ಸಾಹಿತಿಗಳು ಕನ್ನಡ ಸಾಹಿತ್ಯದ ಬಗ್ಗೆ ಅಧ್ಯಯನ ಮಾಡುವುದು ಅತ್ಯವಶ್ಯಕ : ಪ್ರೊ.ಬರಗೂರು ರಾಮಚಂದ್ರಪ್ಪ
ಶಿರಾ ಕನ್ನಡ ಭವನದಲ್ಲಿ ಒಂದು ದಿನದ ಸಾಹಿತ್ಯ ಶಿಬಿರ

ಶಿರಾ : ಸಾಹಿತಿಗಳು ಕನ್ನಡ ಸಾಹಿತ್ಯದ ಬಗ್ಗೆ ಅಧ್ಯಯನ ಮಾಡುವುದು ಅತ್ಯವಶ್ಯಕ, ಆ ಅಧ್ಯಯನದಲ್ಲಿ ನಾವು ಎಲ್ಲಿದ್ದೇವೆ? ಅದನ್ನು ಮೀರಿ ಮಾಡಬೇಕಾದದ್ದು ಏನು? ಎಂಬುದು ತಿಳಿದಾಗ ಮಾತ್ರ ನಮ್ಮ ಮಿತಿ ಅರ್ಥವಾಗುತ್ತದೆ, ಇಲ್ಲವಾದರೆ ನಾನು ಬರೆದಿದ್ದೇ ಮಹಾಕಾವ್ಯ ಎಂಬ ಭ್ರಮೆಯಲ್ಲಿ ಇರುತ್ತಾರೆ ಎಂದು ನಾಡೋಜ ಪ್ರೋ. ಡಾ.ಬರಗೂರು ರಾಮಚಂದ್ರಪ್ಪ ಹೇಳಿದರು.
ಅವರು ನಗರದ ಕನ್ನಡ ಭವನದಲ್ಲಿ ಶನಿವಾರ ನಾಡೋಜ ಡಾ.ಬರಗೂರು ಪ್ರತಿಷ್ಠಾನ ಹಾಗೂ ಶಿರಾ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದೊಂದಿಗೆ ಏರ್ಪಡಿಸಿದ್ದ ಕನ್ನಡ ಸಾಹಿತ್ಯದ ಪ್ರಮುಖ ಘಟ್ಟಗಳು ಎಂಬ ಒಂದು ದಿನದ ಸಾಹಿತ್ಯ ಶಿಬಿರ ಉದ್ಘಾಟಿಸಿ ಮಾತನಾಡಿದರು. ಕನ್ನಡ ಭಾಷೆ ಉಳಿಸುವುದಕ್ಕಿಂತ ಮೊದಲು ಕನ್ನಡ ಭಾಷೆ ಮಾತನಾಡುವ ಕನ್ನಡಿಗರನ್ನು ಉಳಿಸಬೇಕು. ಕನ್ನಡ ಸಾಹಿತ್ಯದ ಅಧ್ಯಯನದ ಆಸಕ್ತಿಯನ್ನು ಹುಟ್ಟು ಹಾಕುವುದಕ್ಕೆ ಈ ಶಿಬಿರ ಏರ್ಪಡಿಸಲಾಗಿದೆ. ಭಾರತ ದೇಶದಲ್ಲಿ ದೇವರು ಹಾಗೂ ಧರ್ಮದ ಕಾರಣಕ್ಕೆ ಜಗಳವಾಗುತ್ತಿದೆ, ಮೊದಲು ನಾವು ಮನುಷ್ಯರಾಗಿ ಮಾನವೀಯತೆ ಮೌಲ್ಯಧಾರಗಳನ್ನು ಬೆಳೆಸಿಕೊಳ್ಳಬೇಕಾಗಿದೆ. ಆ ಮಾನವೀಯತೆ ಮೌಲ್ಯಧಾರಗಳನ್ನು ತಿಳಿಸಿ ಕೊಡುವುದೇ ಕನ್ನಡ ಸಾಹಿತ್ಯ . ಸೃಷ್ಟಿಯಲ್ಲಿ ಯಾವುದು ವಿಫಲವಲ್ಲ ಎಲ್ಲವೂ ತಮ್ಮದೇ ಆದ ಜೀವಶಕ್ತಿಯಿಂದ ಶ್ರೇಷ್ಠವಾಗಿದೆ. ಅದೇ ರೀತಿ ಮನುಷ್ಯ ಮನುಷ್ಯರಲ್ಲಿ ಅಸಮಾನತೆ ಸಲ್ಲದು. ಪರೀಕ್ಷೆಗಲ್ಲದೆ ಸಾಹಿತಿಗಳು ನಿಜವಾದ ಸಾಹಿತ್ಯ ಅಧ್ಯಯನ ಮಾಡಿದರೆ ಅದು ನಮ್ಮನ್ನು ಮಾನವೀಯರನ್ನಾಗಿ ಮಾಡುತ್ತದೆ, ಒಬ್ಬ ಮನುಷ್ಯನ ಹತ್ಯೆಯಾಗುತ್ತಿದ್ದರೆ ಅಥವಾ ಸಂಕಟಪಡುತ್ತಿದ್ದರೆ ಅವನು ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಎಂಬ ಭಾವನೆ ಬರದೆ ನನಗೇಹತ್ಯೆಯಾಗುತ್ತಿದೆ ಅಥವಾ ಸಂಕಟವಾಗುತ್ತಿದೆ ಎಂಬ ಸಂವೇದನೆ ಉಂಟಾದರೆ ಮಾತ್ರ ಅವನು ಸಾಹಿತಿಯಾಗಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಪ್ರಾಚೀನ ಸಾಹಿತ್ಯ, ಮಧ್ಯಕಾಲೀನ ಸಾಹಿತ್ಯದ ಬಗ್ಗೆ ವಿಚಾರಗೋಷ್ಠಿ ಹಾಗೂ ನವೋದಯ ಮತ್ತು ನವ್ಯ ಸಾಹಿತ್ಯ, ಪ್ರಗತಿಶೀಲ ಮತ್ತು ದಲಿತ-ಬಂಡಾಯ ಸಾಹಿತ್ಯದ ವಿಚಾರಗೋಷ್ಠಿಗಳನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಎಸ್.ನಾಗಣ್ಣ, ನಾಡೋಜ ಬರಗೂರು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ.ಸುಂದರ್ ರಾಜ್ ಅರಸ್, ಸದಸ್ಯ ಡಾ.ಓನಾಗರಾಜು, ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಲಿಂಗಪ್ಪ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ಪಿ.ಪಾಂಡುರಂಗಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರಯ್ಯ, ಬೆಂಗಳೂರು ವಿವಿ ಕನ್ನಡ ಪ್ರಾಧ್ಯಾಪಕರಾದ ಡಾ. ರಾಜಪ್ಪ ದಳವಾಯಿ, ಪ್ರಾಧ್ಯಾಪಕರಾದ ಡಾ.ಗೀತಾ ವಸಂತ್, ಎ.ವಿ.ಲಕ್ಷ್ಮೀನಾರಾಯಣ, ನಾಗಭೂಷಣ್ ಬಗ್ಗನಡು, ಕಸಾಪ ಗೌರವಾಧ್ಯಕ್ಷ ಡಾ.ಪಿ.ಎಚ್.ಮಹೇಂದ್ರಪ್ಪ, ಮಾಜಿ ಅಧ್ಯಕ್ಷ ಡಾ.ಬಿ.ಗೋವಿಂದಪ್ಪ, ಕರವೇ ಮಹಿಳಾ ಅಧ್ಯಕ್ಷೆ ರೇಣುಕಮ್ಮ, ಉಪನ್ಯಾಸಕ ಹೆಂದೊರೆ ಶಿವಣ್ಣ ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.