡಿ ಎಂದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ಶಂಕರಯ್ಯ, ಸಿಆರ್‌ಪಿ ಕೆ.ಎಸ್.ಚಿದಾನಂದ್, ಮುಖಂಡರಾದ ಮದಲೂರು ಮೂರ್ತಿ ಮಾಸ್ಟರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಫಯಾಜ್ ಭಾಷ, ಇಸಿಓ ಅಣ್ಣಯ್ಯ, ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಾಜಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೌರಮ್ಮ, ಉಪಾಧ್ಯಕ್ಷೆ ಕರಿಯಮ್ಮ ಸೇರಿದಂತೆ ಹಲವರು ಹಾಜರಿದ್ದರು.