ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಎಸ್ಸಿ,ಎಸ್ಟಿ ಜಂಟಿ ಹೋರಾಟ ಸ್ವಾಗತಾರ್ಹ ಬೆಳವಣಿಗೆ : ಡಾ.ಎಚ್.ಸಿ.ಮಹದೇವಪ್ಪ
ಬೆಂಗಳೂರು : ನ್ಯಾಯಮೂರ್ತಿ ಜಸ್ಟೀಸ್ ನಾಗಮೋಹನ್ ದಾಸ್ ಸಮಿತಿ ನೀಡಿದ ವರದಿಯ ಬಗ್ಗೆ ಮಾಜಿ ಸಚಿವ ಮತ್ತು ಹಿರಿಯ ಕಾಂಗ್ರೆಸ್ ಮುಖಂಡರಾದ ಡಾ.ಎಚ್.ಸಿ.ಮಹದೇವಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಮಾತನಾಡುತ್ತಿದ್ದ ಮಹದೇವಪ್ಪ, ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಜಸ್ಟೀಸ್ ನಾಗಮೋಹನ ದಾಸ್ ಸಮಿತಿ ನೀಡಿದ ವರದಿಯನ್ನು ಜಾರಿ ಗೊಳಿಸುವಂತೆ ಆಗ್ರಹಿಸಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಹೋರಾಟಗಾರರು ಒಟ್ಟಾಗಿ ಹೋರಾಟ ನಡೆಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಹೇಳಿದ್ದಾರೆ.
ಸಂವಿಧಾನಾತ್ಮಕವಾದ ಈ ಹೋರಾಟಕ್ಕೆ ಹಿಂದುಳಿದವರು, ಅತಿ ಹಿಂದುಳಿದವರು ಮತ್ತು ಅಲೆಮಾರಿ ಸಮುದಾಯದ ಜನರು ಪಾಲ್ಗೊಂಡು ಹೋರಾಟದ ಮೂಲಕ ತಮ್ಮ ನ್ಯಾಯಬದ್ಧ ಹಕ್ಕನ್ನು ಪಡೆದುಕೊಳ್ಳಲು ಶ್ರಮಿಸಬೇಕು ಎಂದು ಡಾ.ಎಚ್.ಸಿ.ಮಹದೇವಪ್ಪ ಮನವಿ ಮಾಡಿದ್ದಾರೆ.
ಒಂದೆಡೆ ಕೆಲವು ಸಾಮಾಜಿಕ ನ್ಯಾಯ ವಿರೋಧಿ ಮತ್ತು ಕೆಲ ಪ್ರಬಲ ಜಾತಿಗಳಿಂದ ಮೀಸಲಾತಿ ವಿರೋಧಿ ಕೂಗು ಹೆಚ್ಚುತ್ತಿದ್ದರೂ ಕೂಡಾ ಇನ್ನೊಂದೆಡೆ ಕಡಿಮೆ ಪ್ರಮಾಣದ ಜನರಿಗೆ ಹೆಚ್ಚಿನ ಪ್ರಮಾಣದ ಮೀಸಲಾತಿ ಕೊಡಬೇಕೆಂಬ ಪ್ರಸ್ತಾಪವೂ ಜಾರಿಯಲ್ಲಿದೆ ಎಂದು ಮಹದೇವಪ್ಪ ಹೇಳಿದ್ದಾರೆ. ಹೀಗಿರುವಾಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ನ್ಯಾಯಬದ್ಧವಾಗಿ ಸಲ್ಲಬೇಕಾದ ಹಕ್ಕುಗಳಿಗಾಗಿ ಹೋರಾಟ ನಡೆಸುವುದು ಅಗತ್ಯವಾದ ಸಂಗತಿಯೇ ಎಂದು ಭಾವಿಸುತ್ತೇನೆ ಎಂದು ಡಾ. ಹೆಚ್.ಸಿ.ಮಹದೇವಪ್ಪ ಅಭಿಪ್ರಾಯ ಪಟ್ಟಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಸಂಖ್ಯೆಯನ್ನು ಆಧರಿಸಿ ಮತ್ತು ಸಮನಾತಿ ಮೀಸಲಾತಿ ಹೆಚ್ಚಿಸುವ ಉದ್ದೇಶದಿಂದ ನಾಗಮೋಹನ್ ದಾಸ್ ಸಮಿತಿ ವರದಿಯನ್ನು ಸುಮಾರು ಎರಡು ವರ್ಷದ ಹಿಂದೆ ವರದಿಯನ್ನು ನೀಡಿತ್ತು.