ಮಳೆ ಆರ್ಭಟ : ಜಿಲ್ಲೆಯಾದ್ಯಂತ ತಗ್ಗುಪ್ರದೇಶಗಳು ಜಲಾವೃತ ಜನಜೀವನ ಅಸ್ತವ್ಯಸ್ತ
ತುಮಕೂರು : ಕಲ್ಪತರುನಾಡಿನಲ್ಲಿ ಅಬ್ಬರಿಸಿ ಬೊಬ್ಬೊರೆಯುತ್ತಿರುವ ವರುಣನ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಈ ರಣ ಮಳೆಗೆ ನಗರ ಸೇರಿದಂತೆ ಜಿಲ್ಲೆಯಾದ್ಯಂತ ತಗ್ಗುಪ್ರದೇಶಗಳು ಹಾಗೂ ರಸ್ತೆಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ.
ಕಳೆದ ನಾಲ್ಕೆöÊದು ದಿನಗಳಿಂದ ರಾತ್ರಿ ವೇಳೆ ವರುಣ ಅಬ್ಬರಿಸುತ್ತಿದ್ದು, ಈಗಾಗಲೇ ಬಹುತೇಕ ಕೆರೆಗಳು ಭರ್ತಿಯಾಗಿವೆ. ಕೆರೆಗಳು ಭರ್ತಿ ಕೋಡಿ ನೀರು ಹೊರ ಹರಿಯುತ್ತಿದೆ. ಪ್ರತಿದಿನ ರಣ ಮಳೆಯಾಗುತ್ತಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲೂ ಕೃಷಿ ಜಮೀನುಗಳು ಜಲಾವೃತಗೊಂಡು ಕೃಷಿ ಚಟುವಟಿಕೆಗಳಿಗೂ ಅಡ್ಡಿಯುಂಟಾಗಿದೆ.
ನಗರದಲ್ಲಿ ಅಬ್ಬರಿಸಿ ಬೊಬ್ಬೊರೆಯುತ್ತಿರುವ ವರುಣನ ಆರ್ಭಟದಿಂದ ಸದಾಶಿವನಗರ, ನಜರಾಬಾದ್, ಇಸ್ರಾ ಶಾದಿಮಹಲ್ ರಸ್ತೆ. ರಾಮಕೃಷ್ಣ ಆಶ್ರಮ ರಸ್ತೆ, ಉಪ್ಪಾರಹಳ್ಳಿ, ಪೂರ್‌ಹೌಸ್ ಕಾಲೋನಿ, ಮೆಳೇಕೋಟೆ ರಸ್ತೆ, ಸಿದ್ದಗಂಗಾ ಬಡಾವಣೆ, ಕೋತಿತೋಪು, ಬನಶಂಕರಿ 2ನೇ ಹಂತ, ಹಂದಿಜೋಗರ ಕಾಲೋನಿ, ಕುಂದೂರು, ದಿಬ್ಬೂರು ಸೇರಿದಂತೆ ನಗರದ ಒಳ ಹಾಗೂ ಹೊರ ವಲಯದಲ್ಲಿ ಬಹುತೇಕ ಬಡಾವಣೆಗಳು ಜಲಾವೃತಗೊಂಡಿವೆ.
ಇನ್ನು ತಗ್ಗುಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಇಡೀ ರಾತ್ರಿ ಮನೆಯವರು ನಿದ್ದೆಯಿಲ್ಲದೆ ಮಳೆ ನೀರನ್ನು ಮನೆಯಿಂದ ಹೊರ ಹಾಕಲು ಹರಸಾಹಸ ಪಟ್ಟಿದ್ದಾರೆ. ರಾಮಕೃಷ್ಣ ಆಶ್ರಮದ ರಸ್ತೆಯಲ್ಲಿರುವ ಆದಾಯ ತೆರಿಗೆ ಇಲಾಖೆಯ ಕಾಂಪೌಂಡ್ ಗೋಡೆ ಸಹ ಮಳೆಯ ಆರ್ಭಟಕ್ಕೆ ಕುಸಿದು ಬಿದ್ದಿದೆ.
ನಗರದ ಎಸ್.ಎಸ್.ಪುರಂ ರಸ್ತೆಯಲ್ಲಿರುವ ಶೆಟ್ಟಿಹಳ್ಳಿ ಅಂಡರ್‌ಪಾಸ್ ರಾತ್ರಿ ಸುರಿದ ರಣ ಮಳೆಗೆ ಕೆರೆಯಂತಾಗಿದೆ. ಈ ಅಂಡರ್‌ಪಾಸ್ ಮುಖೇನ ಸಂಚರಿಸುವ ವಾಹನಗಳ ಸವಾರರು, ಸಾರ್ವಜನಿಕರು ಪರದಾಡುವಂತಾಗಿದೆ.
ಸಿದ್ದಗಂಗಾ ಬಡಾವಣೆಯಲ್ಲಿ ಮಧ್ಯರಾತ್ರಿ ಅಬ್ಬರಿಸಿದ ವರುಣನ ರೌದ್ರನರ್ತನದಿಂದಾಗಿ ವಿದ್ಯುತ್ ಕಂಬಗಳು ಧರೆಗುರುಳಿವೆ. ವಿದ್ಯುತ್ ತಂತಿಗಳು ರಸ್ತೆಯಲ್ಲೇ ಬಿದ್ದಿದ್ದು, ಬೆಸ್ಕಾಂನವರ ಮುನ್ನೆಚ್ಚರಿಕೆಯ ಕ್ರಮಗಳಿಂದಾಗಿ ಯಾವುದೇ ಅನಾಹುತ ಸಂಭವಿಸಿಲ್ಲ.
ನಗರದ ತಗ್ಗು ಪ್ರದೇಶಗಳಲ್ಲಿ ಕೆಲ ಖಾಸಗಿ ಆಸ್ಪತ್ರೆಗಳು, ಕಟ್ಟಡಗಳಿಗೂ ನೀರು ನುಗ್ಗಿದ್ದು, ಈ ನೀರನ್ನು ಹೊರ ಹಾಕುವ ಕಾರ್ಯದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ತೊಡಿಗಿದ್ದ ದೃಶ್ಯಗಳು ಸಹ ಕಂಡು ಬಂದವು.
ನಗರಕ್ಕೆ ಹೊಂದಿಕೊಂಡಂತಿರುವ ಗಣೇಶ ನಗರದಲ್ಲಿ ಇಂತಹ ಮಳೆಯಿಂದ ಅವಾಂತರ ಸೃಷ್ಠಿಯಾಗಿದೆ. ಧಾರಾಕಾರವಾಗಿ ಸುರಿದ ಮಳೆಯಿಂದ ಕುಂದೂರು ಬೆಟ್ಟದ ತಪ್ಪಲಿನಿಂದ ತುಮಕೂರು ಅಮಾನಿಕೆರೆಗೆ ಸಂಪರ್ಕಿಸುವ ರಾಜಕಾಲುವೆ ತುಂಬಿ ಹರಿದಿದೆ. ಜ್ಯೋತಿಪುರ ಹಾಗೂ ಗಣೇಶ್ ನಗರ ಮಧ್ಯೆ ಇರುವ ಚಂದ್ರಣ್ಣ ಎಂಬುವರ ತೋಟದ ಬಳಿ ರಾಜಕಾಲುವೆ ಒಡೆದು ಮಳೆ ನೀರು ತೋಟಗಳ ಮೂಲಕ ಹಾದು ಗಣೇಶ ನಗರದ ವಸತಿ ಪ್ರದೇಶಕ್ಕೆ ನುಗ್ಗಿದ್ದು, ಹೊಳೆಯಂತೆ ಧಾರಕಾರವಾಗಿ ಹರಿದಿದೆ.
ಮಳೆ ನೀರಿನಿಂದ ಗಣೇಶ ನಗರ ಬಹುತೇಕ ಸಂಪೂರ್ಣ ಜಲಾವೃತಗೊಂಡಿದ್ದು, ರಾಜಣ್ಣ, ಈರಣ್ಣ, ಮುತ್ತಮ್ಮ ಸಣ್ಣಮ್ಮ ಎಂಬುವರ ಮನೆಗಳು ಸೇರಿದಂತೆ ಹಲವು ಮನೆಗಳಿಗೆ ನೀರು ನುಗ್ಗಿದೆ. ಮನೆಯಲ್ಲಿದ್ದ ಗೃಹಪಯೋಗಿ ವಸ್ತುಗಳು, ಬಟ್ಟೆ ಬರೆ ನೀರಿನಿಂದ ಹಾನಿಯಾಗಿವೆ. ತೋಟಗಳಲ್ಲಿ ರೈತರು ಬೆಳೆದಿದ್ದ ತರಕಾರಿ ಸೊಪುö್ಪ ಬೆಳೆಗಳು ನೀರಿನಿಂದ ಸಂಪೂರ್ಣ ಆವೃತವಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಕುಂದೂರು ಬೆಟ್ಟದ ತಪ್ಪಲಿನಿಂದ ಕುಂದೂರು ಗೇಟ್, ಕುಂದೂರು ತೋಟ, ಗಣೇಶ್ ನಗರ ಮೂಲಕ ಹಾದು ತುಮಕೂರು ಅಮಾನಿಕೆರೆಗೆ ಸಂಪರ್ಕಿಸುವ ಬೃಹತ್ ರಾಜಕಾಲುವೆ ಹಲವೆಡೆ ಒತ್ತುವರಿಯಾಗಿ ಕಿರಿದಾಗಿದೆ. ಹೆಚ್ಚಿನ ಪ್ರಮಾಣದ ನೀರು ಹರಿದು ಬಂದ ಸಂದರ್ಭದಲ್ಲಿ ರಾಜಕಾಲುವೆಯಲ್ಲಿ ಸರಾಗವಾಗಿ ಹರಿಯಲು ಸಾದ್ಯವಾಗುವುದಿಲ್ಲ. ಜತೆಗೆ ಈ ರಾಜಕಾಲುವೆಯಲ್ಲಿ ಮನೆ ಬಳಕೆಯ ಪ್ಲಾಸ್ಟಿಕ್, ತೋಟಗಳ ಕಸಕಡ್ಡಿ ಸೇರಿದಂತೆ ಇನ್ನಿತರೆ ಮಣ್ಣಿನಲ್ಲಿ ಕರಗದ ತ್ಯಾಜ್ಯವನ್ನು ಹಾಕಿದ್ದಾರೆ. ಈ ತ್ಯಾಜ್ಯ ಕಾಲುವೆಯಲ್ಲಿ ಬೆಳೆದಿರುವ ಗಿಡ ಗಂಟೆಗಳಿಗೆ ಸಿಕ್ಕಿಕೊಂಡು ನೀರು ಮುಂದೆ ಸರಾಗವಾಗಿ ಹರಿಯಲು ಸಾಧ್ಯವಾಗದೇ ರಾಜಕಾಲುವೆ ಒಡೆದುಕೊಂಡು ನೀರು ನುಗ್ಗಿದೆ ಎನ್ನುತ್ತಾರೆ ಸ್ಥಳೀಯರು.
ಒತ್ತುವರಿ ಮಾಡಿಕೊಂಡಿರುವ ರಾಜಕಾಲುವೆಯನ್ನು ತೆರವುಗೊಳಿಸಿ, ಕಾಲುವೆಯಲ್ಲಿ ಬೆಳೆದಿರುವ ಗಿಡಗಂಟೆಗಳನ್ನು ಕತ್ತರಿಸಿ ತೆರವುಗೊಳಿಸದೇ ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವುದೇ ಇದಕ್ಕೆಲ್ಲಾ ಕಾರಣ. ಕೂಡಲೇ ಒಡೆದು ಹೋಗಿರುವ ರಾಜಕಾಲುವೆಯನ್ನು ದುರಸ್ಥಿ ಮಾಡಿ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು. ಜತೆಗೆ ನೀರು ನುಗ್ಗಿ ಹಾನಿಯಾಗಿರುವ ಮನೆಗಳಿಗೆ ಹಾಗೂ ತೋಟದಲ್ಲಿ ಹಾನಿಯಾಗಿರುವ ಬೆಳೆಗಳಿಗೆ ಸೂಕ್ತ ಪರಿಹಾರವನ್ನು ರೈತರುಗಳಿಗ ನೀಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ನಗರದಲ್ಲಿ ಬಹುತೇಕ ಬಡಾವಣೆಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಳ್ಳಲು ಮಹಾನಗರ ಪಾಲಿಕೆ ಹಾಗೂ ಆಡಳಿತ ವರ್ಗ ಚರಂಡಿಗಳು, ರಾಜಕಾಲುವೆಗಳನ್ನು ಸಮರ್ಪಕವಾಗಿ ಸ್ವಚ್ಚಗೊಳಿಸದಿರುವುದೇ ಮುಖ್ಯ ಕಾರಣ ಎಂಬ ಆರೋಪಗಳು ಸ್ಥಳೀಯರಿಂದ ಕೇಳಿ ಬಂದಿವೆ.
ಶಾಸಕರ ಭೇಟಿ :
ನಗರದ ಬಹುತೇಕ ಬಡಾವಣೆಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿರುವ ಸುದ್ದಿ ತಿಳಿಯುತ್ತಿದ್ದಂತೆ ಶಾಸಕ ಜ್ಯೋತಿಗಣೇಶ್, ಪಾಲಿಕೆ ಆಯುಕ್ತ ರೇಣುಕಾ, ಮೇಯರ್ ಬಿ.ಜಿ. ಕೃಷ್ಣಪ್ಪ, ಸದಸ್ಯರುಗಳು, ಉಪವಿಭಾಗಾಧಿಕಾರಿ ಅಜಯ್, ತಹಶೀಲ್ದಾರ್ ಮೋಹನ್‌ಕುಮಾರ್ ಅವರು ಜಲಾವೃತಗೊಂಡಿರುವ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಯನ್ನು ವೀಕ್ಷಿಸಿದರು.
ಕೆಲ ಬಡಾವಣೆಗಳ ತಗ್ಗುಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಠಿಯಾಗಿರುವ ಮನೆಗಳಿಗೂ ಸಹ ಭೇಟಿ ನೀಡಿದ ಶಾಸಕರು ಅವರ ಸಮಸ್ಯೆಗಳನ್ನು ಆಲಿಸಿ, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡುವ ಭರವಸೆ ನೀಡಿದರು.
ಮರಳೂರು ಕೆರೆ ಅಕ್ಕಪಕ್ಕ ಜಲಾವೃತ :
ಕಳೆದ 22 ವರ್ಷಗಳಿಂದ ತುಂಬದೇ ಇದ್ದ ಮರಳೂರು ಕೆರೆ ಮತ್ತು ಗೂಳೂರು ಕೆರೆಗಳು ಈ ಬಾರಿಯ ರಣ ಮಳೆಗೆ ತುಂಬಿ ಕೋಡಿ ಹರಿಯುತ್ತಿವೆ. ಎರಡು ದಶಕಗಳಿಂದ ಈ ಕೆರೆಗಳು ತುಂಬದ ಕಾರಣ ಕೆರೆಗಳ ಅಚ್ಚುಕಟ್ಟು ಪ್ರದೇಶಗಳಲ್ಲಿ ಮನೆಗಳು, ಶಾಲಾ-ಕಾಲೇಜುಗಳ ಕಟ್ಟಗಳು ನಿರ್ಮಾಣವಾಗಿವೆ. ಜತೆಗೆ ಅಡಿಕೆ, ತೆಂಗಿನ ತೋಟಗಳು ಇವೆ.
ನಿರಂತರವಾಗಿ ಸುರಿಯುತ್ತಿರುವ ರಣ ಮಳೆಗೆ ಪ್ರತಿ ದಿನವೂ ಹಳ್ಳಕೊಳ್ಳಗಳಲ್ಲಿ, ಕೆರೆಯ ಕೋಡಿಯಲ್ಲಿ, ತೊರೆಗಳಲ್ಲಿ ನೀರು ಧುಮ್ಮಿಕ್ಕಿ ಹರಿಯುತ್ತಿರುವುದರಿಂದ ಕೆರೆಯ ಅಕ್ಕಪಕ್ಕದ ಜಮೀನುಗಳು, ಅಚ್ಚುಕಟ್ಟು ಪ್ರದೇಶಗಳು, ತೋಟಗಳು ಜಲಾವೃತಗೊಂಡು ಮಳೆ ನೀರು ರಭಸವಾಗಿ ಹರಿಯುತ್ತಿದೆ.
ಮಲೆನಾಡು ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ನೋಡುತ್ತಿದ್ದ ಮಳೆ ನೀರಿನ ಪ್ರವಾಹವನ್ನು ಈಗ ಕಲ್ಪತರುನಾಡಿನ ಜನತೆ ಇಲ್ಲಿ ನೋಡುವಂತಾಗಿದೆ.
ಈ ಭಾಗದಲ್ಲಿರುವ ಖಾಸಗಿ ಶಾಲೆ, ಕಾಲೇಜುಗಳ ಕಾಂಪೌಂಡ್‌ಗಳು ಪ್ರತಿನಿತ್ಯ ಸುರಿಯುವ ಮಳೆಗೆ ಜಲಾವೃತಗೊಳ್ಳುತ್ತಿದ್ದು, ಶಾಲಾ ಮಕ್ಕಳಲ್ಲಿ ಒಂದು ರೀತಿಯ ಆತಂಕ ಸೃಷ್ಠಿಯಾಗುತ್ತಿದೆ.
ಎರಡು ದಶಕಗಳ ಬಳಿಕ ಕೆರೆಗಳು ತುಂಬಿ ಹರಿಯುತ್ತಿರುವುದು ಒಂದೆ ಹರ್ಷ ತಂದರೆ, ಇನ್ನೊಂದೆಡೆ ಮಳೆಯ ಆರ್ಭಟ ಇದೇ ರೀತಿ ಮುಂದುವರೆದರೆ ಏನೇನು ಅನಾಹುತ ಕಾದಿದೆಯೋ ಎಂಬ ಆತಂಕವೂ ಜನರಲ್ಲಿ ಮನೆ ಮಾಡಿದೆ.