ಮನುಷ್ಯ ಪ್ರತಿನಿತ್ಯ ಗಿಡ ಮರಗಳ ಪರಿಸರದ ಜೊತೆಗಿದ್ದರೆ ಆರೋಗ್ಯ ವೃದ್ದಿ : ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿ
ವೃಕ್ಷ ಮಿತ್ರ ಗೆಳೆಯರ ಬಳಗದಿಂದ ವನಮಹೋತ್ಸವ
ತಿಪಟೂರು : ಮನುಷ್ಯ-ಮನುಷ್ಯ ಮಾತನಾಡುವಂತೆ ನಮ್ಮ ಸುತ್ತಮುತ್ತಲಿರುವ ಗಿಡ ಮರಗಳನ್ನು ನಾವುಗಳು ಪ್ರತಿ ನಿತ್ಯ ಮಾತನಾಡಿಸುತ್ತಾ ಹೋದಂತೆ ಮನುಷ್ಯನ ಆರೋಗ್ಯವು ವೃದ್ದಿಸುತ್ತಾ ಲವಲವಿಕೆಯಿಂದ ಬೆಳೆಯುತ್ತಾನೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿ ತಿಳಿಸಿದರು.
ತಾಲ್ಲೂಕಿನ ಕಸಬಾ ಹೋಬಳಿ ಕೊನೇಹಳ್ಳಿಯ ಮೂರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದಲ್ಲಿ ವೃಕ್ಷಮಿತ್ರ ಗೆಳೆಯರ ಬಳಗ ಹಾಗೂ ಅರಣ್ಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಮತ್ತಿಹಳ್ಳಿ ಇವರ ಸಹಯೋಗದಲ್ಲಿ ವನಮಹೋತ್ಸವ ಕಾರ‍್ಯಕ್ರಮವನ್ನು ನಡೆಸಲಾಯಿತು.
ಗಿಡ ಮರಗಳಿಗೆ ನಮ್ಮಂತೆಯೇ ಮಾತನಾಡುವ ಕ್ರಿಯೆ ಇರುತ್ತದೆ ಅದರಂತೆ ವಿದ್ಯಾರ್ಥಿಗಳು ಪ್ರತಿ ನಿತ್ಯ ಸಸಿಗಳ ಹತ್ತಿರ ನಿಂತು ಗುಣಿ ಮಾಡುವುದು, ನೀರಹಾಯಿಸುವುದು, ಬೆಳೆಯಲು ಗಿಡಕ್ಕೆ ಆಸರೆ ಮಾಡುವ ಕೆಲಸ ಮಾಡಿದರೆ ಗಿಡ ಮತ್ತು ಮನುಷ್ಯ ಜೊತೆ ಉತ್ತಮ ಸಂಬಂಧ ಬೆಳೆಯುತ್ತದೆ ಎಂದರು.
ಗ್ರಾಮ ಪಂಚಾಯಿತಿ ಅದ್ಯಕ್ಷ ಚನ್ನಬಸವಣ್ಣ ಮಾತನಾಡಿ ಪ್ರಕೃತಿಯಲ್ಲಿ ಮಾನವನು ಜೀವನ ಮಾಡಲು ನಮ್ಮ ಸುತ್ತಮುತ್ತಲಿರುವ ಗಿಡಮರಗಳೇ ಕಾರಣವಾಗಿದೆ ಅದರಂತೆ ನಾವುಗಳು ಪ್ರತಿ ವರ್ಷ ನಮ್ಮ ಹೊಲ ಗದ್ದೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗಿಡ ಮರಗಳನ್ನು ನೆಡುವ ಮೂಲಕ ಪ್ರಕೃತಿಯ ಸೌಂದರ್ಯ ಹೆಚ್ಚಿಸಬೇಕು ಎಂದರು,
ವೃಕ್ಷಮಿತ್ರ ಗೆಳೆಯರ ಬಳಗದ ಮುಖ್ಯಸ್ಥ ಸುರೇಶ್ ಟಿಡಿ ಮಾತನಾಡಿ ಕಾಲೇಜು ವಿದ್ಯಾಬ್ಯಾಸ ಮುಗಿದ ನಂತರ ಎಲ್ಲಾ ಗೆಳೆಯರು ಪ್ರತಿ ವರ್ಷ ಒಂದೆಡೆ ಸೇರಬೇಕು ಎಂಬ ಒಂದು ಮಹಾದಾಸೆ ಹಾಗೂ ಪ್ರಕೃತಿಯ ಜೊತೆಯಲ್ಲಿ ಕೆಲಸ ಮಾಡಬೇಕು ಎಂಬ ನಿಟ್ಟಿನಲ್ಲಿ ವೃಕ್ಷಮಿತ್ರ ಎಂಬ ಸಂಘಟನೆಯನ್ನು ಕಟ್ಟಿಕೊಂಡು ಸುಮಾರು ಹನ್ನೊಂದು ವರ್ಷಗಳಿಂದ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಶಾಲೆಗಳಲ್ಲಿ ಇನ್ನೂರಕ್ಕೂ ಹೆಚ್ಚು ಗಿಡಗಳನ್ನು ನೆಡುತ್ತಾ ಬರುತ್ತಿದ್ದು ಅದರ ಪಾಲನೆ-ಪೋಷಣೆಯನ್ನು ಮಾಡುತ್ತಾ ಬರುತ್ತಿದ್ದೇವೆ ಎಂದು ತಿಳಿಸಿದರು.
ಆಯುಷ್ಯ ವೈದ್ಯಾಧಿಕಾರಿ ಸುಮುನಾ ಮಾತಾನಾಡಿ ಭೂಮಿಯ ಮೇಲೆ ಪ್ರತಿಯೊಂದು ಪ್ರಾಣಿ ಹಾಗೂ ಗಿಡಮರಗಳಿಗೆ ತನ್ನದೆ ಭೂಮಿ ಸಂರಕ್ಷಣೆಯಲ್ಲಿ ಹಾಗೂ ಪರಿಸರ ಸಮತೋಲನದಲ್ಲಿ ಅದರದೆ ಆದ ಪಾತ್ರವಿದೆ ಹಾಗಾಗಿ ಗಿಡ ಮರಗಳನ್ನು ನೆಟ್ಟು ಬೆಳಸಬೇಕು ಎಂದರು.
ಕಾರ‍್ಯಕ್ರಮದಲ್ಲಿ ವಲಯ ಅರಣ್ಯಾಧಿಕಾರಿ ಜಗದೀಶ್, ಪಂಚಾಯಿತಿ ಉಪಾದ್ಯಕ್ಷೆ ತೇಜೋವತಿ, ಸದಸ್ಯರಾದ ಪವಿತ್ರ, ಜ್ಯೋತಿ ನಟರಾಜು, ಆಯುಷ್ಯ ವೈದ್ಯಾಧಿಕಾರಿ ಸುಮುನಾ, ಸಮಾಜಸೇವಕ ಶಶಿಧರ್, ಮೂರಾರ್ಜಿ ಶಾಲೆಯ ಪ್ರಾಂಶುಪಾಲರು ರಮೇಶ, ವೃಕ್ಷಮಿತ್ರ ಗೆಳೆಯರ ಬಳಗದ ಸುರೇಶ್, ಸಿದ್ದೇಶ್, ಶಿವರಾಜ್, ಆರಾದ್ಯ, ಸಹನಾ, ಸೌಮ್ಯ, ದಿನೇಶ್, ಅನಿಲ್, ಸತೀಶ್, ಪ್ರದೀಪ್, ಮನೋಹರ್ ಮತ್ತು ಪರಿಸರ ಪ್ರೇಮಿಗಳು ಬಾಗವಹಿಸಿದ್ದು ಇನ್ನೂರಕ್ಕೂ ಹೆಚ್ಚು ಗಿಡಗಳನ್ನು ನೆಡಲಾಯಿತು.