ಹೆಬ್ಬೂರಿನಲ್ಲಿ ಕೆಂಪೇಗೌಡರ ಪುತ್ಥಳಿ ಅನಾವರಣ : ನಾಡಪ್ರಭು ಕೆಂಪೇಗೌಡರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಿ : ಮಂಗಳಾನಾಥ ಸ್ವಾಮೀಜಿ

ತುಮಕೂರು : ತಾಲ್ಲೂಕಿನ ಹೆಬ್ಬೂರಿನ ಬಸ್‌ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ ಪುತ್ಥಳಿ ಅನಾವರಣ ಹಾಗೂ 513ನೇ ಕೆಂಪೇಗೌಡರ ಜಯಂತೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಹೆಬ್ಬೂರಿನ ಬಸ್ ನಿಲ್ದಾಣದಲ್ಲಿ ನೂತನವಾಗಿ ಸ್ಥಾಪಿಸಿರುವ ಕುದುರೆ ಮೇಲೆ ಕುಳಿತ ಕೆಂಪೇಗೌಡರ ಬೃಹತ್ ಪುತ್ಥಳಿಯನ್ನು ಚಿಕ್ಕಬಳ್ಳಾಪುರ ಆದಿಚುಂಚನಗಿರಿ ಶಾಖಾ ಮಠದ ಮಂಗಳಾನಾಥ ಸ್ವಾಮೀಜಿ, ಕುಣಿಗಲ್ ಅರೇಶಂಕರ ಮಠದ ಸಿದ್ಧರಾಮ ಚೈತನ್ಯ ಸ್ವಾಮೀಜಿ ಅನಾವರಣ ಮಾಡಿದರು.
ಸಮಾರಂಭದಲ್ಲಿ ಮಾತನಾಡಿದ ಮಂಗಳಾನಾಥ ಸ್ವಾಮೀಜಿ, ನಾಡಪ್ರಭು
ಕೆಂಪೇಗೌಡರು ಈ ನಾಡು ಕಂಡ ಅತ್ಯುತ್ತಮ, ದೂರದೃಷ್ಟಿಯ ಆಡಳಿತಗಾರ, ಸರ್ವಜನರ ಹಿತ ಕಾಯುವ ನಾಡ ಪ್ರಭುವಾಗಿ ಕೆಂಪೇಗೌಡರು ಇಂದಿಗೂ ಅವಿಸ್ಮರಣೀಯರಾಗಿದ್ದಾರೆ ಎಂದರು.
ಕೆಂಪೇಗೌಡರ ಜನಪರ ಆಡಳಿತ ವೈಖರಿ, ನಾಡ ಜನರ ಹಿತ ಕಾಪಾಡುವ ಕಾಳಜಿ ನಮಗೆ ಮಾದರಿ ಆಗಬೇಕು, ಕೆಂಪೇಗೌಡರ ಸಾಮಾಜಿತ ತತ್ವಾದರ್ಶಗಳನ್ನು ನಾವು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಸಿದ್ಧರಾಮ ಚೈತನ್ಯ ಸ್ವಾಮೀಜಿ ಮಾತನಾಡಿ, ಗಂಗ ಅರಸರು ನಮ್ಮ ಸಮಾಜದ ಮೂಲ ಪುರುಷರು, ಗಂಗರ ಸಾಮ್ರಾಟ ಶ್ರೀಪುರುಷ ಉತ್ತಮ ಆಡಳಿತ ಮಾಡಿದ್ದನು ಕೆರೆಕಟ್ಟೆ ಕಟ್ಟಿಸಿದನು, ಅದೇ ಮಾದರಿಯಲ್ಲಿ ಕೆಂಪೇಗೌಡರು ಆಡಳಿತ ಮಾಡಿ ಹೆಸರಾದರು ಎಂದರು.
ಒಕ್ಕಲಿಗ ಸಮಾಜ ಇಂದು ದುಸ್ಥಿತಿಯಲ್ಲಿದೆ, ಎಷ್ಟೇ ವಿದ್ಯಾವಂತರಾದರೂ ಉದ್ಯೋಗ ಸಿಗುತ್ತಿಲ್ಲ, ಉನ್ನತ ಶಿಕ್ಷಣದಲ್ಲಿ ನಮ್ಮ ಮಕ್ಕಳಿಗೆ ಸೀಟು ಸಿಗುತ್ತಿಲ್ಲ. ಶೇಕಡ 18-20ರಷ್ಟು ಜನ ಸಂಖ್ಯೆ ಇರುವ ಒಕ್ಕಲಿಗರನ್ನು 3ಎಗೆ ಸೇರಿಸಿ 4 ಪರ್ಸೆಂಟ್ ಮೀಸಲಾತಿ ನೀಡಲಾಗಿದೆ. ಶೇಕಡ 2ರಷ್ಟಿರುವ ಜನರನ್ನು ಆರ್ಥಿಕವಾಗಿ ಹಿಂದುಳಿದಿದ್ದಾರೆ ಎಂದು ಅವರಿಗೆ ಶೇಕಡ 10ರಷ್ಟು ಮೀಸಲಾತಿ ನೀಡಲಾಗಿದೆ, ಈ ಬಗ್ಗೆ ಸಮಾಜದ ನಾಯಕರು ಧ್ವನಿ ಮಾಡಿ ಒಕ್ಕಲಿಗರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಹೇಳಿದರು.
ಶಾಸಕ ಡಿ.ಸಿ.ಗೌರಿಶಂಕರ್ ಮಾತನಾಡಿ, ಕೆಂಪೇಗೌಡರು ನಾಡಿಗೆ ನೀಡಿದ ಕೊಡುಗೆ ಅಪಾರ. ಇಂದು ಅವರ ಪುತ್ಥಳಿ ಸ್ಥಾಪಿಸಲಾಗಿದೆ, ಮುಂದೆ ಪ್ರತಿ ವರ್ಷ ಕೆಂಪೇಗೌಡರ ಜಯಂತಿ ಆಚರಿಸಿ ಮಕ್ಕಳಿಗೆ ಅವರ ಸಾಧನೆ, ಕೊಡುಗೆಯನ್ನು ಪರಿಚಯಿಸಬೇಕು ಎಂದರು.
ಸಮಾಜದ ಒಳಿತಿಗಾಗಿ ನಾವೆಲ್ಲರೂ ರಾಜಕೀಯ ಮರೆತು ಒಂದಾಗಿ ಶ್ರಮಿಸೋಣ ಎಂದ ಅವರು, ಹೆಬ್ಬೂರಿನಲ್ಲಿ ಕೆಂಪೇಗೌಡರ ಹೆಸರಿನಲ್ಲಿ ಸಮುದಾಯ ಭವನ ನಿರ್ಮಿಸಲು ತಾವು 50 ಲಕ್ಷ ರೂ. ದೇಣಿಗೆ ನೀಡುವುದಾಗಿ ಹೇಳಿದರು.
ಮಾಜಿ ಶಾಸಕ ಸುರೇಶ್ ಗೌಡರು ಮಾತನಾಡಿ, ಕೆಂಪೇಗೌಡರು ಎಲ್ಲಾ ಸಮುದಾಯಗಳನ್ನು ಸಮಾನವಾಗಿ ಕಂಡರು, ಯಾರಿಗೆ ಯಾವ ಅನುಕೂಲ ಬೇಕು ಎಲ್ಲವನ್ನು ಮಾಡಿಕೊಟ್ಟು ಭಾವೈಕ್ಯತೆಯಿಂದ ಬಾಳುವ ವಾತಾವರಣ ನಿರ್ಮಿಸಿಕೊಟ್ಟಿದ್ದರು. ಮಳೆ ನಂಬಿ ರೈತರು ಸಂಕಷ್ಟಕ್ಕೆ ಸಿಲುಕುವುದನ್ನು ಕಂಡ ಕೆಂಪೇಗೌಡರು ಕೆರೆಗಳನ್ನು ಕಟ್ಟಿಸಿ ನೆರವಾದರು ಎಂದರು.
ಹೆಬ್ಬೂರಿನಲ್ಲಿ ಸಮುದಾಯ ಭವನ ನಿರ್ಮಿಸಲು ಒಕ್ಕಲಿಗರ ಅಭಿವೃದ್ಧಿ ನಿಗಮದಿಂದ ನೆರವು ಕೊಡಿಸಲು ಪ್ರಯತ್ನಿಸುವುದಾಗಿ ನಿಗಮದ ನಿರ್ದೇಶಕರೂ ಆದ ಸುರೇಶ್ ಗೌಡ ಹೇಳಿದರು.
ಮಾಜಿ ಶಾಸಕ ಹೆಚ್.ನಿಂಗಪ್ಪ, ಒಕ್ಕಲಿಗರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಕೆ.ಬಿ.ಬೋರೇಗೌಡ, ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಹೆಚ್.ಎಂ.ಕೃಷ್ಣಮೂರ್ತಿ, ಮುಖಂಡರಾದ ರಾಜಾಪುರ ತಿಮ್ಮಪ್ಪ, ಲಕ್ಷö್ಮಣಗೌಡ,ಹೆಬ್ಬೂರು ಗೋವಿಂದಪ್ಪ, ಹನುಮಂತೇಗೌಡರು ಹಾಗೂ ಹೆಬ್ಬೂರು ಹೋಬಳಿಯ ಕೆಂಪೇಗೌಡ ಅಭಿಮಾನಿ ಬಳಗದವರು ಭಾಗವಹಿಸಿದ್ದರು.
ಇದಕ್ಕೂ ಮೊದಲು ಊರಿನ ಪ್ರಮುಖ ಬೀದಿಗಳಲ್ಲಿ ಕೆಂಪೇಗೌಡ ಪ್ರತಿಮೆಯ ಅದ್ದೂರಿ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಜಾನಪದ ಕಲಾತಂಡಗಳ ಆಕರ್ಷಕ ಪ್ರದರ್ಶನ ಮೆರವಣಿಗೆಯ ವೈಭವ ಹೆಚ್ಚಿಸಿತ್ತು. ಮಂಗಳವಾದ್ಯ, ಪೂರ್ಣಕುಂಭಗಳೊಂದಿಗೆ ಸ್ವಾಮಿಜಿಗಳನ್ನು ಕಾರ್ಯಕ್ರಮಕ್ಕೆ ಕರೆತರಲಾಯಿತು.