ಬೆಸ್ಕಾಂ ಇಲಾಖೆ ನಿರ್ಲಕ್ಷಕ್ಕೆ ಓರ್ವ ಬಲಿ
ಮಧುಗಿರಿ : ವಿದ್ಯುತ್ ತಂತಿ ಮೇಲೆ ಮರದ ರೆಂಬೆ ಬಿದ್ದು ಓರ್ವ ಮೃತಪಟ್ಟ ಘಟನೆ ಶನಿವಾರ ನಡೆದಿದೆ.
ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಗುಂಡಗಲ್ಲು ಗ್ರಾಮದ ಸರಕಾರಿ ಶಾಲೆಯ ಮುಂಭಾದಲ್ಲಿ ವಿದ್ಯುತ್ ತಂತಿ ಮೇಲೆ ಮರದ ರೆಂಬ ಬಿದ್ದ ಪರಿಣಾಮ ಮನೆಯ ಮುಂಭಾಗದಲ್ಲಿದ್ದ ಬಿದರಪ್ಪ (38) ವಿದ್ಯುತ್ ಸ್ಪರ್ಶಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಕಳೆದ 2 ತಿಂಗಳ ಹಿಂದೆಯು ಇದೇ ರೀತಿ ಘಟನೆ ನಡೆದಿತ್ತು. ಅದೃಷ್ಠವಶಾತ್ ಯಾವುದೆ ಅನಾಹುತ ಸಂಭವಿಸಿರಲಿಲ್ಲ ಹಲವಾರು ಬಾರಿ ಬೆಸ್ಕಾಂ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ನಿರ್ಲಕ್ಷದಿಂದ ಈ ಅನಾಹುತ ಸಂಭವಿಸಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ವಿದ್ಯುತ್ ಕಂಬ ಬದಲಿಸುವಂತೆ ಸುಮಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಕ್ಯಾರೆ ಎನ್ನದ ಅಧಿಕಾರಿಗಳು ಇದೀಗ ಬಂದು ಉಡಾಫೆ ಮಾತುಗಳನ್ನಾಡುತ್ತಿದ್ದು ಇದಕ್ಕೆ ನೇರ ಹೊಣೆ ಬೆಸ್ಕಾಂ ಅಧಿಕಾರಿಗಳೇ ಆಗಿದ್ದು, ಸ್ಥಳಕ್ಕೆ ಶಾಸಕರು, ಸಂಸದರು ಬರುವರೆಗೂ ಮೃತ ದೇಹವನ್ನು ಇಲ್ಲಿಂದ ಎತ್ತುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದರು.
ಆದರೆ ಈ ಅನಾಹುತ ಸಂಭವಿಸುವ ಮುನ್ಸೂಚನೆ ಇದ್ದರು ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಈ ದುರ್ಘಟನೆ ಅಧಿಕಾರಿಗಳ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಪಿಎಸೈ ನಾಗರಾಜು, ಎಎಸೈ ಜಗದೀಶ್ ಹಾಗು ಬೆಸ್ಕಾಂ ಸಿಬ್ಬಂದಿ ಧಾವಿಸಿ ಮೃತದೇಹವನ್ನು ಮಧುಗಿರಿ ಸಾರ್ವಜನಿಕರ ಆಸ್ಪತ್ರೆಯ ಶವಗಾರಕ್ಕೆ ರವಾನಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಮೃತರ ಕುಟುಂಬದವರನ್ನು ಭೇಟಿಯಾಗಿ ಪರಿಹಾರ ನೀಡದ್ದಿದ್ದರೆ ಗ್ರಾಮಸ್ಥರೊಂದಿಗೆ ಮಧುಗಿರಿ- ಹಿಂದೂಪುರ ರಸ್ತೆ ತಡೆ ಮಾಡವುದಾಗಿ ಗ್ರಾಮದ ಪ್ರಮುಖರು ಎಚ್ಚರಿಕೆ ನೀಡಿದ್ದಾರೆ.
ಗ್ರಾಪಂ ಸದಸ್ಯೆ ಲಕ್ಷ್ಮಮ್ಮ ಮಾತನಾಡಿ, ಬೆಸ್ಕಾಂ ಇಲಾಖೆಯ ನಿರ್ಲಕ್ಷದಿಂದ ಈ ಅನಾಹುತಕ್ಕೆ ಕಾರಣವಾಗಿದೆ ಖುದ್ದು ನಾನೇ ಆನೇಕಬಾರಿ ಬೆಸ್ಕಾಂ ಗಮನಕ್ಕೆ ತಂದಿದ್ದೇನೆ ಆದರೂ ಇಲಾಖಯ ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಸರಿಪಡಿಸದೆ ಬೇಜವ್ಧಾರಿ ತನದ ವರ್ತನೆಯಿಂದ ಅಮಾಯಕ ಜೀವ ಬಲಿಯಾಗಿದೆ ಯಾರು ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.