ಹೆಬ್ಬೂರು : ಆಕಸ್ಮಕ ಬೆಂಕಿ ಬಿದ್ದು ಮೂರು ಗುಡಿಸಲುಗಳು ಸಂಪೂರ್ಣ ಬಸ್ಮ

ಹೆಬ್ಬೂರು :ಗ್ರಾಮದ ರಾಮೇನಹಳ್ಳಿ ರಸ್ತೆ ಬಳಿಯಲ್ಲಿದ್ದ ಗುಡಿಸಲುಗಳಿಗೆ ಬೆಂಕಿ ಬಿದ್ದಿರುವ ಘಟನೆ ಭಾನುವಾರ ಸಂಜೆ ನಡೆದಿದೆ.
ರಾಮೇನಹಳ್ಳಿ ರಸ್ತೆ ಬದಿಯಲ್ಲಿ ಸುಮಾರು 40 ವರ್ಷಗಳಿಂದ ವಾಸವಾಗಿದ್ದ ಅಲೆಮಾರಿ ಹಕ್ಕಿ ಪಿಕ್ಕರ ಸಮುದಾಯದ ಐದು ಕುಟುಂಬದ ಗುಡಿಸಲುಗಳಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು, ಗುಡಿಸಲಿನಲ್ಲಿದ್ದ ಸಿಲಿಂಡರ್ ಸಿಡಿದು, ಅದರ ಕೆನ್ನಾಲಿಗೆ ಪಕ್ಕದ ಗುಡಿಸಲುಗಳಿಗೂ ಆವರಿಸಿ ಮೂರು ಗುಡಿಸಲುಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿವೆ.
ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಕುಟುಂಬದ 8 ಮಕ್ಕಳು 16 ಮಂದಿ ಕೂಲಿ ಕಾರ್ಮಿಕರ ಜೀವನ ಬೀದಿಗೆ ಬಿದ್ದಂತಾಗಿದೆ.
ಅನ್ನಭಾಗ್ಯ ಯೋಜನೆಯಡಿ ಸಂಗ್ರಹಿಸಿದ್ದ 150 ಕೆಜಿಗೂ ಹೆಚ್ಚು ಅಕ್ಕಿ , ಕೂಲಿ ಮಾಡಿ ಸಂಗ್ರಹಿಸಿ ಇಟ್ಟಿದ್ದ ಒಂದು ಕುಟುಂಬದ 10000 ಹಣ, ಮತ್ತೊಂದು ಕುಟುಂಬದ 15 ಸಾವಿರ ನಗದು ಹಣ, ಓಲೆ,ಕಾಲುಂಗುರ,ಸರ, ಸೇರಿದಂತೆ ಸುಮಾರು 25 ಗ್ರಾಂ ಗೂ ಹೆಚ್ಚು ಒಡವೆಗಳು, ಮಕ್ಕಳ ವಿದ್ಯಾಬ್ಯಾಸದ ಪುಸ್ತಕಗಳು ಸುಟ್ಟು ಕರಕಲಾಗಿವೆ.
ಅಲ್ಲಿನ ಅಕ್ಕಪಕ್ಕದಲ್ಲಿದ್ದವರು ಕೂಡಲೇ ಧಾವಿಸಿ ಯಾವುದೇ ಪ್ರಾಣಪಾಯವಾಗದಂತೆ ಪಾರು ಮಾಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಗ್ರಾಮಾಂತರ ಶಾಸಕ ಸುರೇಶ್ ಗೌಡ ಸ್ಥಳಕ್ಕೆ ಆಗಮಿಸಿ,ಕುಟುಂಬದವರಿಗೆ ಸಾತ್ವಾಂನ ಹೇಳಿ ಒಂದೊಂದು ಕುಟುಂಬದವರಿಗೆ ವೈಯಕ್ತಿಕವಾಗಿ ತಲಾ ಹತ್ತು ಸಾವಿರ ನಗದು ಹಣ ನೀಡಿ, ಸರ್ಕಾರದ ವತಿಯಿಂದ ವಸತಿ ಕಲ್ಪಿಸುವ ಭರವಸೆ ನೀಡಿದ್ದಾರೆ.
ಹಾನಿಯಾದ ಕುಟುಂಬದವರಿಗೆ ಗ್ರಾಮ ಪಂಚಾಯತಿಯಿಂದ ಅಂಬೇಡ್ಕರ್ ಭವನದಲ್ಲಿ ತಂಗಲು ತಾತ್ಕಾಲಿಕವಾಗಿ ವಸತಿ ವ್ಯವಸ್ಥೆ ಮಾಡಲಾಗಿದೆ.
ವಿಷಯ ತಿಳಿದರೂ ತಡವಾಗಿ ಬಂದ ಅಗ್ನಿಶಾಮಕದಳದ ಸಿಬ್ಬಂದಿಯ ವಿರುದ್ದ ಗ್ರಾಮಸ್ಥರು ಕೆಂಡಕಾರಿದ್ದಾರೆ.ಹೆಬ್ಬೂರು ಪೋಲೀಸರು ಪ್ರಕರಣ ದಾಖಲಿಸಿದ್ದಾರೆ.